ದಾವಣಗೆರೆ: ಮಾಯಕೊಂಡ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಬಹುಸಂಖ್ಯಾತ ಮಾದಿಗ ಸಮಾಜಕ್ಕೆ ನೀಡುವಂತೆ ಒತ್ತಾಯಿಸಿ ಮಾದಿಗ ಜಾಗೃತಿ ಸಮಿತಿ ತಾಲೂಕಿನ ಆನಗೋಡು ಗ್ರಾಮದ ಜಿ. ಚನ್ನಪ್ಪ ಜೂನಿಯರ್ ಕಾಲೇಜು ಮೈದಾನದಲ್ಲಿ ಫೆ.21ರಂದು ಮಾದಿಗ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಎಂ. ಅಂಜಿನಪ್ಪ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 11.30ಕ್ಕೆ ಡಾ. ಪಂಡಿತಾರಾಧ್ಯ ಸ್ವಾಮೀಜಿ, ಮಾದಾರ ಚನ್ನಯ್ಯ ಸ್ವಾಮೀಜಿ, ಸಿದ್ದಲಿಂಗೇಶ್ವರ ಸ್ವಾಮೀಜಿ, ನಿರಂಜನಾನಂದಪುರಿ ಸ್ವಾಮೀಜಿ, ದೇಶೀಕೇಂದ್ರ ಷಡಕ್ಷರ ಮುನಿ ಸ್ವಾಮೀಜಿ, ಬಸವ ನಾಗಿದೇವ ಸ್ವಾಮೀಜಿ, ಪುರುಷೋತ್ತಮಾನಂದಪುರಿ ಸ್ವಾಮೀಜಿ, ಮಡಿವಾಳ ಮಾಚಿದೇವ ಸ್ವಾಮೀಜಿ, ಮಹಾಂತ ರುದ್ರೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಮಾವೇಶ ನಡೆಯಲಿದೆ ಎಂದರು.
ಪ್ರೋತ್ಸಾಹ ಸಿಗುತ್ತಿಲ್ಲ: ಪರಿಶಿಷ್ಟ ಜಾತಿಗೆ ಮೀಸಲಾದ ಮಾಯಕೊಂಡ ಕ್ಷೇತ್ರದಲ್ಲಿ ವೀರಶೈವ ಲಿಂಗಾಯತರನ್ನು ಹೊರತುಪಡಿಸಿದರೆ, ಎರಡನೇ ಅತಿ ಹೆಚ್ಚು ಜನಸಂಖ್ಯೆಯ ಮಾದಿಗ ಸಮಾಜಕ್ಕೆ ಸೂಕ್ತ ಅವಕಾಶ, ಪ್ರೋತ್ಸಾಹ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಮಾದಿಗ ಸಮಾಜಕ್ಕೆ ಅವಕಾಶ ನೀಡಬೇಕು. ಮಾದಿಗ ಸಮುದಾಯದಿಂದ ಒಬ್ಬನೇ ಅಭ್ಯರ್ಥಿ ಆಯ್ಕೆಗೆ ಸಮಾಜ ಚಿಂತನೆಯನ್ನ ನಡೆಸಿದೆ. ಈಗಾಗಲೇ ಸಿರಿಗೆರೆ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಗಮನಕ್ಕೂ ಈ ವಿಚಾರ ತಂದಿದ್ದೇವೆ ಎಂದು ಅವರು ಹೇಳಿದರು.
ಬಿಎಸ್ವೈ, ಹೆಚ್ಡಿಕೆ ಉಪಸ್ಥಿತಿ: ಮಾಜಿ ಸಿಎಂಗಳಾದ ಯಡಿಯೂರಪ್ಪ, ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ, ಬಿಎಸ್ಸಾರ್ ಕಾಂಗ್ರೆಸ್ ನಾಯಕ ಶ್ರೀರಾಮುಲು ಸೇರಿದಂತೆ ಅನೇಕ ಪಕ್ಷಗಳ ನಾಯಕರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಸಮಾವೇಶಕ್ಕೆ ಮಾದಿಗ ನೌಕರರ ವೇದಿಕೆ ಸದಸ್ಯರು ತಮ್ಮ 2 ತಿಂಗಳ ವೇತನ ನೀಡಿ, ಸ್ಪಂದಿಸಿದ್ದಾರೆ. ಯಾರಿಂದಲೂ ದೇಣಿಗೆ ಸಂಗ್ರಹಿಸಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಮಾದಿಗ ಜಾಗೃತಿ ಸಮಿತಿಯ ಅಧ್ಯಕ್ಷ ಆಲೂರು ನಿಂಗರಾಜ, ಚನ್ನಗಿರಿ ಬೆಳ್ಳಿಗನೂರು ಮೂರ್ತೆಪ್ಪ, ಕೆ.ಎಂ. ಅಂಜಿನಪ್ಪ, ಸುರೇಶ ಆನಗೋಡು, ಪರಸಪ್ಪ ಸಿದ್ದನೂರು, ಕೋಗಲೂರು ಪ್ರಕಾಶ, ಮಂಜುನಾಥ ಗುಮ್ಮನೂರು, ಅಳಗವಾಡಿ ನಿಂಗರಾಜ, ಗುಮ್ಮನೂರು ಚಂದ್ರಪ್ಪ, ಭೀಮಸಮುದ್ರ ರಘು, ನಾಗನೂರು ರಾಜು, ವಿಠಲಾಪುರ ಸುನಿಲ್, ಮಂಜುನಾಥ ಮತ್ತಿತರರು ಇದ್ದರು.