ಶಿವಮೊಗ್ಗ: ಇಂದಿನ ದಿನಗಳಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರು ತಮ್ಮ ಹೊಲಗಳನ್ನು ಕೃಷಿಯಲ್ಲದೆ ಕೃಷಿಯೇತರ ಚಟುವಟಿಕೆಗಳಿಗಾಗಿ ಬೇರೆಯವರಿಗೆ ಪರಭಾರೆ ಮಾಡುತ್ತಿರುವುದರಿಂದ ಮುಂದಿನ ಪೀಳಿಗೆಗೆ ಸಾಕಷ್ಟು ಆಹಾರ ಉತ್ಪಾದನೆಯ ಕೊರತೆಉಂಟಾಗುತ್ತದೆ.
ಈ ನಿಟ್ಟಿನಲ್ಲಿ ರೈತರು ಮತ್ತು ವಿಜ್ಞಾನಿಗಳು ಅತ್ಯಂತ ಉಪಯುಕ್ತ ನೈಸರ್ಗಿಕ ಸಂಪನ್ಮೂಲಗಳಾದ ನೀರು ಮತ್ತು ಮಣ್ಣನ್ನು ಸಂರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದು ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಸಂಶೋಧನಾ ನಿರ್ದೇಶಕ ಡಾ. ಬಿ. ಸತ್ಯನಾರಾಯಣ ರೆಡ್ಡಿ ಹೇಳಿದರು.
ನೈಸರ್ಗಿಕ ಸಂಪನ್ಮೂಲ ಅತ್ಯಗತ್ಯ: ಅವರು ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯವು ಭಾರತೀಯ ಸಮಾಜ ವಿಜ್ಞಾನ ಅನುಸಂದಾನ ಸಂಸ್ಥೆ ಪ್ರಾಯೋಜಕತ್ವದಲ್ಲಿ ಆಯೋಜಿಸಿದ್ದ -ಮುಂದಿನ ಪೀಳಿಗೆಗಳ ಜೀವನೋಪಾಯಕ್ಕಾಗಿ ಮಣ್ಣು ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಅತ್ಯಗತ್ಯತೆ- ಬಗ್ಗೆ 2 ದಿನಗಳ ರಾಷ್ಟ್ರೀಯ ಕಾರ್ಯಾಗಾರವನ್ನು ಬುಧವಾರ ಉದ್ಘಾಟಿಸಿ, ಮುಂದಿನ ಪೀಳಿಗೆಗಾಗಿ ಮಣ್ಣು ಮತ್ತು ನೈಸರ್ಗಿಕ ಸಂರಕ್ಷಣೆಯ ಅಗತ್ಯತೆಯ ಬಗ್ಗೆ ಒತ್ತಿ ಹೇಳಿದರು.
ಬೆಳೆ ಪರಿವರ್ತನೆ ಅಗತ್ಯ: ಸಹಸಂಶೋಧನಾ ನಿರ್ದೇಶಕ ಡಾ. ವೈ. ವಿಶ್ವನಾಥ ಶೆಟ್ಟಿ, ಮೇಲ್ಮಣ್ಣು ಒಂದು ಅತ್ಯಂತ ಉಪಕಾರಿಯಾದ ಮಣ್ಣಾಗಿದ್ದು, ಅದರ ಸವಕಳಿಯನ್ನು ತಪ್ಪಿಸಲು ಬೆಳೆ ಪರಿವರ್ತನೆ ಹಾಗೂ ಅಂತರ ಬೆಳೆ ಪದ್ಧತಿ, ಸಾವಯವ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು ಭೂಮಿಯ ಫಲವತ್ತತೆಯನ್ನು ಕಾಪಾಡಲು ಕರೆ ನೀಡಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕೃಷಿ ಮಹಾವಿದ್ಯಾಲದಯ ಡೀನ್ ಡಾ. ಎಂ.ಎಸ್. ಗಣೇಶ್ ಬಾಬು, ಮಣ್ಣು ಮತ್ತು ನೀರು ನೈಸರ್ಗಿಕ ಸಂಪನ್ಮೂಲವಾಗಿದ್ದು, ಅದರ ಸಂರಕ್ಷಣೆ ರೈತರ ಹೊಣೆ ಎಂದರು.
ಕೃಷಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಬಿ. ಚಿನ್ನಪ್ಪ, ಸಸ್ಯ ರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಹೆಚ್. ನಾರಾಯಣ ಸ್ವಾಮಿ ಹಾಗೂ ಸಾವಯವ ಕೃಷಿ ಸಂಶೋಧನಾ ಕೇಂದ್ರದ ಸಂಯೋಜಕರಾದ ಡಾ. ಎಸ್. ಪ್ರದೀಪ್ ಕಾರ್ಯಾಗಾರ ಆಯೋಜಿಸಿದ್ದರು.
ಈ ಕಾರ್ಯಕ್ರಮದಲ್ಲಿ ಸಸ್ಯ ರೋಗ ವಿಭಾಗದ ಪ್ರಾಧ್ಯಾಪಕ ಡಾ. ರಾಮಸ್ವಾಮಿ ಹಾಗೂ ಕೃಷಿ ಕಾಲೇಜು, ವಲಯ ಕೃಷಿ ಸಂಶೋಧನಾ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ, ಸಾವಯವ ಕೃಷಿ ವಿಜ್ಞಾನ ಕೇಂದ್ರ, ಅಡಿಕೆ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಎರಡು ದಿನಗಳ ರಾಷ್ಟ್ರೀಯ ಸಮಾವೇಶದಲ್ಲಿ ವಿವಿಧ ರಾಜ್ಯಗಳಿಂದ ಸುಮಾರು 45 ಕೃಷಿ ವಿಜ್ಞಾನಿಗಳು ಭಾಗವಹಿಸಿ, ಅವರ ಸಂಶೋಧನಾ ಲೇಖನಗಳನ್ನು ಮಂಡಿಸಿದರು.