ದಾವಣಗೆರೆ: ನಿರುದ್ಯೋಗಿ, ಉದ್ಯೋಗಿ ಪದವೀಧರರ ಕ್ಷೇಮಾಭಿವೃದ್ಧಿಗಾಗಿ ದಾವಣಗೆರೆ ಪದವೀಧರರ ಸೌಹಾರ್ದ ಸಹಕಾರಿ ಸಂಘವನ್ನು ಹೊಸದಾಗಿ ಅಸ್ತಿತ್ವಕ್ಕೆ ತರಲಾಗಿದೆ ಎಂದು ಸಂಘದ ಅಧ್ಯಕ್ಷ, ವಕೀಲ ಎಲ್.ಎಚ್.ಅರುಣಕುಮಾರ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದ ಷೇರುದಾರರಾಗಲು 1 ಸಾವಿರ ನಿಗದಿಪಡಿಸಿದ್ದು, ಈಗಾಗಲೇ 600ಕ್ಕೂ ಹೆಚ್ಚು ಮಂದಿ ಸದಸ್ಯತ್ವವನ್ನು ಪಡೆದಿದ್ದಾರೆ ಎಂದರು.
ಸಂಘದ ಸದಸ್ಯರಿಗೆ ಕಡಿಮೆ ಬಡ್ಡಿ ದರದ ಸಾಲ ಸೌಲಭ್ಯದ ಜೊತೆಗೆ ಸದಸ್ಯರ ಸರ್ವತೋಮುಖ ಅಭಿವೃದ್ಧಿಗೆ ಸ್ಪಂದಿಸುವುದು ಸಂಘದ ಪ್ರಮುಖ ಧ್ಯೇಯ. ಜಿಲ್ಲೆಯ ಎಲ್ಲಾ ನಿರುದ್ಯೋಗಿ ಹಾಗೂ ಉದ್ಯೋಗಿ ಪದವೀಧರರಿಗೆ ಸಹಕಾರಿ ತತ್ವದಡಿ ಸಂಘಟನೆ, ಸೌಲ ಸೌಲಭ್ಯ, ವಾರ್ಷಿಕ ಶೇ.13 ಬಡ್ಡಿ ದರದಲ್ಲಿ ಸಾಲ ನೀಡುವುದು, ಗರಿಷ್ಟ 25 ಸಾವಿರ ವರೆಗೆ ಆರ್ಥಿಕ ನೆರವು ನೀಡುವುದು ಸಂಘದ ಚಿಂತನೆಯಾಗಿದೆ ಎಂದು ಅವರು ಹೇಳಿದರು.
ನಿರುದ್ಯೋಗಿ ಪದವೀಧರರಿಗೆ ಉದ್ಯೋಗ ಮಾಹಿತಿ, ಸ್ವಉದ್ಯೋಗಕ್ಕೆ ತರಬೇತಿ ನೀಡುವುದು, ಸದಸ್ಯರು ಹಾಗೂ ಕುಟುಂಬ ವರ್ಗಕ್ಕೆ ವೈದ್ಯಕೀಯ ಸೌಲಭ್ಯ, ಗುಂಪು ವಿಮೆ ಒದಗಿಸುವುದು, ಸಂಘದಿಂದ ಜಿಲ್ಲಾ ಮಟ್ಟದಲ್ಲಿ ಪದವಿ ಕಾಲೇಜುಗಳಲ್ಲಿ ವಿವಿಧ ಸ್ಪರ್ಧೆ, ಸಂವಾದ, ಕಾರ್ಯಾಗಾರ ಏರ್ಪಡಿಸಲಾಗುವುದು. ನಿರುದ್ಯೋಗಿ ಸದಸ್ಯರಿಗೆ ವೃತ್ತಿಪರ ತರಬೇತಿ ನೀಡುವುದೂ ಸೇರಿದಂತೆ ಪದವೀಧರರ ಸಮಸ್ಯೆ ಪರಿಹಾರಕ್ಕೆ ಶ್ರಮಿಸಲಾಗುವುದು ಎಂದರು.
ಸಂಘದ ಪದಾಧಿಕಾರಿಗಳಾದ ನಟರಾಜ, ಕುಮಾರ, ಮುದ್ದುವೀರಸ್ವಾಮಿ, ವಿಜಯಕುಮಾರ ಇದ್ದರು.