ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಒತ್ತು

Updated on: 

ದಾವಣಗೆರೆ; ಸುವರ್ಣ ಗ್ರಾಮೋದಯ ಯೋಜನೆಯಡಿ ಗ್ರಾಮಗಳ ರಸ್ತೆಗಳ ಅಭಿವೃದ್ಧಿಗಾಗಿ ಹೆಚ್ಚು ಅನುದಾನವನ್ನು ಬಿಡುಗಡೆ ಮಾಡಿದ್ದು, ಅದೇರೀತಿ ಕಕ್ಕರಗೊಳ್ಳದ ರಸ್ತೆಗಳ ಅಭಿವೃದ್ಧಿಗೆ ಹೆಚ್ಚು ಹಣ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರವೀಂದ್ರನಾಥ ತಿಳಿಸಿದರು.
ತಾಲೂಕಿನ ಕಕ್ಕರಗೊಳ್ಳ ಗ್ರಾಮದಲ್ಲಿ ಸೋಮವಾರ ವಿವಿಧ ಅಭಿವೃದ್ಧಿ ಕಾಮಗಾರಿ ಶಂಕು ಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಕಕ್ಕರಗೊಳ್ಳ ಗ್ರಾಮದಲ್ಲಿ ಗುಣಮಟ್ಟದ ರಸ್ತೆಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಗ್ರಾಮಸ್ಥರೂ ಇದಕ್ಕೆ ಕೈಜೋಡಿಸಬೇಕು ಎಂದರು.
ಜನತೆಯ ಹೊಣೆ: ಲಕ್ಷಾಂತರ ವೆಚ್ಚದಲ್ಲಿ ಸರ್ಕಾರ ಸಿಮೆಂಟ್ ರಸ್ತೆ, ಡಾಂಬರ್ ರಸ್ತೆಗಳನ್ನು ನಿರ್ಮಿಸುತ್ತದೆ. ಅಂತಹ ರಸ್ತೆ ಹಾಳಾಗದಂತೆ, ಸುಧೀರ್ಘವಾಗಿ ಬಾಳಿಕೆ ಬರುವಂತೆ ನೋಡಿಕೊಳ್ಳುವ ಹೊಣೆ ಜನತೆ ಮೇಲಿದೆ. ರೈತರು ಹೊಲ, ಗದ್ದೆಗೆ ಹೋಗುವ ಭರದಲ್ಲಿ ಟ್ರ್ಯಾಕ್ಟರ್‌ಗೆ ಕೇಜ್ ವೀಲ್ ಅಳವಡಿಸಿಕೊಂಡು ಹೋಗುವುದು ಸರಿಯಲ್ಲ ಎಂದು ಅವರು ಹೇಳಿದರು.
ಭದ್ರಾ ನಾಲೆಯ ಕೊನೆಯ ಅಚ್ಚುಕಟ್ಟು ಪ್ರದೇಶಕ್ಕೆ ಒಳಪಡುವ ಈ ಭಾಗಕ್ಕೆ ಸರದಿಯಂತೆ ನಾಲೆಗಳಿಗೆ ನೀರು ಬಿಡಲಾಗುವುದು. ರೈತರೂ ಸಹ ಕೇವಲ ಬತ್ತ, ಜೋಳವನ್ನೇ ಬೆಳೆಯಲು ಸೀಮಿತವಾಗದೆ, ಪರ್ಯಾಯ ಬೆಳೆ ಬೆಳೆಯುವ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಿ. ಒಂದೇ ಬೆಳೆಗೆ ಅಂಟಿಕೊಂಡು ಕೂಡುವುದೂ ಒಳ್ಳೆಯದಲ್ಲ ಎಂದು ತಿಳಿಸಿದರು.
ಯೋಜನೆಗಳ ಅರಿವು ಅಗತ್ಯ: ಗ್ರಾಪಂ ಮಟ್ಟದಲ್ಲಿ ಜನ ಪ್ರತಿನಿಧಿಗಳು ಅಭಿವೃದ್ಧಿಗೆ ಪೂರಕವಾಗಿ ಕಾರ್ಯ ನಿರ್ವಹಿಸಬೇಕು. ರಾಜ್ಯ ಸರ್ಕಾರ ಹಲವಾರು ಜನಪರ ಯೋಜನೆಗಳು, ಕಾರ್ಯಕ್ರಮಗಳನ್ನು ರೂಪಿಸಿ, ಅನುಷ್ಟಾನಕ್ಕೆ ತರುತ್ತಿದೆ. ಇಂತಹ ಯೋಜನೆಗಳು ಪರಿಣಾಮಕಾರಿ ಯಾಗಿಸಲು ಸ್ಥಳೀಯ ಸಂಸ್ಥೆಗಳ ಜನ ಪ್ರತಿನಿಧಿಗಳು, ಅಧಿಕಾರಿಗಳೂ ಮುಂದಾಗಬೇಕು. ಯೋಜನೆಗಳ ಬಗ್ಗೆ ಜನತೆಯಲ್ಲೂ ಅರಿವು ಮೂಡಬೇಕು ಎಂದು ಹೇಳಿದರು.
ಜಿಪಂ ಸದಸ್ಯ ಬೇತೂರು ಬಿ. ಕರಿಬಸಪ್ಪ ಮಾತನಾಡಿ, ಯಾವುದೇ ಕಾಮಗಾರಿಗಳಲ್ಲಿ ಉತ್ತಮವಾಗಿ ನಿರ್ವಹಿಸಿ. ಕೇಂದ್ರ, ರಾಜ್ಯ ಸರ್ಕಾರ ಸೇರಿದಂತೆ ಯಾವುದೇ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಂಡರೂ ಅದು ಗುಣಮಟ್ಟದಿಂದಲೇ ಕೂಡಿರಬೇಕು. ಉತ್ತಮವಾದ, ಗುಣಮಟ್ಟದ ಕಾಮಗಾರಿಗಳಾಗುವುದೂ ಸಹ ಜನತೆಯ ಮೇಲೆ ಅವಲಂಭಿತವಾಗಿರುತ್ತದೆ. ಜನತೆಯೂ ಸಹ ಕಳಪೆ ಕಾಮಗಾರಿ ನಡೆಯದಂತೆ ಜಾಗ್ರತೆ ವಹಿಸಬೇಕು ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಶಾಂತರಾಜಗೌಡ ಅಧ್ಯಕ್ಷತೆ ವಹಿಸಿದ್ದರು. ತಾಪಂ ಸದಸ್ಯ ದೊಗ್ಗಳ್ಳಿ ರೇವಣಸಿದ್ದಪ್ಪ, ಸದಸ್ಯ ಅಂಗಡಿ ಚಮನ್ ಸಾಬ್, ಇಓ ಎಲ್.ಎಸ್. ಪ್ರಭುದೇವ, ಎಪಿಎಂಸಿ ಸದಸ್ಯ ಶಿವಕುಮಾರ,
ಗ್ರಾಮದ ಮುಖಂಡರಾದ ಕೆ.ಜಿ. ಬಸವನಗೌಡ್ರು, ಕೆ.ಎಚ್. ವಾಸುದೇವಪ್ಪ, ಗ್ರಾಪಂ ಮಾಜಿ ಅಧ್ಯಕ್ಷೆ ನೀಲಮ್ಮ ಐರಣಿ, ಶಾಂತಮ್ಮ, ಹಾಲಿ ಉಪಾಧ್ಯಕ್ಷೆ ಕಡತಿ ಗಂಗಮ್ಮ, ಕೆ.ಎಚ್. ವಾಸುದೇವಪ್ಪ, ಎಚ್. ಪಾಲಾಕ್ಷಪ್ಪ, ಚೇತನ್‌ಬಾಬು, ಬಸಮ್ಮ, ಕೋಡಿಹಳ್ಳಿ ಚಂದ್ರಪ್ಪ, ಪರಮೇಶ್ವರಪ್ಪ, ಹದಡಿ ಹನುಮಂತಪ್ಪ, ಪಿಡಿಓ ರೂಪಾ, ಕಾರ್ಯದರ್ಶಿ ವೀರಯ್ಯ ಮತ್ತಿತರರು ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com