ದಾವಣಗೆರೆ: ಬೇಸಿಗೆ ಬೆಳೆಗಾಗಿ 90 ದಿನಗಳ ಕಾಲ ಭದ್ರಾ ನಾಲೆಯಲ್ಲಿ ನೀರು ಬಿಟ್ಟರೂ ತಾಲೂಕಿನ ಕೈದಾಳೆ, ಗಿರಿಯಾಪುರ, ಕಲ್ಕೆರೆ ಇತರೆ ಭಾಗಕ್ಕೆ ನೀರು ಸಮರ್ಪಕವಾಗಿ ಬಾರದ್ದರಿಂದ ಹಿರೆತೊಗಲೇರಿ ಗ್ರಾಮದ ಬಳಿ 7ನೇ ವಲಯದ ನಾಲೆ ಬಳಿ ರೈತ ಸಂಘದ ನೇತೃತ್ವದಲ್ಲಿ ಅಚ್ಚುಕಟ್ಟು ರೈತರು ಬುಧವಾರ ದಿಢೀರ್ ಪ್ರತಿಭಟನೆ ನಡೆಸಿದರು.
ತಾಲೂಕಿನ ಚಿಕ್ಕತೊಗಲೇರಿ ಗ್ರಾಮದ ಬಳಿ ಭದ್ರಾ ನಾಲೆ ವಲಯ 7ರ ಮುಖ್ಯ ಕಾಲುವೆ ಬಳಿ ಕೈದಾಳೆ, ಕಲ್ಕೆರೆ, ಗಿರಿಯಾ ಪುರ, ಯರನಾಗತಿಹಳ್ಳಿ, ಕೈದಾಳೆ ಕ್ಯಾಂಪ್, ವೈ.ಎನ್. ಕ್ಯಾಂಪ್, ಕೋಲ್ಕುಂಟೆ ಸೇರಿದಂತೆ ಭದ್ರಾ ಅಚ್ಚುಕಟ್ಟು ಅಚ್ಚುಕಟ್ಟುದಾರರು ಪ್ರತಿಭಟನೆ ನಡೆಸಿ, ನೀರಾವರಿ ಇಲಾಖೆ ಘೋಷಣೆ ಕೂಗಿದರು.
ರೈತರ ಹಿತ ಬಲಿ: ಇದೇ ವೇಳೆ ಮಾತನಾಡಿದ ರೈತ ಮುಖಂಡ ಕೈದಾಳೆ ರವಿಕುಮಾರ, ಭದ್ರಾ ನಾಲೆಯಲ್ಲಿ ಸಮರ್ಪಕ ನೀರು ಪೂರೈಸಲು ನೀರಾವರಿ ಇಲಾಖೆ ಇಇ ಮನವಿ ಮಾಡಿದರೂ, ಕಿವಿಗೊಡುತ್ತಿಲ್ಲ. ರೈತರ ಹಿತ ಕಾಯಬೇಕಾದ ಅಧಿಕಾರಿಗಳೇ ಬಂಡವಾಳ ಶಾಹಿಗಳಿಗೆ ಅಗತ್ಯ ನೀರು ಪೂರೈಸಲು ಅಚ್ಚುಕಟ್ಟು ರೈತರ ಹಿತ ಬಲಿ ಕೊಡುವ ದುಸ್ಸಾಹಸಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.
ನಿಗದಿಗಿಂತಲೂ 3 ಅಡಿ ಕಡಿಮೆ ನೀರು: ಸಿಎಂ ಬಳಿ ರೈತ ಸಂಘದ ನಿಯೋಗ ಹೋಗಿ, ಭದ್ರಾ ನಾಲೆಯಲ್ಲಿ ಬೇಸಿಗೆ ಬೆಳೆಗಾಗಿ 90 ದಿನಗಳ ಕಾಲ ನಿರಂತರ ನೀರು ಬಿಡಲು ಆದೇಶ ಮಾಡಿಸಿದ್ದರೂ ನೀರಾವರಿ ಇಲಾಖೆಗೆ ಅದರ ಪರಿವೆ ಇಲ್ಲ. ನಾಲೆಯಲ್ಲಿ 96 ದಿನಗಳ ಕಾಲ 3 ಸಾವಿರ ಕ್ಯೂಸೆಕ್ಸ್ ನೀರನ್ನು ಬೇಸಿಗೆ ಬೆಳೆಗೆ ಬಿಡಬೇಕು. ನಾಲೆಯಲ್ಲಿ ನಿಗದಿಗಿಂತಲೂ 3 ಅಡಿ ನೀರು ಕಡಿಮೆ ಹರಿಯುತ್ತಿದೆ ಎಂದು ಅವರು ದೂರಿದರು.
ಜ.26ರಿಂದ ನಾಲೆಯಲ್ಲಿ ನೀರು ಬಿಟ್ಟಿದ್ದು, 10- 12 ದಿನಗಳಲ್ಲಿ 1500 ಕ್ಯೂಸೆಕ್ಸ್ ನೀರು ಬಿಟ್ಟಿದ್ದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ನಾಲೆಯಲ್ಲಿ ಅಕ್ರಮ ಪಂಪ್ಸೆಟ್ ಇರುವುದೂ ಅಸಮರ್ಪಕ ನೀರು ಪೂರೈಕೆಗೆ ಕಾರಣ ಎಂಬುದಾಗಿ ಅಧಿಕಾರಿಗಳು ಹೇಳುತ್ತಾರೆ. ಆದರೆ, ನಾವು ಪರಿಶೀಲಿಸಿದಂತೆ ಅಕ್ರಮ ಪಂಪ್ಸೆಟ್ ಹಾವಳಿ ಇಲ್ಲ. ಯಾರದೋ ಹಿತ ಕಾಯಲು ಅಧಿಕಾರಿಗಳು ಸುಳ್ಳು ಕಥೆ ಹೆಣೆಯುತ್ತಿದ್ದಾರೆ ಎಂದು ಅವರು ತಿಳಿಸಿದರು.
ನೀರು ತಲುಪುತ್ತಿಲ್ಲ: ಈವರೆಗೆ ದಾವಣಗೆರೆ, ಹರಿಹರ ತಾಲೂಕಿನ ಅಚ್ಚುಕಟ್ಟು ಪ್ರದೇಶ, ಮಲೆಬೆನ್ನೂರು ಉಪ ವಿಭಾಗಕ್ಕೂ ಸಹ ಸರಿಯಾಗಿ ನೀರು ತಲುಪಿಲ್ಲ. ನಾಲೆ ಮುಖ್ಯ ಪ್ರದೇಶಕ್ಕೆ ನೀರು ಬಂದಿಲ್ಲವೆಂದರೆ, ಅಚ್ಚುಕಟ್ಟು ಕೊನೆಯ ಭಾಗಕ್ಕೆ ನೀರು ತಲುಪಿಲ್ಲವೆಂದೇ ಅರ್ಥ. ತೊಗಲೇರಿ ಸಮೀಪದ 7ನೇ ವಲಯದ ಮುಖ್ಯ ನಾಲೆಯಲ್ಲಿ 3 ಅಡಿ ನೀರು ಕಡಿಮೆ ಹರಿಯುತ್ತಿದೆ. ಹೀಗಾದರೆ ಕೈದಾಳ್ ಭಾಗದ 13 ಕಿ.ಮೀ. ನಾಲೆಗೆ ನೀರು ಹೇಗೆ ತಲುಪಲು ಸಾಧ್ಯ ಎಂಬುದಕ್ಕೆ ನೀರಾವರಿ ಇಲಾಖೆ ಉತ್ತರಿಸಲಿ ಎಂದು ಅವರು ಹೇಳಿದರು.
ಯರವನಾಗತಿಹಳ್ಳಿ ಮಂಜಣ್ಣ ಮಾತನಾಡಿ, ದಾವಣಗೆರೆಗೆ ನೀರಾವರಿ ಇಲಾಖೆಗೆ ಫೆ.7ರಂದು ತೆರಳಿ ಸಮರ್ಪಕ ನೀರಿಗಾಗಿ ಒತ್ತಾಯಿಸುತ್ತೇವೆ. ಮನವಿಗೆ ಸ್ಪಂದಿಸದಿದ್ದರೆ, ಬೀದಿಗಿಳಿದು ಹೋರಾಡುವ ಅನಿವಾರ್ಯ ಸ್ಥಿತಿ ಬಂದೀತು. ಕಾಡಾ ಸಭೆಗೆ ಹಾಜರಾಗುವ ಅಧಿಕಾರಿಗಳು ಅಚ್ಚುಕಟ್ಟು ರೈತರ ಹೆಸರಿನಲ್ಲಿ ಯಾರಿಗೆ ನೀರು ಕೊಡಲು ಚರ್ಚಿಸುತ್ತಾರೆ ಎಂದು ಪ್ರಶ್ನಿಸಿದರು.
ಸ್ಥಳಕ್ಕೆ ಧಾವಿಸಿದ ನೀರಾವರಿ ಇಲಾಖೆ ಜೆಇ ಭರವಸೆ ಮೇರೆಗೆ ರೈತರು ತಾತ್ಕಾಲಿಕವಾಗಿ ಹೋರಾಟ ಕೈಬಿಟ್ಟರು. ಅಚ್ಚುಕಟ್ಟು ರೈತರಾದ ವೈ.ಎನ್. ಕ್ಯಾಂಪ್ ಬಾಲಾಜಿ, ಕಲ್ಕೆರೆ ಮಂಜಣ್ಣ, ಕೈದಾಳ ಬಸವರಾಜಪ್ಪ, ಬಸವರಾಜಪ್ಪ, ಕೈದಾಳ್ ಪಿ.ಜಿ. ಮಲ್ಲಿಕಾರ್ಜುನ, ವೈ.ಆರ್. ಮಲ್ಲಿಕಾರ್ಜುನ, ಯಡರಹಳ್ಳಿ ಮಲ್ಲಿಕಾರ್ಜುನ, ಸಂತೋಷ, ಚಂದ್ರಣ್ಣ, ಅಂಜಿನಪ್ಪ ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.
ಉಪ ನಾಲೆಗೆ ನೀರು ಬಿಟ್ಟ ರೈತರು
ದಾವಣಗೆರೆ: ಕಾಡಾ ಸಮಿತಿ ನಿರ್ಧಾರದಂತೆ ಭದ್ರಾ ಮುಖ್ಯ ನಾಲೆಯ ಉಪ ಕಾಲುವೆಗಳಿಗೆ ನೀರಾವರಿ ಇಲಾಖೆ ಸಮರ್ಪಕವಾಗಿ ನೀರು ಪೂರೈಸದ ಹಿನ್ನೆಲೆಯಲ್ಲಿ ಹಿರೆತೊಗಲೇರಿ ಬಳಿ ಬಲ ದಂಡೆ ನಾಲೆ 7ನೇ ವಲಯದ ಬಳಿ ಕೈದಾಳೆ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಮುಖ್ಯ ಕಾಲುವೆ, ಉಪ ಕಾಲುವೆ ಮಧ್ಯೆ ಅಳಡಿಸಿದ್ದ ಗೇಟ್ ತೆಗೆದು ತಮ್ಮ ಭಾಗಕ್ಕೆ ನೀರು ಹರಿಯುವಂತೆ
ಮಾಡಿದರು.
ಬೇಸಿಗೆ ಬೆಳೆಗೆ ಭದ್ರಾ ನಾಲೆಯಲ್ಲಿ ಜ.26ರಿಂದ ಒಟ್ಟು 96 ದಿನ ನೀರು ಬಿಡಬೇಕು. ಅದರಲ್ಲಿ 41 ದಿನ ಸತತ ನೀರು ಹರಿಸುವುದು, 7ನೇ ದಿನ ಬಂದ್ ಮಾಡಿ, ಮತ್ತೆ 30 ದಿನ ನೀರು ಹರಿಸಬೇಕು. ಉಪ ಕಾಲುವೆಗಳಿಗೆ 7- 7 ದಿನಗಳ ಕಾಲ ಸರದಿಯಂತೆ ನೀರು ಹರಿಸುವಂತೆ ಒತ್ತಾಯಿಸಿದರು.
ಆದರೆ, 3 ದಿನಗಳಾದರೂ ನೀರು ತಲುಪಿಲ್ಲ. ಇದನ್ನೆಲ್ಲಾ ನಾಲ್ಕು ದಿನವಾದರೂ ಬಂದಿಲ್ಲ. ನೀರಿನ ಮೇಲೆ ನಮ್ಮ ಹಕ್ಕು ಇದ್ದು, ಅದನ್ನು ಕಳೆದುಕೊಳ್ಳಲು ನಾವು ಸಿದ್ಧರಿಲ್ಲ. ಅಚ್ಚುಕಟ್ಟು ರೈತರು ಜಿಲ್ಲಾಡಳಿತದ ಸೂಚನೆ ಮೇರೆಗೆ ಹೆಚ್ಚು ಬತ್ತವನ್ನೇ ಬೆಳೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ತೆಂಗು, ಅಡಿಕೆಯಂತಹ ಬೆಳೆಗೆ ನೀರು ಬೇಕಾಗಿದೆ. ಪರ್ಯಾಯ ಬೆಳೆ ಬಿತ್ತನೆ ಮಾಡಿದ ಹೊಲಗಳಿಗೆ ನೀರು ಬೇಕಾಗಿದ್ದು, ನೀರಾವರಿ ಇಲಾಖೆಯು ನಮ್ಮ ಮನವಿಗೆ ಸ್ಪಂದಿಸದ್ದರಿಂದ ಅಚ್ಚುಕಟ್ಟು ಉಪ ನಾಲೆಗಳಿಗೆ ನಾವೇ ನೀರು ಬಿಟ್ಟುಕೊಂಡಿದ್ದೇವೆ. ಇಲಾಖೆ ಇಇ ನಮ್ಮ ಮಾತಿಗೆ ಕಿವಿಗೊಡದಿದ್ದರೆ, ನಾವು ಯಾರನ್ನು ಕೇಳಬೇಕು ಎಂಬುದು ರೈತರ ಪ್ರಶ್ನೆಯಾಗಿತ್ತು.