ದಾವಣಗೆರೆ: ಸೆಟ್ ಡೆಮ್ ಸಂಸ್ಥೆ ದಶಮಾನೋತ್ಸವ ಅಂಗವಾಗಿ ಫೆ.14ರಿಂದ ಎರಡು ದಿನಗಳ ಕಾಲ ವಿವಿಧ ಕಾರ್ಯಕ್ರಮ ಹಾಗೂ ದಾವಿವಿ ಮಟ್ಟದ ವಾಯ್ಸ್ ಆಫ್ ಯೂನಿವರ್ಸಿಟಿ ನಗರದ ಬಾಪೂಜಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮ ಸಂಚಾಲಕಿ ಎ.ವಿ. ಗೌರಿ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೆ.ಎಚ್. ಪಟೇಲ್ ಕಾಲೇಜಿನ ಮಾತೃಸಂಸ್ಥೆಯಾದ ಸೆಟ್ ಡೆಮ್ನ ದಶಮಾನೋತ್ಸವ ಅಂಗವಾಗಿ ಎರಡು ದಿನದ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದರು.
ಪ್ರಶಸ್ತಿ ಪ್ರದಾನ; ಕಲಾವಿದ ಪ್ರಹ್ಲಾದ ಎಸ್. ಭಟ್ ಮಾರ್ಗದರ್ಶನದಲ್ಲಿ ಫೆ.14ರಂದು ಬೆಳಿಗ್ಗೆ 10.30ಕ್ಕೆ ದಾವಿವಿ ಮಟ್ಟದ ವಾಯ್ಸ್ ಆಫ್ ಯೂನಿವರ್ಸಿಟಿ ಸಂಗೀತ ಸ್ಪರ್ಧೆ ನಡೆಯಲಿದೆ. ಅದೇ ಸಂಜೆ 4ಕ್ಕೆ ದಶಮಾನೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮಾಜಿ ಶಾಸಕ ಮಹಿಮ ಜೆ. ಪಟೇಲ್ ಉದ್ಘಾಟಿಸುವರು. ಸಾಲು ಮರದ ತಿಮ್ಮಕ್ಕನವರಿಗೆ ಸಮಾಜವಾದಿ ಜೆ.ಎಚ್. ಪಟೇಲ್ ಸೇವಾ ಸಮ್ಮಾನ ಪ್ರಶಸ್ತಿ ನೀಡಿ ಗೌರವಿಸುವುದಾಗಿ ಹೇಳಿದರು.
ಫೆ.15ರ ಮಧ್ಯಾಹ್ನ 2ಕ್ಕೆ ಜಾನಪದ ನೃತ್ಯೋತ್ಸವದಲ್ಲಿ ಹರಿಹರದ ಸಂಕರ್ಷಣಾ ನೃತ್ಯ ಶಾಲೆಗೆ ಜಾನಪದ ನೃತ್ಯ ಸಿರಿ ಪ್ರಶಸ್ತಿ ನೀಡಲಾಗುವುದು. ಸಂಜೆ 4.30ಕ್ಕೆ ಸಂಸ್ಥೆಯ ಮಾಗಾನಹಳ್ಳಿ ಬಿ.ಕೆ. ಮಂಜುನಾಥ ಅಧ್ಯಕ್ಷತೆಯ ಸಮಾರೋಪದಲ್ಲಿ ಹಿರಿಯ ಕಾನೂನುತಜ್ಞ ಪ್ರೊ.ಎಸ್.ಎಚ್. ಪಟೇಲ್ ಸಮಾರೋಪ ನಡೆಯಲಿದೆ.
ಬೆಂಗಳೂರಿನ ಸುಮಂಗಲಿ ಸೇವಾಶ್ರಮದ ಎಸ್.ಜಿ. ಸುಶೀಲಮ್ಮ, ರಾಜ್ಯ ವಿಜ್ಞಾನ ಪರಿಷತ್ ಅಧ್ಯಕ್ಷ ಡಾ. ಎಚ್.ಎಸ್. ನಿರಂಜನಾರಾಧ್ಯರಿಗೆ ಸಮಾಜವಾದಿ ಜೆ.ಎಚ್. ಪಟೇಲ್ ಸೇವಾ ಸಮ್ಮಾನ್ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸಂಚಾಲಕಿ ಗೌರಿ ಮಾಹಿತಿ ನೀಡಿದರು.
ಸಂಸ್ಥೆಯ ಎಂ. ಬಸವನಗೌಡ, ಡಿ. ರಶ್ಮಿ, ಬಿ. ಪ್ರೀತಿ, ಆರ್.ಜಿ. ಕರಿಬಸಪ್ಪ, ಸಿ.ಎ. ಪ್ರಜ್ವಲ್, ಟಿ.ವಿ. ಪ್ರವೀಣ ಮತ್ತಿತರರು ಇದ್ದರು.