ಹರಪನಹಳ್ಳಿ: ಕಲುಷಿತಗೊಂಡ ರಾಜಕೀಯ ವ್ಯವಸ್ಥೆಯಲ್ಲಿ ಪ್ರಜಾಪ್ರಭುತ್ವ ದುರ್ಬಲವಾಗಿದ್ದು, ಅದರ ರಕ್ಷಣೆಗೆ ಎಲ್ಲರೂ ಸ್ವಯಂ ಪ್ರೇರಿತರಾಗಿ ತೊಡಗಿಸಿಕೊಳ್ಳಬೇಕು ಎಂದು ಗದಗ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ದಲಿಂಗ ಶ್ರೀಗಳು ಹೇಳಿದರು.
ದಿವಂಗತ ಎಂ.ಪಿ.ಪ್ರಕಾಶ ಅವರ 2 ವರ್ಷದ ಪುಣ್ಯ ಸ್ಮರಣೆ ನಿಮಿತ್ತ ಹರಪನಹಳ್ಳಿಯ ಕಲಾಭಾರತಿ, ಹಡಗಲಿಯ ರಂಗಭಾರತಿ, ಗದಗ ಜಿಲ್ಲೆಯ ಮ.ಮ. ಪಾಟೀಲ್ ಪ್ರತಿಷ್ಠಾನ ಹಾಗೂ ಲಿಂಗಾಯತ ಅಧ್ಯಯನ ಸಂಸ್ಥೆ ಹಾಗೂ ಹಡಗಲಿಯ ಎಂ.ಪಿ. ಪ್ರಕಾಶ ಪ್ರತಿಷ್ಠಾನ ಅವರ ಸಹಯೋಗದಲ್ಲಿ ಸ್ಥಳೀಯ ಎಡಿಬಿ ಕಾಲೇಜಿನ ಆವರಣದ ಶನಿವಾರ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಕ್ರಿಯಾಶೀಲತೆ ಅಗತ್ಯ: ಆಡಳಿತದ ಚುಕ್ಕಾಣಿ ಹಿಡಿದ ಆನೆಯು ಮದವೇರಿದಾಗ ಅದನ್ನು ನಿಗ್ರಹಿಸಲು ವಿರೋಧ ಪಕ್ಷ, ಮಾಧ್ಯಮಗಳು ಕ್ರಿಯಾಶೀಲವಾಗಿರಬೇಕು. ಅಂತಹ ವಿರೋಧ ಪಕ್ಷಗಳು ಕೆಲವೊಮ್ಮೆ ದಾರಿ ತಪ್ಪುತ್ತವೆ. ಎಂದ ಅವರು ಪ್ರಜಾಪ್ರಭುತ್ವ ವ್ಯವಸ್ಥೆ ದುರ್ಬಲವಾಗುತ್ತಿದೆ. ಅದನ್ನು ಸರಿಪಡಿಸಲು ಸ್ವಯಂ ಪ್ರೇರಿತರಾಗಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ರಂಗ ನಿರ್ದೇಶಕ ಬಿ. ಚಂದ್ರೆಗೌಡ ಮಾತನಾಡಿ, ರಾಜಕಾರಣದಲ್ಲಿ ಸಮಾಜವಾದಿ ಹಿನ್ನೆಲೆಯ ನಾಯಕರು ಅಪರೂಪ. ಪುಸ್ತಕ ಓದುವುದರ ಕಡೆಗೆ, ಸಾಹಿತ್ಯ ,ಸಂಸ್ಕೃತಿಯ ಕಡೆಗೆ ಹೆಚ್ಚಿನ ಗಮನ ಹರಿಸಿದ್ದ ದಿವಂಗತ ಎಂ.ಪಿ. ಪ್ರಕಾಶ ಅವರಂತಹ ಮತ್ತೊಬ್ಬ ರಾಜಕಾರಣಿ ಇಂದಿನ ರಾಜಕಾರಣದಲ್ಲಿ ಸಿಗುವುದಿಲ್ಲ ಎಂದರು.
ಪ್ರಶಸ್ತಿ ಪ್ರದಾನ: ಇದೇ ಸಂದರ್ಭದಲ್ಲಿ ಗದಗ ಜಿಲ್ಲೆಯ ಮ.ಮ. ಪಾಟೀಲ್ ಪ್ರತಿಷ್ಠಾನ ಹಾಗೂ ಲಿಂಗಾಯತ ಅಧ್ಯಯನ ಸಂಸ್ಥೆಯಿಂದ ಬುರ್ರಾಕಥಾ ಕಲಾವಿದೆ ನಾಡೋಜ ದರೋಜಿ ಈರಮ್ಮ ಅವರಿಗೆ ಎಂ.ಪಿ. ಕೊಟ್ರಗೌಡ ಕಲಾರಾಧಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ದರೋಜಿ ಈರಮ್ಮ ಸಂಗಡಿಗರ ಬುರ್ರಾಕಥಾ ಪ್ರಸಂಗ ಹಾಗೂ ಅಂಚೆ ಗೆಳೆಯರ ರಾಜಾಶ್ರಯ ನಾಟಕ ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆ ಗಳಿಸಿದವು.
ಎಂ.ಪಿ. ಪ್ರಕಾಶ ಅವರ ಪುತ್ರ ಎಂ.ಪಿ. ರವೀಂದ್ರ, ಎಂ.ಪಿ. ಸುಮಾ, ಎಂ.ಪಿ. ಪ್ರಕಾಶ ಪ್ರತಿಷ್ಠಾನದ ಕಾರ್ಯದರ್ಶಿ ಶಾಂತಮೂರ್ತಿ ಕುಲಕರ್ಣಿ, ಎಂ.ಎಂ. ಶಿವಪ್ರಕಾಶ, ಮಂಜುನಾಥ, ಮಾಜಿ ಶಾಸಕ ಪಿ.ಟಿ. ಪರಮೇಶ್ವರನಾಯ್ಕ, ಜಗಳೂರು ಕಾಂಗ್ರೆಸ್ ಮುಖಂಡ ಎಚ್.ಪಿ. ರಾಜೇಶ, ಐಗೋಳ ಚಿದಾನಂದ, ಟಿಎಚ್. ಎಂ. ವೀರೂಪಾಕ್ಷಯ್ಯ, ಎಂ.ವಿ. ಅಂಜಿನಪ್ಪ, ಕೋಡಿಹಳ್ಳಿ ಭೀಮಪ್ಪ, ಹಲಗೇರಿ ಮಂಜಪ್ಪ, ಮೈದೂರು ಒ. ರಾಮಣ್ಣ, ರಾಮನಗೌಡ, ಕಲಾಭಾರತಿ ಅಧ್ಯಕ್ಷ ರಿಯಾಜ್, ಕಣಿವಿಹಳ್ಳಿ ವಛುಂಜುನಾಥ, ಜಮೀರ್, ಶಶಿ ಉಪಸ್ಥಿತರಿದ್ದರು.