ಗ್ರಾಪಂ ಸದಸ್ಯರ ಆಗ್ರಹ

Updated on: 

ದಾವಣಗೆರೆ: ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ 2011- 12ನೇ ಸಾಲಿನಲ್ಲಿ ಚನ್ನಗಿರಿ ತಾ. ಕತ್ತಲಗೆರೆ ಗ್ರಾಮದ ಪವಿತ್ರವನ ಅಭಿವೃದ್ಧಿ ಕಾಮಗಾರಿ ಮುಗಿಸದೆ, ಮೀಸಲಿಟ್ಟ ಹಣದಲ್ಲಿ ಶೇ.75 ಹಣ ಪಡೆದು, ಬೋಗಸ್ ಬಿಲ್ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಪಂ ಅಧ್ಯಕ್ಷೆ ಸೇರಿದಂತೆ ಗ್ರಾಮಸ್ಥರು ಜಿಪಂ ಸಿಇಓಗೆ ಒತ್ತಾಯಿಸಿದ್ದಾರೆ.
ಕತ್ತಲಗೆರೆ ಗ್ರಾಮದ ಪವಿತ್ರವನ ಅಭಿವೃದ್ಧಿ ಹೆಸರಲ್ಲಿ ಬಾಕ್ಸ್ ಚರಂಡಿ, ಆರ್‌ಸಿಸಿ ಡಕ್ ಮಾಡಲು ಅವಕಾಶವನ್ನು ಕಲ್ಪಿಸಿದೆ. ಕಾಮಗಾರಿಯನ್ನು ತಾಪಂ ಸದಸ್ಯರೊಬ್ಬರು ತಮ್ಮ ಅಣ್ಣನ ಜೊತೆಗೂಡಿ ಮಾಡಿದ್ದಾರೆ. ಕಾಮಗಾರಿಗೆ ಟ್ರ್ಯಾಕ್ಟರ್ ಬಳಸಿ 4 ದಿನಗಳ ಕಾಲ ಲೆವೆಲ್ ಮಾಡಿಸಲಾಗಿದೆ. ಜೆಸಿಬಿಯಿಂದ ಜಂಗಲ್ ತೆಗೆದಿದ್ದು ಬಿಟ್ಟರೆ, ಒಳಚರಂಡಿ, ಆರ್‌ಸಿಸಿ ಡೆಕ್ ಆಗಲಿ ಯಾವುದನ್ನೂ ಮಾಡಿಲ್ಲ ಎಂದು ಅವರು ದೂರಿದ್ದಾರೆ.
ವಿಚಾರಣೆ ಹಂತದಲ್ಲಿ: ಜಮೀನು ವಿಚಾರ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದು, ಅಲ್ಲಿ ಯಾವುದೇ ಕಾಮಗಾರಿ ನಡೆಯದಂತೆ ತಡೆಯುವಂತೆ ದೂರು ಕೊಟ್ಟಿದ್ದರೂ, ಕಾಮಗಾರಿ ಹೆಸರಿನಲ್ಲಿ ಹಣವನ್ನು ಪಡೆದಿದ್ದಾರೆ. ಆದರೆ, ಅಲ್ಲಿ ಚರಂಡಿ, ಡಕ್ ಯಾವುದೂ ಇಲ್ಲ. ಲೆವೆಲ್ ಮಾಡಿರುವುದನ್ನು ಬಿಟ್ಟರೆ, ಯಾವುದೇ ಕೆಲಸವಂತೂ ಅಲ್ಲಿ ಆಗಿಲ್ಲ. ಸಂಬಂಧಿಸಿದ ಇಂಜಿನಿಯರ್‌ಗಳ ಮೇಲೆ ಮುಂಗಡ ಎನ್‌ಎಂಆರ್ ತೆಗೆಸಿಕೊಂಡಿದ್ದರ ಹಿನ್ನೆಲೆಯಲ್ಲಿ ಬಿಲ್ ಬರೆಯುವಂತೆ ಒತ್ತಡ ಹಾಕಿ, ಒಪ್ಪದಿದ್ದಾಗ ತಾಪಂ ಸಭೆಯಲ್ಲಿ ಇಲ್ಲಸಲ್ಲದ ಮಿಥ್ಯಾಪವಾದ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಕಾರ್ಯದರ್ಶಿ ವರ್ಗಾವಣೆ: ತಾಪಂ ಸದಸ್ಯ ತಮ್ಮ ಅಣ್ಣನ ಮುಖಾಂತರ ವಿವಿಧ ಅಧಿಕಾರಿಗಳಿಗೆ ಪಿಡಿಓ, ಕಾರ್ಯದರ್ಶಿ ವಿರುದ್ಧ ಅರ್ಜಿ ಹಾಕಿಸುವುದು, ತನಿಖೆಗೆ ಬಂದ ವೇಳೆ ತಾನೇ ಒಳ್ಳೆಯವನಂತೆ ವರ್ತಿಸಿ, ಪ್ರಕರಣಕ್ಕೆ ತೆರೆ ಎಲೆಯುತ್ತಾರೆ. ತನ್ನ ಒಳ್ಳೆಯತನ ಪ್ರದರ್ಶಿಸಿದ್ದಕ್ಕೆ ಪ್ರತಿಯಾಗಿ ತನ್ನ ಬಿಲ್ ಮಂಜೂರು ಮಾಡಿಸಿಕೊಳ್ಳುತ್ತಿರುವುದು ರಹಸ್ಯವಾಗೇನೂ ಇಲ್ಲ. ಕಳೆದೊಂದು ವರ್ಷದಲ್ಲಿ ತಾಪಂ ಸದಸ್ಯ, ಆತನ ಅಣ್ಣನ ಮಗ ಹಾಗೂ ಮತ್ತೊಬ್ಬ ವ್ಯಕ್ತಿ ಸೇರಿ, ಮೂವರು ಪಿಡಿಓಗಳು, ಮೂವರು ಕಾರ್ಯದರ್ಶಿಗೆ ವರ್ಗಾವಣೆ ಮಾಡಿಸಿದ್ದಾರೆ ಎಂದು ಅವರು ದೂರಿದ್ದಾರೆ.
ಖಾಲಿ ಎನ್‌ಎಂಆರ್ ವಜಾ: ಖಾತರಿ ಬಗ್ಗೆ ಯೋಜನಾ ಅಧಿಕಾರಿ ಪಂಚಾಯಿತಿಗೆ ಭೇಟಿ ನೀಡಿದ್ದಾಗ ತಾಪಂ ಸದಸ್ಯ ದೊಡ್ಡಪ್ಪನ ಮಗ ಹಳೆ ಕುಂದೂರು ರಸ್ತೆಯ ಕಾಮಗಾರಿ 2 ತಿಂಗಳ ಪ್ರಾರಂಭಿಸಿದ್ದಾಗಿ ತಾಪಂ ಕಚೇರಿಯಿಂದ ಎಂಇಎಸ್ ಮಾಡಿಸಿ, ಖಾಲಿ 3 ಎನ್‌ಎಂಆ ರ್ ತೆಗೆಸಿಕೊಂಡಿದ್ದಾರೆ. ಕಾಮಗಾರಿ ಸ್ಥಳ ಪರಿಶೀಲಿಸುವಂತೆ ಒತ್ತಡ ಬಂದಾಗ ಅಧಿಕಾರಿಗಳು ಸ್ಥಳ ಪರಿಶೀಲನೆ ವೇಳೆ ಯಾವುದೇ ಕಾಮಗಾರಿಯಾಗದಿರುವುದು ಸ್ಪಷ್ಟವಾಯಿತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಖಾಲಿ ಎನ್‌ಎಂಆರ್‌ಗಳನ್ನು ವಜಾ ಮಾಡಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಕಾನೂನು ಕ್ರಮಕ್ಕೆ ಆಗ್ರಹ: ತಾಪಂ ಸದಸ್ಯ ಈ ಎಲ್ಲಾ ಅಂಶಗಳನ್ನು ಪರಿಗಣಿಸಿ, ಇಂಜಿನಿಯರ್ ಮೇಲೆ ಒತ್ತಡ ಹಾಕಿ, ಕಾರ್ಯದರ್ಶಿಗಳಿಗೆ ಬೆದರಿಕೆ ಹಾಕಿ, ಬೋಗಸ್ ಬಿಲ್ ಪಡೆದಿದ್ದಾರೆ. ತಾಪಂ ಸದಸ್ಯ ಮತ್ತು ಆತನ ಸಂಬಂಧಿಗಳು ಪಡೆದಿರುವ ಹಣವನ್ನು ಸರ್ಕಾರದ ಬೊಕ್ಕಸಕ್ಕೆ ವಾಪಾಸ್ಸು ಪಡೆಯಬೇಕು. ಸರಿಯಾದ ಕೆಲಸ ಮಾಡಿದ್ದರೆ, ಹಣ ಪಾವತಿಸಬೇಕು. ಈ ಹಗರಣಕ್ಕೆ ಕಾರಣರಾದ ತಾಪಂ ಸದಸ್ಯ ಮತ್ತು ಆತನ ಅಣ್ಣನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಅವರು ಆಗ್ರಹಿಸಿದ್ದಾರೆ.
ಖಾತರಿ ಯೋಜನೆಯಲ್ಲಿ ಭ್ರಷ್ಟಾಚಾರಕ್ಕೆ ಕಾರಣರಾದ ತಾಪಂ ಸದಸ್ಯನ ಸದಸ್ಯತ್ವವನ್ನೇ ರದ್ಧುಪಡಿಸಿ, ಕಾನೂನು ಕ್ರಮ ಜರುಗಿಸಲು ಕತ್ತಲಗೆರೆ ಗ್ರಾಪಂ ಅಧ್ಯಕ್ಷೆ ಹಾಲಮ್ಮ, ಎಂ. ಕರಿಬಸಪ್ಪ, ಪ್ರಸನ್ನ, ಮಂಜುನಾಥ, ನಾಗರಾಜ, ಜಿ.ಎಸ್. ಗುರುಪಾದಪ್ಪ, ಎಚ್.ಎನ್. ಕೊಟ್ರೇಶ, ಧರ್ಮಪ್ಪ, ಎಚ್. ಮಂಜುನಾಥ, ಬಿ. ಬೀರಪ್ಪ, ಶಶಿಕಲಾ, ಇಂದಿರಮ್ಮ, ಗಣೇಶ ಸೇರಿದಂತೆ ಅನೇಕರ ಜಿಪಂ ಸಿಇಓಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಅವರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com