ದಾವಣಗೆರೆ: ಜಿಲ್ಲಾಡಳಿತ, ಜಿಪಂ, ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಫೆ.19ರಂದು ದಾವಣಗೆರೆ ಜಿಲ್ಲಾಡಳಿತ ಭವನದ ಮೊದಲ ಮಹಡಿ ಸಭಾಂಗಣದಲ್ಲಿ ಫೆ.19ರಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ 11ಕ್ಕೆ ಜಿಲ್ಲಾಧಿಕಾರಿ ಸುಭಾಷ್ ಶಿವಪ್ಪ ಪಟ್ಟಣಶೆಟ್ಟಿ ಸಮಾರಂಭ ಉದ್ಘಾಟಿಸಲಿದ್ದು, ಜಿಪಂ ಸಿಇಓ ಎ.ಬಿ. ಹೇಮಚಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠ ಲಾಭೂ ರಾಮ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಹಂಪಿ ಕನ್ನಡ ವಿವಿ ಪ್ರಾಧ್ಯಾಪಕ ಡಾ. ವಿಠಲರಾವ್ ಡಿ. ಗಾಯಕವಾಡ್ ಉಪನ್ಯಾಸವನ್ನು ನೀಡಲಿದ್ದಾರೆ.
ಸಚಿವರ ಪ್ರವಾಸ
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರವೀಂದ್ರನಾಥ ಫೆ.19ರಂದು ಜಿಲ್ಲೆಯಲ್ಲಿ ಪ್ರವಾಸ ನಡೆಸಲಿದ್ದಾರೆ. ಮಂಗಳವಾರ ಬೆಳಿಗ್ಗೆ 11ಕ್ಕೆ ಬಿ. ಕಲ್ಪನಹಳ್ಳಿ ಗ್ರಾಮದ ನಮ್ಮ ಗ್ರಾಮ ನಮ್ಮ ರಸ್ತೆ ಕಾಮಗಾರಿ ಗುದ್ದಲಿ ಪೂಜೆ, 11.50ಕ್ಕೆ ಪುಟಗನಾಳ್- ಮಾಳಗೊಂಡನಹಳ್ಳಿ, ಮಧ್ಯಾಹ್ನ 12.30ಕ್ಕೆ ರಾಂಪುರ- ವಡ್ಡಿನಹಳ್ಳಿ ರಸ್ತೆ, ಮಧ್ಯಾಹ್ನ 1.15ಕ್ಕೆ ಕಾಡಜ್ಜಿ- ಆಲೂರು ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗೆ ಸಚಿವ ಎಸ್.ಎ. ರವೀಂದ್ರನಾಥ ಗುದ್ದಲಿ ಪೂಜೆ ನೆರವೇರಿಸಲಿದ್ದಾರೆ ಎಂದು ಸಚಿವರ ಆಪ್ತ ಕಾರ್ಯದರ್ಶಿ ಗಂಗಾಧರಸ್ವಾಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿರೇಗೌಡರ್ ನಿಧನಕ್ಕೆ ಸಂತಾಪ
ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ ಪುರಸ್ಕೃತ, ರಾಜ್ಯೋತ್ಸವ ಪ್ರಶಸ್ತಿಗೂ ಪಾತ್ರರಾಗಿದ್ದ ದಾವಣಗೆರೆ ದೃಶ್ಯಕಲಾ ಮಹಾ ವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಪ್ರೊ. ವಿ.ಬಿ. ಹಿರೇಗೌಡರ್ ನಿಧನಕ್ಕೆ ಕಾಲೇಜು ಸಂಯೋಜನಾಧಿಕಾರಿ, ಬೋಧಕ- ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಸಂತಾಪ ಸೂಚಿಸಿದ್ದಾರೆ. ನಾಡಿನ ಚಿತ್ರಕಲಾ ಕ್ಷೇತ್ರದ ಹಿರಿಯ ಚೇತನವಾಗಿದ್ದ ಪ್ರೊ. ವಿ.ಬಿ. ಹಿರೇಗೌಡರ್ ಅಗಲಿಕೆಯಿಂದಾಗಿ ಕಲಾ ಲೋಕಕ್ಕೆ, ವಿದ್ಯಾರ್ಥಿಗಳಿಗೆ, ನಾಡಿಗೆ ತುಂಬಲಾರದ ನಷ್ಟವಾಗಿದೆ. ಮೃತರ ಕುಟುಂಬಕ್ಕೆ ಭಗವಂತನು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಸಂತಾಪ ಸೂಚಕದಲ್ಲಿ ಪ್ರಾರ್ಥಿಸಲಾಗಿದೆ.