ದಾವಣಗೆರೆ: ಕೇಂದ್ರದ ಜನ, ಕಾರ್ಮಿಕ, ದೇಶ ವಿರೋಧಿ ನೀತಿಗಳನ್ನು ಖಂಡಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ, ಬ್ಯಾಂಕ್ ಕಾರ್ಮಿಕ ಸಂಘಗಳ ಸಂಯುಕ್ತ ವೇದಿಕೆ ಸೇರಿದಂತೆ ಕಾರ್ಮಿಕ ಸಂಘಟನೆಗಳ ರಾಷ್ಟ್ರವ್ಯಾಪಿ ಕರೆಯ ಮೇರೆಗೆ ಫೆ.20ರಂದು ದಾವಣಗೆರೆ ಬಂದ್, ಫೆ.21ರಂದು ಮುಷ್ಕರ ನಡೆಸುವುದಾಗಿ ಎಐಟಿಯುಸಿ ರಾಜ್ಯ ಕಾರ್ಯಾಧ್ಯಕ್ಷ ಎಚ್.ಕೆ. ರಾಮಚಂದ್ರಪ್ಪ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಆಸ್ತಿಯಾದ ರೈತರು, ಕಾರ್ಮಿಕರು, ಶ್ರಮಿಕ ವರ್ಗವನ್ನು ಸಂಕಷ್ಟಕ್ಕೆ ನೂಕುತ್ತಿರುವ, ದುಡಿಯುವ ಜನರನ್ನು ಬಾಧಿಸುವ ನೀತಿ, ಕಾನೂನುಗಳಲ್ಲಿ ಬದಲಾವಣೆ ತರುವುದೂ ಸೇರಿದಂತೆ ಮಾನ್ಯತೆ ಪಡೆದಂತಹ 11 ಕೇಂದ್ರ ಕಾರ್ಮಿಕ ಸಂಘಟನೆಗಳ ರಾಷ್ಟ್ರವ್ಯಾಪಿ ಕರೆಯ ಮೇರೆ ಎರಡು ದಿನಗಳ ಕಾಲ ಬಂದ್ ಮತ್ತು ಮುಷ್ಕರ ನಡೆಸಲಾಗುವುದು ಎಂದರು.
ಬೇಡಿಕೆ ಈಡೇರಿಕೆಗೆ ಆಗ್ರಹ: ಬಿಎಂಎಸ್, ಐಎನ್ಟಿಯುಸಿ, ಎಚ್ಎಂಎಸ್, ಎಐಟಿಯುಸಿ, ಸಿಐಟಿಯು, ಎಐಸಿಸಿಟಿಯು, ಎಐಯುಟಿಯುಸಿ, ಟಿಯುಸಿಸಿ, ಎಲ್ಪಿಎಲ್, ಎಸ್ಯುಡಬ್ಲ್ಯುಎ, ಅಖಿಲ ಭಾರತ ಬ್ಯಾಂಕ್ ನೌಕರರ, ವಿಮಾ ನೌಕರರ ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕರರ ಫೆಡರೇಷನ್ಗಳು ಸಂಘಟಿತವಾಗಿ ಕೇಂದ್ರದ ನೀತಿಗಳನ್ನು ಖಂಡಿಸಿ, ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹೋರಾಟ ನಡೆಸಲಿವೆ ಎಂದು ಅವರು ಹೇಳಿದರು.
ರಾಷ್ಟ್ರವ್ಯಾಪಿ ಕರೆಯ ಮೇರೆಗೆ ಫೆ.20ರಂದು ದಾವಣಗೆರೆ ಬಂದ್ಗೆ ಕರೆ ನೀಡಲಾಗಿದೆ. ಅಂದು ಬೆಳಿಗ್ಗೆ 10ಕ್ಕೆ ಕಾರ್ಮಿಕ ಸಂಘಟನೆಗಳ ಮುಖಂಡರು, ಕಾರ್ಯಕರ್ತರು, ರೈತರು, ದುಡಿಯುವ ವರ್ಗದ ಜನತೆಯು ನಗರದ ಜಯದೇವ ವೃತ್ತಕ್ಕೆ ಆಗಮಿಸಬೇಕು. ಶಾಲಾ- ಕಾಲೇಜು, ವ್ಯಾಪಾರ- ವಹಿವಾಟು, ಕಚೇರಿ, ಸಾರಿಗೆ ಎಲ್ಲವನ್ನೂ ಬಂದ್ ಮಾಡುವ ಮೂಲಕ ಹೋರಾಟಕ್ಕೆ ಬಲ ತರಲಿ. ಫೆ.21ರಂದು ರಾಷ್ಟ್ರವ್ಯಾಪಿ ಕರೆಯ ಮೇರೆಗೆ ಸಾಮೂಹಿಕ ಮುಷ್ಕರ ನಡೆಯಲಿದೆ ಎಂದು ತಿಳಿಸಿದರು.
ಬೆಂಬಲಿಸಲು ಮನವಿ: ಮುಷ್ಕರದ ಪೂರ್ವಭಾವಿಯಾಗಿ ಫೆ.19ರಂದು ನಗರದ ಜಯದೇವ ವೃತ್ತದಿಂದ ಬೃಹತ್ ಬೈಕ್ ರ್ಯಾಲಿ ನಡೆಸುವ ಮೂಲಕ ದಾವಣಗೆರೆ ಬಂದ್ಗೆ ಸಹಕರಿಸುವಂತೆ ಜನತೆಯಲ್ಲಿ ಮನವಿ ಮಾಡುವ ಮೂಲಕ ಅರಿವು ಮೂಡಿಸಲಾಗುವುದು. ಜನ ವಿರೋಧಿ, ರೈತ ವಿರೋಧಿ, ಕಾರ್ಮಿಕ ವಿರೋಧಿ, ದುಡಿಯುವ ವರ್ಗದ ವಿರೋಧಿ ನೀತಿಗಳನ್ನು ಕೈಬಿಡಲು ನಡೆಸುವ ಹೋರಾಟಕ್ಕೆ ಸ್ಪಂದಿಸುವಂತೆ ಜನತೆಯಲ್ಲಿ ಮನವಿ ಮಾಡುವುದಾಗಿ ಅವರು ವಿವರಿಸಿದರು.
ಸಾಮಾಜಿಕ ನಿಧಿ ಸ್ಥಾಪಿಸಿ: ಬೆಲೆ ಏರಿಕೆ ತಡೆಗಟ್ಟುವಲ್ಲಿ ಸರ್ಕಾರಗಳು ನಿರ್ಧಿಷ್ಟ ಕ್ರಮ ಕೈಗೊಳ್ಳಬೇಕು. ಬಂಡವಾಳ ಶಾಹಿಗಳನ್ನು ರಕ್ಷಿಸಲು ಪ್ಯಾಕೇಜ್ ಘೋಷಿಸುವ ಸಂಸ್ಕೃತಿ ಕೈಬಿಟ್ಟು, ಕಾರ್ಮಿಕರ ಉದ್ಯೋಗ ರಕ್ಷಣೆಗೆ ಮುಂದಾಗಲಿ. ಮೂಲ ಕಾರ್ಮಿಕ ಕಾನೂನು ಕಟ್ಟುನಿಟ್ಟಾಗಿ ಜಾರಿಗೊಳಿಸಲಿ. ಇದನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲಿ. ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ವ್ಯವಸ್ಥೆ ನಿಬಂಧನೆ ಇಲ್ಲದೇ, ಜಾರಿಗೊಳಿಸಲಿ. ಇದಕ್ಕಾಗಿ ರಾಷ್ಟ್ರೀಯ ಸಾಮಾಜಿಕ ನಿಧಿ ಸ್ಥಾಪಿಸುವಂತೆ ಒತ್ತಾಯಿಸುವುದಾಗಿ ಅವರು ಮಾಹಿತಿ ನೀಡಿದರು.
ಮಾಸಿಕ 10 ಸಾವಿರ ನೀಡಿ: ರಾಷ್ಟ್ರೀಯ ಸಾಮಾಜಿಕ ನಿಧಿ ಸ್ಥಾಪಿಸಬೇಕು. ಕೇಂದ್ರ, ರಾಜ್ಯ ಸರ್ಕಾರಗಳ ಸಾರ್ವಜನಿಕ ಉದ್ದಿಮೆಗಳ ಷೇರು ಮಾರಾಟ ನಿಲ್ಲಿಸಬೇಕು. ಖಾಯಂ ಮತ್ತು ಅಗತ್ಯ ಕೆಲಸಗಳ ಹೊರ ಗುತ್ತಿಗೆ ನಿಲ್ಲಿಸಬೇಕು. ಕೈಗಾರಿಕೆಗಳಲ್ಲಿ ಖಾಯಂ ನೌಕರರಿಗೆ ನೀಡುವ ಸೌಲಭ್ಯ ಗುತ್ತಿಗೆ ನೌಕರರಿಗೂ ನೀಡಲಿ. ಕನಿಷ್ಟ ವೇತನ ಕಾಯ್ದೆಗೆ ತಿದ್ದುಪಡಿ ಮಾಡಿ, ಎಲ್ಲಾ ಕಾರ್ಮಿಕರಿಗೂ ಮಾಸಿಕ ಕನಿಷ್ಟ 10 ಸಾವಿರ ನೀಡಬೇಕು ಎಂದು ಅವರು ಆಗ್ರಹಿಸಿದರು.
ರಾಷ್ಟ್ರವ್ಯಾಪಿ ಮುಷ್ಕರ: ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ವಿದೇಶೀ ನೇರ ಬಂಡವಾಳ ಹೂಡಿಕೆಗೆ ಅವಕಾಶ ನೀಡಬಾರದು. ವಿಮಾ, ಬ್ಯಾಂಕ್ ಮತ್ತು ಟೆಲಿಕಾಂ ಖಾಸಗೀಕರಣ ಕೈಬಿಡಬೇಕು. ಈ ಎಲ್ಲಾ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಎರಡು ದಿನಗಳ ರಾಷ್ಟ್ರವ್ಯಾಪಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಜಂಟಿ ಸಮಿತಿ ಮುಖಂಡರಾದ ಕೆ.ಎಲ್. ಭಟ್, ಸಿಪಿಐ ಜಿಲ್ಲಾ ಖಜಾಂಚಿ ಆನಂದರಾಜ, ಯುಎಫ್ಬಿಯು ಮುಖಂಡ ಕೆ. ರಾಘವೇಂದ್ರ ನಾಯರಿ, ಅಜಿತಕುಮಾರ ನ್ಯಾಮತಿ, ಇಂಟೆಕ್ನ ಆರ್.ಎಸ್. ತಿಪ್ಪೇಸ್ವಾಮಿ, ರಾಜು, ಬಿಎಸ್ಸೆನ್ನೆಲ್ ಷಣ್ಮುಖಪ್ಪ, ಎಐಡಿಎಸ್ಓ ಮುಖಂಡ ಟಿವಿಎಸ್ ರಾಜು, ಆವರಗೆರೆ ಚಂದ್ರು, ಆವರಗೆರೆ ವಾಸು, ಟಿ.ಎಸ್. ನಾಗರಾಜ, ಎಚ್. ನಾಗರಾಜ ಮತ್ತಿತರರು ಇದ್ದರು.