ಹರಪನಹಳ್ಳಿ 371 ಕಲಂ ಗೆ ಸೇರಿಸಿ

Updated on: 

ಹರಪನಹಳ್ಳಿ: ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಯೋಜನೆಯಡಿ ಹರಪನಹಳ್ಳಿ ತಾಲೂಕನ್ನು ಸೇರ್ಪಡೆ ಮಾಡಬೇಕು ಎಂದು ವಿಧಾನಸಭೆಯ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ್ದು, ಈ ಕುರಿತು ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ರಾಜ್ಯ ಸರ್ಕಾರಕ್ಕೆ  ಮನವಿ ಮಾಡಿದ್ದೇನೆ ಎಂದು ಶಾಸಕ ಜಿ. ಕರುಣಾಕರ ರೆಡ್ಡಿ ತಿಳಿಸಿದ್ದಾರೆ. ಅವರು ಈ ಕುರಿತು ಗುರುವಾರ ಹೇಳಿಕೆ ನೀಡಿದ್ದು, ಈ ಹಿಂದೆ ಹರಪನಹಳ್ಳಿ ತಾಲೂಕು ಬಳ್ಳಾರಿ ಜಿಲ್ಲೆಯಲ್ಲಿತ್ತು,  ತದನಂತರ ದಾವಣಗೆರೆ ಜಿಲ್ಲೆಗೆ ಸೇರಿದ ಮೇಲೂ ಈವರೆಗೂ ಎಚ್.ಕೆ.ಡಿ.ಬಿ. ಸೌಲಭ್ಯ ಪಡೆಯುತ್ತಾ ಬಂದಿದೆ ಎಂದು ಅವರು ತಿಳಿಸಿದರು.  ಈ ವಿಷಯ ಪ್ರಸ್ತಾಪಿಸಿದಾಗ ಸಭಾದ್ಯಕ್ಷರು ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಕೇಂದ್ರ ಸರ್ಕಾರದ ಗಮನ ಸೆಳೆಯಲು ಸೂಚಿಸಿದ್ದಾರೆ ಎಂದು ಅವರು ತಿಳಿಸಿದರು.
ವಿದ್ಯುತ್ ತಂತಿ ತುಂಡು: ಭಯಭೀತಸಾರ್ವಜನಿಕರು
ದಾವಣಗೆರೆ: ವಿದ್ಯುತ್ ಕಂಬದಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಟ್ರಾನ್ಸ್‌ಫಾರ್ಮರ್‌ನಲ್ಲಿ ಭಾರಿ ಸದ್ದು ಕೇಳಿ ಬಂದು, ವಿದ್ಯುತ್ ತಂತಿ ತುಂಡಾಗಿ ಬಿದ್ದುದರಿಂದ ಸಾರ್ವಜನಿಕರು ತೀವ್ರ ಭಯ ಭೀತರಾದ ಘಟನೆ ನಗರದ ನಿಟುವಳ್ಳಿ ಹೊಸ ಬಡಾವಣೆಯ ಎಸ್‌ಬಿಎಂ ಶಾಖೆ ಪಕ್ಕದಲ್ಲಿ ಗುರುವಾರ ಬೆಳಿಗ್ಗೆ ಸಂಭವಿಸಿದೆ. ನಗರದ ನಿಟುವಳ್ಳಿ ಹೊಸ ಬಡಾವಣೆ ಎಸ್‌ಬಿಎಂ ಶಾಖೆ ಪಕ್ಕದ ವಿದ್ಯುತ್ ಕಂಬದಲ್ಲಿ ಬೆಳಿಗ್ಗೆ ತಂತಿಯಲ್ಲಿ ಬೆಂಕಿ ಕಾಣಿಸಿ ಕೊಂಡಿದೆ. ಟ್ರಾನ್ಸ್‌ಫಾರ್ಮರ್‌ನಲ್ಲಿ ಬೆಂಕಿ ಹತ್ತಿಕೊಂಡಿದ್ದರಿಂದ ವಿದ್ಯುತ್ ಪ್ರವಹಿಸುತ್ತಿದ್ದ ತಂತಿ ತುಂಡಾಗಿ ನೆಲಕ್ಕೆ ಬಿದ್ದಿತು. ಅದೇ ರಸ್ತೆಯಲ್ಲಿ ಶಾಲೆ- ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿಗಳು ಭಯಭೀತರಾದರು.
4 ಆರೋಪಿಗಳಿಗೆ 6 ತಿಂಗಳ ಜೈಲು, ದಂಡ
ದಾವಣಗೆರೆ: ಸಾರ್ವಜನಿಕ ಪಡಿತರ ವ್ಯವಸ್ಥೆಯಡಿ ವಿತರಿಸಿದ್ದ 240 ಲೀಟರ್ ಸೀಮೆಎಣ್ಣೆಯನ್ನು ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡಲು ಲಾರಿಯಲ್ಲಿ ಸಾಗಿಸುತ್ತಿದ್ದಾಗ ಸೀಮೆಎಣ್ಣೆ ಸಮೇತ ಸಿಕ್ಕಿ ಬಿದ್ದಿದ್ದ ನಾಲ್ವರು ಆರೋಪಿಗಳಿಗೆ 6 ತಿಂಗಳ ಜೈಲು, ತಲಾ 2 ಸಾವಿರ ದಂಡ ವಿಧಿಸಿ ಹರಪನಹಳ್ಳಿ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಹರಪನಹಳ್ಳಿ ತಾ. ಪಿ. ಹನುಮಂತಪ್ಪ, ವಸಂತನಾಯ್ಕ, ಬಾಲಪ್ಪ ಹಾಗೂ ಬಾಷಾಸಾಬ್ ಶಿಕ್ಷೆಗೆ ಗುರಿಯಾದ ಆರೋಪಿಗಳಾಗಿದ್ದಾರೆ. ಶಿರಗಾನಹಳ್ಳಿ ನ್ಯಾಯಬೆಲೆ ಅಂಗಡಿಗೆ ವಿತರಿಸಿದ್ದ 8 ಕ್ಯಾನ್‌ನಲ್ಲಿದ್ದ 240 ಲೀಟರ್ ಸೀಮೆಎಣ್ಣೆಯನ್ನು ಆರೋಪಿಗಳು ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದಾಗ ಹಲವಾಗಲು ಠಾಣೆ ಸಬ್ ಇನ್ಸ್‌ಪೆಕ್ಟರ್ ಎಸ್.ಆರ್. ಗಣಾಚಾರಿ, ಸಿಬ್ಬಂದಿ ದಾಳಿ ಮಾಡಿ, ಬಂಧಿಸಿದ್ದರು. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ದೀಪಕ್ ವಾದ ಮಂಡಿಸಿದ್ದರು.
ಅಪಘಾತ:ವ್ಯಕ್ತಿ ಸಾವು
ಹೊನ್ನಾಳಿ: ತುಂಗಭದ್ರ ನದಿಯಲ್ಲಿ ಸ್ನಾನ ಮಾಡಲು ಸೈಕಲ್ ಮೇಲೆ ಹೊರಟಿದ್ದ ವ್ಯಕ್ತಿ ಅಪಘಾತದಲ್ಲಿ ಮೃತಪಟ್ಟ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ. ತಾ. ಮಲ್ಲಿಗೇನಹಳ್ಳಿಯ ಹನುಮಂತಪ್ಪ (45) ಮಧ್ಯಾಹ್ನ ಸ್ನಾನ ಮಾಡಲು ನದಿಗೆ ಸೈಕಲ್‌ನಲ್ಲಿ ಹೋಗುತ್ತಿದ್ದಾಗ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಆತನ ತಲೆಯ ಮೇಲೆ ಹರಿದ ಕಾರಣ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಸಾವು: ಕೊಲೆ ಶಂಕೆ
ದಾವಣಗೆರೆ: ಕೌಟುಂಬಿಕ ಕಲಹದಿಂದ ಬೇಸತ್ತ ವಿವಾಹಿತೆಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ  ಘಟನೆ ಇಲ್ಲಿನ ವಿನೋಬ ನಗರದಲ್ಲಿ ನಡೆದಿದ್ದು, ಅದು ಕೊಲೆ ಎಂಬುದಾಗಿ ಮೃತರ ಪಾಲಕರು ಅನುಮಾನ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com