ದಾವಣಗೆರೆ: ಸಮರ್ಪಕವಾಗಿ ನೀರು ದೊರೆತರೆ ಉತ್ತಮ ಬೆಳೆ, ಹೆಚ್ಚಿನ ಲಾಭವನ್ನು ಪಡೆಯಲು ಸಾಧ್ಯವಿದ್ದು, ಆರ್ಥಿಕತೆ ನಿರ್ಧರಿಸುವಲ್ಲೂ ನೀರು ಪ್ರಮುಖ ಪಾತ್ರ ವಹಿಸುತ್ತದೆ ಎಂದು ವಿಶ್ವೇಶ್ವರಾಯ ತಾಂತ್ರಿಕ ವಿಶ್ವ ವಿದ್ಯಾನಿಲಯದ ವಿಶೇಷಾಧಿಕಾರಿ ಪ್ರೊ. ಎಸ್. ಮಂಜಪ್ಪ ತಿಳಿಸಿದರು.
ನಗರದ ಸಪ್ರದ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ಯುಜಿಸಿ ಪ್ರಾಯೋಜಿತ ನೀರು- ಪರಿಸರ ಮತ್ತು ಆರ್ಥಿಕಾಭಿವೃದ್ಧಿ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪದಲ್ಲಿ ಮಾತನಾಡಿದ ಅವರು, ಇಂದು ನೀರಿನ ಅಗತ್ಯತೆ ಹೆಚ್ಚುತ್ತಿದ್ದು, 3ನೇ ಮಹಾಯುದ್ಧ ನಡೆದರೆ ಅದು ನೀರಿಗಾಗಿ ನಡೆಯುತ್ತದೆಂದರೂ ಅತಿಶಯೋಕ್ತಿಯೇನಲ್ಲ ಎಂದರು.
ಪರಿಸರ ಕಾಳಜಿ ಇಲ್ಲ: ನೀರಿನ ವಿಚಾರವಾಗಿಯೇ ಕರ್ನಾಟಕ- ತಮಿಳುನಾಡು ಮಧ್ಯೆ ಸಂಬಂಧ ಹಳಸಿದೆ. ಇದಕ್ಕೆಲ್ಲಾ ನಮ್ಮ ರಾಜಕೀಯ ಪರಿಸ್ಥಿತಿ ಕಾರಣವಾಗಿದೆ. ದೇಶದ ಮೊದಲ ಪ್ರಧಾನಿ ಕೈಗಾರೀಕರಣಕ್ಕೆ ಆದ್ಯತೆ ನೀಡಿದ್ದರು. ಆದರೆ, ಪರಿಸರ ಸಂರಕ್ಷಣೆಗೆ ಮಾತ್ರ ಯಾರೊಬ್ಬರೂ ಒತ್ತು ನೀಡಲಿಲ್ಲ. ಇದೂ ಇಂದಿನ ಸಂಕಷ್ಟಗಳಿಗೆ ಕಾರಣವಾಗುತ್ತಿದೆ ಎಂದು ಅವರು ಹೇಳಿದರು.
ಎಲ್ಲಾ ಉತ್ಪನ್ನಗಳ ಪರಿಶುದ್ಧತೆಯನ್ನು ನೀರು ಬಿಂಭಿಸುತ್ತದೆ. ಇದು ಆರ್ಥಿಕತೆಯ ಮಟ್ಟವನ್ನು ಸೂಚಿಸುತ್ತದೆ. ಜೀವನಮಟ್ಟ ಉತ್ತಮವಾದಂತೆ ನೀರಿನ ಅವಶ್ಯಕತೆಯೂ ಹೆಚ್ಚುತ್ತಿದೆ. ಅತೀ ಹೆಚ್ಚು ವೇತನ ಪಡೆಯುವ ವ್ಯಕ್ತಿ ದೇಶಕ್ಕೆ ನೀಡುವ ಕೊಡುಗೆ ಕಡಿಮೆ. ಆದರೆ, ಅತೀ ಕಡಿಮೆ ಸಂಬಳ ಪಡೆಯುವ ವ್ಯಕ್ತಿಯು ದೇಶಕ್ಕೆ ರಾಷ್ಟ್ರಕ್ಕಾಗಿ ನೀಡುವಂತಹ ಕೊಡುಗೆಯೂ ಅಪಾರ. ಇಂತಹ ಕೊಡುಗೆಯನ್ನು ರೈತರು ನೀಡುತ್ತಾ ಬಂದಿದ್ದಾರೆ ಎಂದು ಅವರು ತಿಳಿಸಿದರು.
ನೀರು ಮಿತವಾಗಿ ಬಳಸಿ: ಜಿಲ್ಲೆಯ ಯಾವುದೇ ತಾಲೂಕುಗಳಲ್ಲಿ ನೀರು ಶುದ್ಧೀಕರಣ ಘಟಕವೂ ಇಲ್ಲ. ಪ್ರತಿಯೊಬ್ಬರೂ ನೀರನ್ನು ಮಿತವಾಗಿ ಬಳಸಬೇಕು. ಹಳ್ಳಿ ಜನಕ್ಕೆ ವಿಶೇಷ ಸಂಕಿರಣಗಳ ಮೂಲಕ ಅರಿವು ಮೂಡಿಸಬೇಕು ಎಂದರು. ಕಾಲೇಜಿನ ಯುಜಿಸಿ ಸಂಚಾಲಕ ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಪ್ರೊ. ಡಿ. ಬಸವರಾಜ ಮಾತನಾಡಿ, ನೀರನ್ನು ಮಿತವಾಗಿ ಬಳಸುವ ಬಗ್ಗೆ ವಿದ್ಯಾರ್ಥಿ ಯುವಜನರು ಅರಿವು ಮೂಡಿಸಬೇಕು ಎಂದರು.
ತಿಪ್ಪಾರೆಡ್ಡಿ, ಎಸ್.ಆರ್. ಭಜಂತ್ರಿ, ಡಾ. ನಿರ್ಮಲ, ಪ್ರೊ. ಭೀಮಣ್ಣ ಬಿ. ಸುಣಗಾರ, ಪ್ರೊ. ಕುಂಬಾರ ವಿ. ಬಸವಣ್ಯಪ್ಪ ಇತರರು ಇದ್ದರು.