ಹರಿಹರ: ಲಲಿತ ಕಲೆಗೆ ಮನುಷ್ಯನನ್ನು ಸುಸಂಸ್ಕೃತ ಮಾನವನನ್ನಾಗಿ ಮಾಡುವ ಶಕ್ತಿ ಇದೆ ಎಂದು ಕರ್ನಾಟಕ ಲಲಿತ ಕಲಾ ಅಕಾಡೆಮಿ ಅಧ್ಯಕ್ಷ ಚಿ.ಸು. ಕೃಷ್ಣಶೆಟ್ಟಿ ನುಡಿದರು.
ನಗರದ ಗಿರಿಯಮ್ಮ ಮಹಿಳಾ ಪದವಿ ಕಾಲೇಜಿನಲ್ಲಿ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಲಲಿತಕಲಾ ಅಕಾಡೆಮಿ, ಸಾಹಿತ್ಯ ವೇದಿಕೆ, ಶ್ರೀಮತಿ ಗಿರಿಯಮ್ಮ ಮಹಿಳಾ ಪದವಿ ಕಾಲೇಜು, ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಸಹಯೋಗದಲ್ಲಿ ಬುಧವಾರ ನಡೆದ 'ನಿಮ್ಮೊಂದಿಗೆ ನಾವು -2013' ಚಿತ್ರಕಲಾ ಕಾರ್ಯಾಗಾರ ಉದ್ಘಾಟನೆ ಮತ್ತು ಚಿತ್ರಕಲಾ ಪ್ರದರ್ಶನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಿಂದಲೇ ಚಿತ್ರಕಲೆ ಬಗ್ಗೆ ಆದ್ಯತೆ ನೀಡಬೇಕು. ಚಿತ್ರಕಲಾ ಶಿಕ್ಷಕರ ನೇಮಕಾತಿ, ಚಿತ್ರಕಲೆಯ ಪುಸ್ತಕಗಳ ಪೂರೈಕೆ ಸೇರಿದಂತೆ ಅನೇಕ ಅವಶ್ಯಕತೆಗಳನ್ನು ಸರ್ಕಾರ ಪೂರೈಸಬೇಕು ಎಂದು ಆಗ್ರಹಿಸಿದರು.
ಚಿತ್ರಕಲಾ ಪ್ರದರ್ಶನವನ್ನು ಸಾ.ಶಿ ಇಲಾಖೆ ಉಪ ನಿರ್ದೇಶಕ ಡಿ.ಕೆ. ಶಿವಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಂಶುಪಾಲ ಡಾ.ಎಸ್.ಎಚ್. ಪ್ಯಾಟಿ ಅಧ್ಯಕ್ಷತೆ ವಹಿಸಿದ್ದರು. ಎಚ್.ಎಂ. ಪ್ರೇಮಾ, ಬಿಇಒ ಬಸವರಾಜಪ್ಪ, ಸಾ.ಶಿ. ಇಲಾಖೆಯ ಚಿತ್ರಕಲಾ ವಿಷಯ ಪರಿವೀಕ್ಷಕ ಮಹಂತೇಶ ಅ.ಕಂಠಿ, ಸಿ.ಎಸ್. ಕಾತ್ಯಾಯಿನಿ, ನಾಗಭೂಷಣ, ಸಾಹಿತಿ ಕಲಿಂಭಾಷಾ, ಸಿಟಿಪಿಒ ಜೆ.ಸಿ. ಚಂದ್ರಪ್ಪ, ಮಂಜುನಾಥಯ್ಯ ಭಾಗವಹಿಸಿದ್ದರು.