ವೇತನ ತಾರತಮ್ಯ ನಿವಾರಣೆಗೆ ಒತ್ತಾಯ

Updated on: 

ದಾವಣಗೆರೆ: ರಾಜ್ಯದ ಶಿಕ್ಷಕರು, ಬೋಧಕರ ವೇತನ ತಾರತಮ್ಯ ನಿವಾರಣೆ, ಪಟ್ಟಣ- ಗ್ರಾಮೀಣ ಪ್ರದೇಶದ ಮನೆ ಬಾಡಿಗೆ ಭತ್ಯೆಯನ್ನು ಹೆಚ್ಚಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ನಗರದ ಡಿಸಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಡಿಸಿ ಕಚೇರಿ ಎದುರು ಬೆಳಿಗ್ಗೆಯಿಂದಲೇ ಸಂಘದ ಜಿಲ್ಲಾ ಪದಾಧಿಕಾರಿಗಳ ನೇತೃತ್ವದಲ್ಲಿ ಧರಣಿ ಆರಂಭಿಸಿದ ಶಿಕ್ಷಕ- ಶಿಕ್ಷಕಿಯರ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವ ಮೂಲಕ ಸ್ಪಂದಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಘೋಷಣೆ ಕೂಗಿದರು.
ತಾರತಮ್ಯ ನಿವಾರಿಸಿ: ಸಂಘದ ಜಿಲ್ಲಾಧ್ಯಕ್ಷ ಎನ್. ಬಾಬುರೆಡ್ಡಿ ಮಾತನಾಡಿ, ಕೇಂದ್ರ ಸರ್ಕಾರ ತನ್ನ ನೌಕರರಿಗೆ ಶೇ.10ರಿಂದ ಶೇ.30ರ ವರೆಗೆ ಮನೆ ಬಾಡಿಗೆ ಹೆಚ್ಚಿಸಿ, ಸಮಾನತೆ ಕಾಪಾಡಿದೆ. ಅದೇ ರೀತಿ ರಾಜ್ಯ ಸರ್ಕಾರವೂ ನಗರ, ಪಟ್ಟಣ, ಗ್ರಾಮಾಂತರ ಶಿಕ್ಷಕರಿಗೆ ಶೇ.20, ಶೇ.10ರಷ್ಟು ಬಾಡಿಗೆ ವೇತನ ಭತ್ಯೆಯನ್ನು ಹೆಚ್ಚಿಸಿ, ವೇತನ ತಾರತಮ್ಯ, ಬಾಡಿಗೆ ಭತ್ಯೆಯಲ್ಲಾದ ತಾರತಮ್ಯ ನಿವಾರಿಸಬೇಕು ಎಂದು ಒತ್ತಾಯಿಸಿದರು.
ವಿಶೇಷ ವೇತನವನ್ನು ಮೂಲ ವೇತನದಲ್ಲಿ ವಿಲೀನಗೊಳಿಸಬೇಕು. ಈ ಬಗ್ಗೆ ಒತ್ತಾಯಿಸಿದ್ದರೂ ಸರ್ಕಾರ ಬಜೆಟ್‌ನಲ್ಲಿ ಅದರ ಪ್ರಸ್ತಾಪವನ್ನೇ ಮಾಡಿಲ್ಲ. ಸಂಘದಿಂದ ಹಲವಾರು ಬಾರಿ ಸರ್ಕಾರಕ್ಕೆ ಹೋರಾಟದ ಮೂಲಕ, ನಿಯೋಗಗಳ ಮೂಲಕ ಸಂಘವು ಮನವಿ ಅರ್ಪಿಸಿದ್ದರೂ ಕಿವಿಗೊಟ್ಟಿಲ್ಲ. ಬಜೆಟ್ ಮೇಲಿನ ಚರ್ಚೆ ವೇಳೆಯಲ್ಲಾದರೂ ಸರ್ಕಾರ ಈ ಬಗ್ಗೆ ಕ್ರಮ ಕೈಗೊಂಡು, ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಅವರು ಮನವಿ ಮಾಡಿದರು.
ಮನೆ ಬಾಡಿಗೆ ತಾರತಮ್ಯ: ಸಂಘದ ಕಾರ್ಯದರ್ಶಿ ಶಕುಂತಲಾ ಮಾತನಾಡಿ, ಆರನೇ ವೇತನ ಸಮಿತಿ ಶಿಫಾರಸು ಅನುಷ್ಠಾನದ ವೇಳೆ ಮನೆ ಬಾಡಿಗೆ, ನಗರ ಭತ್ಯೆ ಹೆಚ್ಚಿಸುವಂತೆ ಮನವಿ ಮಾಡಿದ್ದರೂ, ಸರ್ಕಾರ ಅದನ್ನು ಪುರಸ್ಕರಿಸದೆ ಕಡೆಗಣಿಸಿದೆ. ಬಜೆಟ್‌ನಲ್ಲಿ ಕೇವಲ ಬೆಂಗಳೂರಿನ ಶಿಕ್ಷಕರಿಗೆ ಶೇ.25- 30ರಷ್ಟು ಮನೆ ಬಾಡಿಗೆ ಭತ್ಯೆ ಹೆಚ್ಚಿಸಿ, ಗ್ರಾಮಾಂತರ ಪ್ರದೇಶದ ಸುಮಾರು 5 ಲಕ್ಷ ಶಿಕ್ಷಕರನ್ನು ಕಡೆಗಣಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಆರ್. ಲಕ್ಷ್ಮಣ, ಉಪಾಧ್ಯಕ್ಷ ಸಿದ್ದಲಿಂಗನಗೌಡ, ಖಜಾಂಚಿ ಅಂಗಡಿ ಮಲ್ಲಿಕಾರ್ಜುನ, ಸಹ ಕಾರ್ಯದರ್ಶಿ ಜಿ. ಪದ್ಮಲತಾ, ಸಂಘಟನಾ ಕಾರ್ಯದರ್ಶಿ ಅನ್ನಪೂರ್ಣಮ್ಮ ಮತ್ತಿತರರು ಧರಣಿಯಲ್ಲಿ ಪಾಲ್ಗೊಂಡಿದ್ದರು. ನಂತರ ಜಿಲ್ಲಾ ಆಡಳಿತದ ಮುಖಾಂತರ ಸರ್ಕಾರಕ್ಕೆ ಮನವಿ ಪತ್ರವನ್ನು ಸಲ್ಲಿಸಲಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com