ದಾವಣಗೆರೆ: ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಸ್ಥಿರ ಪೀಠಾಧಿಪತಿ ಡಾ. ಮಹಾಂತ ಶಿವಾಚಾರ್ಯ ಸ್ವಾಮೀಜಿಗೆ ಅಭಾವೀ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರವೀಂದ್ರನಾಥ, ವಿಧಾನ ಪರಿಷತ್ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿಸ್ವಾವು, ಮಾಜಿ ಸಚಿವ ಎಸ್ಸೆಸ್ ಮಲ್ಲಿಕಾರ್ಜುನ, ಶಾಸಕರಾದ ಎಸ್.ವಿ. ರಾಮಚಂದ್ರ, ಬಿ.ಪಿ. ಹರೀಶ ತೀವ್ರ ಸಂತಾಪ ಸೂಚಿಸಿದ್ದಾರೆ.
ಪಂಚಮಸಾಲಿ ಪೀಠದ ಸ್ಥಿರ ಪೀಠಾಧಿಪತಿ ಡಾ. ಮಹಾಂತ ಶಿವಾಚಾರ್ಯ ಸ್ವಾಮೀಜಿ ಅಗಲಿಕೆಯಿಂದಾಗಿ ಇಡೀ ವೀರಶೈವ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಡಾ. ಶಾಮನೂರು ಶಿವಶಂಕರಪ್ಪ, ಎಸ್.ಎಸ್. ಮಲ್ಲಿಕಾರ್ಜುನ ಪ್ರಾರ್ಥಿಸಿದ್ದಾರೆ.
ಸ್ವಾಮೀಜಿ ಬಸವ ತತ್ವ ಪ್ರಚಾರದ ಮುಖಾಂತರ ಜಾಗೃತಿ ಮೂಡಿಸುತ್ತಾ ಬಂದಿದ್ದು, ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ತಮ್ಮ ಜೀವನವಿಡೀ ಶ್ರಮಿಸುತ್ತಾ ಬಂದಿದ್ದಾರೆ ಎಂದು ಡಾ. ಶಿವಯೋಗಿಸ್ವಾವು ಪ್ರಾರ್ಥಿಸಿದ್ದಾರೆ.
ಕರುಣಾಕರರೆಡ್ಡಿ ಸಂತಾಪ
ಹರಪನಹಳ್ಳಿ: ಮಹಂತ ಮಹಾಸ್ವಾಮಿಗಳ ನಿಧನಕ್ಕೆ ಶಾಸಕ ಜಿ. ಕರುಣಾಕರರೆಡ್ಡಿ ಸಂತಾಪ ಸೂಚಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿ, ಶ್ರೀಗಳು ಪೀಠಾಧಿಪತಿಯಾಗಿ ಕೆಲವೇ ವರ್ಷಗಳಲ್ಲಿ ಸಮಾಜದ ಅಭಿವೃದ್ಧಿಗೆ ಶ್ರಮಿಸಿದರು, ಅನಾಥ ಮಕ್ಕಳ ಆಶಾಕಿರಣವಾಗಿದ್ದರು. ಅವರ ನಿಧನದಿಂದ ಧಾರ್ಮಿಕವಾಗಿ ಬಹಳಷ್ಟು ನಷ್ಟವಾಗಿದೆ ಎಂದು ಹೇಳಿದ್ದಾರೆ.
ಕೆಪಿಸಿಸಿ ಮಾಜಿ ಸದಸ್ಯ ಸಿ. ಚಂದ್ರಶೇಖರಭಟ್, ಇಡೀ ಮನು ಕುಲಕ್ಕೆ ನಷ್ಟವಾಗಿದೆ ಅನೇಕ ಧಾರ್ಮಿಕ ಚಿಂತನೆಗಳನ್ನು ಹೊಂದಿದ್ದರು, ಅವರ ಅಗಲಿಕೆಯನ್ನು ಭರಿಸುವ ಶಕ್ತಿ ಭಕ್ತರಿಗೆ ಭಗವಂತ ನೀಡಲಿ ಎಂದು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಸಂಸದ ಸಿದ್ದೇಶ್ವರ್
ದಾವಣಗೆರೆ: ಡಾ. ಮಹಾಂತ ಶಿವಾಚಾರ್ಯ ಸ್ವಾಮೀಜಿ ಅಗಲಿಕೆಯಿಂದಾಗಿ ಸಮಾಜಕ್ಕಷ್ಟೇ ಅಲ್ಲ, ರಾಜ್ಯ, ರಾಷ್ಟ್ರಕ್ಕೂ ತುಂಬಲಾರದ ನಷ್ಟವಾಗಿದೆ ಸಂಸದ ಜಿ.ಎಂ. ಸಿದ್ದೇಶ್ವರ ಸಂತಾಪ ಸೂಚಿಸಿದ್ದಾರೆ.
ಪ್ರಖರ ವೈಚಾರಿಕತೆ, ವಿದ್ವತ್ತು ಎರಡನ್ನೂ ಮೈಗೂಡಿಸಿಕೊಂಡಿದ್ದ ಡಾ. ಮಹಾಂತ ಸ್ವಾಮೀಜಿ ಈ ಕಾರಣಕ್ಕಾಗಿ ಇತರರಿಗಿಂತ ಭಿನ್ನವಾಗಿ ನಿಲ್ಲುತ್ತಾರೆ ಎಂದು ತಿಳಿಸಿದ್ದಾರೆ.
ಲಿಂಗೈಕ್ಯ ಗುರುಗಳ ಇಚ್ಛೆಯಂತೆ ಹರಿಹರ ಸಮೀಪ ಪಂಚಮಸಾಲಿ ಪೀಠದ ನಿರ್ಮಾಣ ಕಾರ್ಯವನ್ನು ಸಮರೋಪಾದಿಯಲ್ಲಿ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಗುರುಗಳ ಇಚ್ಛೆಯಂತೆ ಸಮಾಜ ಸಂಘಟಿತವಾಗಿ ದೊಡ್ಡ ಶಕ್ತಿಯಾಗಬೇಕು. ಗುರುಗಳ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಅಸಂಖ್ಯಾತ ಸಮಾಜ ಬಾಂಧವರಿಗೆ ಭಗವಂತನು ನೀಡಲಿ ಎಂದು ಸಿದ್ದೇಶ್ವರ್ ಪ್ರಾರ್ಥಿಸಿದ್ದಾರೆ.
ತರಳಬಾಳು ಶ್ರೀ
ಸಿರಿಗೆರೆ: ಹರಿಹರದ ವೀರಶೈವ ಪಂಚಮಸಾಲಿ ಪೀಠದ ಜಗದ್ಗುರು ಡಾ. ಮಹಾಂತ ಸ್ವಾಮೀಜಿಯವರ ನಿಧನಕ್ಕೆ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮಿ ಸಂತಾಪ ಸೂಚಿಸಿದ್ದಾರೆ.
ಪಂಚಮಸಾಲಿ ಪೀಠದ ಸ್ವಾಮೀಜಿಗಳಾಗಿ ಅವರು ಪೀಠಸ್ಥರಾದ ನಂತರ ಸಮಾಜವನ್ನು ಒಗ್ಗೂಡಿಸುವಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ್ದರು. ಸರಳತೆ, ಸಮಾಜವನ್ನು ಮುನ್ನಡೆಸುವಲ್ಲಿ ಅವರಿಗಿದ್ದ ಕಳಕಳಿಯಿಂದ ಜನಾನುರಾಗಿಯಾಗಿದ್ದರು. ಅವರು ಲಿಂಗೈಕ್ಯರಾಗಿರುವುದು ಅತೀವ ನೋವು ಉಂಟುಮಾಡಿದೆ ಎಂದು ತರಳಬಾಳು ಶ್ರೀ ತಿಳಿಸಿದ್ದಾರೆ.
ಕಾರು ಅಪಘಾತದಿಂದ ಇತ್ತೀಚೆಗಷ್ಟೆ ಪಾರಾಗಿದ್ದ ಪಂಚಮಸಾಲಿ ಶ್ರೀರನ್ನು ದೂರವಾಣಿ ಮೂಲಕ ಮಾತನಾಡಿಸಿದ್ದೆವು. ಆಗ ವೀರಶೈವ ಸಮಾಜದ ಅಭಿವೃದ್ಧಿ ಕುರಿತು ಅವರು ಕುಶಲದಿಂದ ಮಾತನಾಡಿದ್ದನ್ನು ನೆನಪಿಸಿಕೊಂಡರು.
ಪಂಡಿತಾರಾಧ್ಯ ಶ್ರೀ
ನಾಲ್ಕು ವರ್ಷಗಳ ಹಿಂದೆ ನೂತನ ಹರಿಹರದ ಪಂಚಮಸಾಲಿ ಪೀಠದ ಪೀಠಾಧಿಪತಿಗಳಾಗಿ ಅಧಿಕಾರ ಸ್ವೀಕರಿಸಿದ್ದ ಡಾ. ಮಹಂತ ಸ್ವಾಮಿಗಳು ಮೌನವಾಗಿ ಸಮಾಜ ಕಟ್ಟುವ ಕೆಲಸ ಮಾಡುತ್ತಿದ್ದರು. ಬೇರೆ ಬೇರೆ ಶಾಖೆಗಳಲ್ಲಿ ಸೇವೆ ಸಲ್ಲಿಸಿದ್ದ ಪೂಜ್ಯರ ಅನುಭವ, ಜ್ಞಾನ, ತಾಳ್ಮೆ, ಪ್ರೀತಿ ಅನುಕರಣೀಯವಾದುದು ಎಂದು ತಿಳಿಸಿದ್ದಾರೆ.