ದಾವಣಗೆರೆ: ಹದಗೆಟ್ಟ ರಸ್ತೆಗಳು, ಕಸ ವಿಲೇವಾರಿ ಸಮಸ್ಯೆ ಸೇರಿದಂತೆ ದಾವಣಗೆರೆ ಮಹಾನಗರಕ್ಕೆ ಉತ್ತಮ ಆಡಳಿತ ನೀಡುವಲ್ಲಿ, ಜನರಿಗೆ ಮೂಲ ಸೌಕರ್ಯ ಕಲ್ಪಿಸಲಾಗದ ಬಿಜೆಪಿ ಆಡಳಿತ ವೈಫಲ್ಯ ಖಂಡಿಸಿ ನಗರ ಪಾಲಿಕೆಗೆ ಕೆಜೆಪಿ ಕಾರ್ಯಕರ್ತರು ಗುರುವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ನಗರದ ಬೀರಲಿಂಗೇಶ್ವರ ಮೈದಾನದಿಂದ ಕೆಜೆಪಿ ಮುಖಂಡರಾದ ಮಾಜಿ ಶಾಸಕ ಬಿ.ಪಿ. ಹರೀಶ, ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಗೋಖಲೆ, ಜಿಲ್ಲಾ ಸಂಚಾಲಕ ಬಿ.ಎಸ್. ಜಗದೀಶ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ನಗರ ಪಾಲಿಕೆಗೆ ಕಾರ್ಯಕರ್ತರು ಮುತ್ತಿಗೆ ಹಾಕಿದರು.
ಇದೇ ವೇಳೆ ಮಾತನಾಡಿದ ಬಿ.ಎಸ್. ಜಗದೀಶ, ಮಹಾ ನಗರಕ್ಕೆ ಮೂಲ ಸೌಕರ್ಯ ಕಲ್ಪಿಸುವಲ್ಲಿ ವಿಫಲವಾದ ಬಿಜೆಪಿ ತನ್ನ ಜನ ವಿರೋಧಿ ಧೋರಣೆ ಮುಂದುವರಿಸಿದೆ. ನೀರಿನ ಕರವನ್ನು ಮೂರು ಪಟ್ಟು ಹೆಚ್ಚಿಸುವ ಮೂಲಕ ಜನರಿಗೆ ತೆರಿಗೆ ಭಾರ ಹೇರಿದೆ. ಜಿಲ್ಲಾ ಕೇಂದ್ರದ ಅನೇಕ ಭಾಗಗಳಿಗೆ ಇಂದಿಗೂ ಸಹಿತ ಬೀದಿ ದೀಪಗಳ ವ್ಯವಸ್ಥೆಯೇ ಇಲ್ಲ ಎಂದು ಟೀಕಿಸಿದರು.
ಅವ್ಯವಸ್ಥೆಯ ಆಗರ: ಬೇಸಿಗೆ ದಿನಗಳಷ್ಟೇ ಅಲ್ಲ, ಮಳೆಗಾಲ, ಚಳಿಗಾಲದಲ್ಲೂ ಪಾಲಿಕೆ ಸಮರ್ಪಕವಾಗಿ ನೀರು ಪೂರೈಸುವಲ್ಲಿ ವಿಫಲವಾಗಿದೆ. ಸ್ವಚ್ಛತೆ ಎಂಬುದು ನಗರದಲ್ಲಿ ಮರೀಚಿಕೆಯಾಗಿದೆ. ಅನೇಕ ಬಡಾವಣೆ ಕಸ ವಿಲೇವಾರಿ ಸಮಸ್ಯೆಗೆ ತುತ್ತಾಗಿದೆ. ತಿಂಗಳು ಕಳೆದರೂ ಸ್ವಚ್ಛಗೊಳ್ಳದ ರಸ್ತೆ, ಜಾಗಗಳು ಕಂಡು ಬರುತ್ತಿವೆ. ಎಲ್ಲೆಡೆ ಕಸದ ರಾಶಿ ಬಿದ್ದಿದೆ. ಪಾಲಿಕೆ ಆಡಳಿತ ಪಕ್ಷದ ವೈಫಲ್ಯಕ್ಕೆ ಇದು ಸಾಕ್ಷಿಯಾಗಿದೆ. ಇಡೀ ನಗರ ಅವ್ಯವಸ್ಥೆಯ ಆಗರವಾಗಿದೆ ಎಂದರು.
ಕೇವಲ ಕಾಟಾಚಾರಕ್ಕೆ ಆಡಳಿತ ನಡೆಸುತ್ತಿರುವ ಪಾಲಿಕೆ ಆಡಳಿತ ವೈಫಲ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಪಾಲೂ ಇದೆ. ಬಿಜೆಪಿ ಆಡಳಿತ ವೈಫಲ್ಯದಿಂದ ಜನತೆ ಬೇಸತ್ತಿದೆ. ಕೆಜೆಪಿಯತ್ತ ಒಲವು ತೋರುತ್ತಿದ್ದಾರೆ ಎಂದು ಅವರು ತಿಳಿಸಿದರು.
ಮ್ಯಾನ್ಹೋಲ್ ನಗರದ ಅನೇಕ ಕಡೆ ತುಂಬಿ ಹರಿಯುತ್ತಿದೆ. ಜನ ಮೂಗು ಮುಚ್ಚಿಕೊಂಡು ಸಂಚರಿಸುವ ಸ್ಥಿತಿ ಇದೆ. ಹಂದಿ, ನಾಯಿ ಹಾವಳಿ ಮಿತಿ ಮೀರುತ್ತಿದ್ದರೂ ಅದಕ್ಕೆ ಕಡಿವಾಣ ಹಾಕುವ ಕೆಲಸವಾಗಿಲ್ಲ. ಸೊಳ್ಳೆ ಹಾವಳಿ ಹೇಳದಂತಿದೆ. ಪರಿಶಿಷ್ಟರಿಗೆ ಶೇ.22.75 ಅನುದಾನದಲ್ಲಿ ಅಡುಗೆ ಅನಿಲ ಸಿಲಿಂಡರ್, ಕಂಪ್ಯೂಟರ್, ಹೊಲಿಗೆ ಯಂತ್ರ ಸೇರಿದಂತೆ ವಿವಿಧ ಸೌಲಭ್ಯ ವಿತರಣೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದರು.
ಪಕ್ಷದ ಮುಖಂಡ, ಮಾಜಿ ಶಾಸಕ ಬಿ.ಪಿ. ಹರೀಶ, ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಗೋಖಲೆ, ಎಲ್. ಕೊಟ್ರೇಶನಾಯ್ಕ, ಪ್ರೊ. ಲಿಂಗಣ್ಣ, ಬಿ.ಟಿ. ಸಿದ್ದಪ್ಪ, ಆಲೂರು ಬಸಪ್ಪ, ಆನಂದಪ್ಪ, ಕಕ್ಕರಗೊಳ್ಳ ಕೆ.ಪಿ. ಕಲ್ಲಿಂಗಪ್ಪ, ಆವರಗೊಳ್ಳ ಬಿ.ಎಂ. ಷಣ್ಮುಖಯ್ಯ, ಕೆ. ಹೇಮಂತಕುಮಾರ, ಮಟ್ಟಿಕಲ್ಲು ವೀರಭದ್ರಸ್ವಾಮಿ, ಅಮೀರಾಬಾನು, ವೀಣಾ ಮಂಜುನಾಥ, ರೇಣುಕಾಸ್ವಾಮಿ, ಮಲ್ಲಿಕಾರ್ಜುನ ಸ್ವಾಮಿ, ಮಾಯಕೊಂಡ ಸುರೇಂದ್ರಪ್ಪ ಮಾಸ್ತರ್, ಡಿ. ಬಸವರಾಜ ಗುಬ್ಬಿ, ಅಜಯ್, ಶಾಹೀರಾಬಾನು, ನಿಟುವಳ್ಳಿ ಬಸವರಾಜ, ಪರಶುರಾಮನಾಯ್ಕ, ಸೈಯದ್ ಶಾಹೀನ್, ಮೋಹನ್, ಸಿದ್ದೇಶ ಮತ್ತಿತರರು ಇದ್ದರು.