ದಾವಣಗೆರೆ: ಅಕ್ಕಮಹಾದೇವಿ ಸಮಾಜದಿಂದ ಬಸವೇಶ್ವರ ಜಯಂತ್ಯುತ್ಸವ, ಅಕ್ಕಮಹಾದೇವಿ ಅಮೃತ ಮಹೋತ್ಸವ ಸಮಾರಂಭ ಫೆ.25ರಂದು ದಾವಣಗೆರೆ ಪಿ.ಜೆ. ಬಡಾವಣೆಯಲ್ಲಿರುವ ಶ್ರೀಮತಿ ಮೋತಿ ಚನ್ನಬಸಮ್ಮ ವೀರಮ್ಮ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಅಂದು ಸಂಜೆ 6ಕ್ಕೆ ಜಡೇಸಿದ್ದೇಶ್ವರ ಮಠದ ಶಿವಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಆಕಾಶವಾಣಿ ಕಲಾವಿದೆ ಟಿ.ಎಂ. ಗೌರಮ್ಮ ತಾಯಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ದಮಯಂತಿ ಮತ್ತು ತಂಡದಿಂದ 101 ವಚನ ಗಾಯನ ಕಾರ್ಯಕ್ರಮವಿದೆ ಎಂದು ಸಮಾಜದ ಅಧ್ಯಕ್ಷೆ ಎಂ.ಸಿ. ಗಿರಿಜಮ್ಮ ತಿಳಿಸಿದ್ದಾರೆ.
ಶ್ರವಣ ಪರೀಕ್ಷೆ: ತರಬೇತಿ
ಲಯನ್ಸ್ ಕ್ಲಬ್, ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ ಹಾಗೂ ಕ್ವೆಸ್ಟ್ ಸ್ವಿಚ್ ಅಂಡ್ ಹಿಯರಿಂಗ್ ಕೇಂದ್ರದಿಂದ 15 ಮಕ್ಕಳಿಗೆ ಶ್ರವಣ ದೋಷ ತಪಾಸಣೆ ಶಿಬಿರ ದಾವಣಗೆರೆಯಲ್ಲಿ ನಡೆಯಿತು. ವಾಕ್ ಮತ್ತು ಶ್ರವಣ ನೂನ್ಯತೆಯುಳ್ಳ ಮಕ್ಕಳ 30 ಪಾಲಕರಿಗೆ ಕಿವಿಯ ರಕ್ಷಣೆ ಮತ್ತು ಶ್ರವಣ ದೋಷ ಮಕ್ಕಳಿಗೆ ಪುನರ್ವಸತಿ, ಶೈಕ್ಷಣಿಕ ವಿಧಾನ, ಮನೆಯಲ್ಲಿ ಮಾತಿನ ತರಬೇತಿಯನ್ನು ನೀಡಲಾಯಿತು. ಡಾ.ಟಿ. ನಾರಾಯಣ, ಬೋಧಕ ರಾಜು, ಸಂಸ್ಥೆ ದುರುಗೇಶ, ಬಸವರಾಜ, ಮಂಜುನಾಥ, ಶೋಭಾ ತರಬೇತಿ ನೀಡಿದರು ಎಂದು ಜಿಲ್ಲಾ ಅಂಗವಿಕಲರ ಕಾರ್ಯಕ್ರಮ ಅಧಿಕಾರಿ ತಿಳಿಸಿದ್ದಾರೆ.
ಮುಷ್ಕರ
ಕೇಂದ್ರ ಸರ್ಕಾರದ ಜನ ವಿರೋಧಿ, ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ರಾಜ್ಯ ಔಷಧ ಮತ್ತು ಮಾರಾಟ ಪ್ರತಿನಿಧಿಗಳ ಸಂಘಟನೆ ನೇತೃತ್ವದಲ್ಲಿ ದಾವಣಗೆರೆಯಲ್ಲಿ ಸಿಪ್ಲಾ ಕಂಪನಿ ಕಾರ್ಮಿಕರು ಪ್ರತಿಭಟನೆ ನಡೆಸಿದರು. ಮುಷ್ಕರ ನಡೆಸುತ್ತಿದ್ದ ಕಾರ್ಮಿಕರ ಹೋರಾಟ ನಿಷ್ಕ್ರಿಯಗೊಳಿಸುವ ಮೂಲಕ ಜನ, ಕಾರ್ಮಿಕ ವಿರೋಧಿ ನೀತಿಗೆ ಕಂಪನಿ ಆಡಳಿತ ಮಂಡಳಿ ಮುಂದಾಗಿತ್ತು. ವಿರೋಧದ ಮಧ್ಯೆಯೂ ಕಾರ್ಮಿಕರು ಹೋರಾಟ ನಡೆಸಿದರು. ಹೋರಾಟ ಹತ್ತಿಕ್ಕಲು ಪ್ರಯತ್ನಿಸಿದ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆಯಲ್ಲಿ ದೂರು ದಾಖಲಿಸಲು ಕೆಎಸ್ಎಂ ಮತ್ತು ಎಸ್ಆರ್ಎ ಸಂಘಟನೆ ದೂರು ದಾಖಲಿಸಲು ಮುಂದಾಗಿದೆ.