ದಾವಣಗೆರೆ: ದಾವಣಗೆರೆ ಪಾಲಿಕೆಯ 41 ವಾರ್ಡ್ಗೆ ಅಂತಿಮ ಕಣದಲ್ಲಿ ಬಂಡಾಯ ಕಹಳೆ ಊದಿದವರು, ಸ್ವತಂತ್ರ ಅಭ್ಯರ್ಥಿಗಳು, ವಿವಿಧ ಪಕ್ಷದ ಅಭ್ಯರ್ಥಿಗಳೂ ಸೇರಿದಂತೆ ಒಟ್ಟು 786 ಅಭ್ಯರ್ಥಿಗಳು ಉಳಿದಿದ್ದಾರೆ. ಪಾಲಿಕೆ ಅಂತಿಮ ಕಣದಲ್ಲಿ 266 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಪಾಲಿಕೆಯ 41 ವಾರ್ಡ್ಗೆ 266 ಮಂದಿ ಕಣದಲ್ಲಿದ್ದಾರೆ. ಇದರಲ್ಲಿ ಕಾಂಗ್ರೆಸ್ 41, ಬಿಜೆಪಿ 40, ಜೆಡಿಎಸ್ 36, ಸಿಪಿಐ 3, ಎನ್ಸಿಪಿ 1, ಸ್ವತಂತ್ರ 75, ಬಿಎಸ್ಸಾರ್ ಕಾಂಗ್ರೆಸ್ 33, ಕೆಜೆಪಿ 37 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
ಈಗಾಗಲೇ ಪಾಲಿಕೆ ವ್ಯಾಪ್ತಿಯಲ್ಲಿ ಬಿಜೆಪಿ- ಕಾಂಗ್ರೆಸ್ ಜಿದ್ದಾಜಿದ್ದಿ ಹೋರಾಟದ ಮಧ್ಯೆ ಎರಡೂ ಪಕ್ಷಗಳಿಗೆ ಬಂಡಾಯ ಹಾಗೂ ಸ್ವತಂತ್ರ ಅಭ್ಯರ್ಥಿಗಳು ನಿದ್ದೆ ಮಾಡಿರುವುದು ಸುಳ್ಳಲ್ಲ. ಕೆಜೆಪಿ, ಬಿಎಸ್ಸಾರ್ ಕಾಂಗ್ರೆಸ್ ಪಕ್ಷಗಳೂ ತಮ್ಮ ಓಟಿಗೆ ಕೈ ಹಾಕುತ್ತವೆ ಎಂಬ ಭಯ ಇದೀಗ ರಾಜಕೀಯ ಪಕ್ಷಗಳ ಭಯಕ್ಕೆ ಕಾರಣವಾಗಿದೆ.
ಮನವೊಲಿಸಲು ಯತ್ನ: ಬಿಜೆಪಿಗೆ ಬಂಡಾಯ ಅಭ್ಯರ್ಥಿಗಳು ಹಾಗೂ ಕೆಜೆಪಿಯಿಂದಲೇ ಹೆಚ್ಚು ನಷ್ಟವಾಗುವ ಭೀತಿ ಆವರಿಸಿದ್ದರೆ, ಕಾಂಗ್ರೆಸ್ ಪಕ್ಷಕ್ಕೆ ಬಿಎಸ್ಸಾರ್ ಕಾಂಗ್ರೆಸ್ ಇತರೆ ಪಕ್ಷಗಳು ಮತದಲ್ಲಿ ಪಾಲು ಪಡೆಯುವ ಭಯ ತುಂಬಿದೆ. ಈ ಮಧ್ಯೆ ತೆರೆ ಮರೆಯಲ್ಲೇ ಪ್ರಮುಖ ಪಕ್ಷಗಳ ನಾಯಕರು, ಜಿಲ್ಲಾ ಮುಖಂಡರು ಪ್ರಯತ್ನ ನಡೆಸಿದ್ದರು. ಹಾಲಿ, ಮಾಜಿ ಅಧಿಕಾರಸ್ಥರೂ ಈಗ ಸ್ವತಂತ್ರ ಅಭ್ಯರ್ಥಿಗಳನ್ನು ಕರೆಸುತ್ತಾ, ಹಾರ ಹಾಕಿ ಪಕ್ಷಕ್ಕೆ ಬೆಂಬಲಿಸುವಲ್ಲಿ ಮಗ್ನರಾಗಿದ್ದಾರೆ. ಬಂಡಾಯದ ಕಾವು ಅನೇಕ ಪಕ್ಷಗೆ ತಾಗಿದೆ. ಪಕ್ಷದ ಶಕ್ತಿಯಾಗಿದ್ದ ಯುವಜನರೆ ಬಂಡಾಯ ಬಿದ್ದಿರುವುದು ನಾಯಕರ ಚಿಂತೆಗೆ ಕಾರಣವಾಗಿದೆ. ಮತ್ತೊಂದು ಕಡೆ ಕೆಜೆಪಿ, ಬಿಎಸ್ಸಾರ್ ಕಾಂಗ್ರೆಸ್ ಸೇರಿದಂತೆ ಅನೇಕ ಪಕ್ಷಗಳು ನಿದ್ದೆ ಮಾಡದಂತೆ ಕಾಡುತ್ತಿವೆ. ಈ ಮಧ್ಯೆ ಕೆಲ ಬಂಡಾಯ ಅಭ್ಯರ್ಥಿಗಳಿಗೆ ಯಾವುದೇ ಭರವಸೆ, ಆಶ್ವಾಸನೆಗೆ ಕಿವಿಗೊಡುತ್ತಿಲ್ಲ. ಕೆಲ ಬಂಡಾಯ ಅಭ್ಯರ್ಥಿಗಳಂತೂ ನಾಮಪತ್ರ ವಾಪಸ್ ಪಡೆಯಲು ಅಂತಿಮ ದಿನವಾದ ಬುಧವಾರ ನೇರವಾಗಿ ಅಲ್ಲದಿದ್ದರೂ, ಮೊಬೈಲ್ ಸಂಪರ್ಕಕ್ಕೂ ಸಿಗಲಿಲ್ಲ. ಆದರೂ, ಕೆಲವರ ಬಂಡಾಯವನ್ನು ಆಯಾ ಪಕ್ಷಗಳು ಮುಖಂಡರು ಮಾಡಿದ್ದಾರೆ.
ಮತ್ತೆ ಕೆಲವರು ಹೋದರೆ ಒಂದೇ ಸೈಟ್, ಬಂದರೆ ಹತ್ತು ಸೈಟ್ ಎಂಬ ಲೆಕ್ಕಾಚಾರದಲ್ಲೇ ಕಣಕ್ಕಿಳಿದಿದ್ದಾರೆ. ಕೆಲವೆಡೆ ಒಮ್ಮತದಿಂದ ಇಂತಹದ್ದೇ ಅಭ್ಯರ್ಥಿಗೆ ಬೆಂಬಲಿಸಬೇಕೆಂಬ ನಿರ್ಧಾರಕ್ಕೂ ಬಂದಿದ್ದಾರೆನ್ನಲಾಗುತ್ತಿದೆ. ಚುನಾವಣೆ ಘೋಷಣೆಯಾದ ದಿನದಿಂದಲೇ ಭರ್ಜರಿ ಬಾಡೂಟದ ಆತಿಥ್ಯ ಅಭ್ಯರ್ಥಿಗಳು ಹಿಂಬಾಲಕರಿಗೆ ನೀಡುತ್ತಿದ್ದಾರೆ.
ಅಂತಿಮ ಕಣದಲ್ಲಿ 786 ಅಭ್ಯರ್ಥಿಗಳು
ದಾವಣಗೆರೆ: ದಾವಣಗೆರೆ ಪಾಲಿಕೆ ಸೇರಿ ನಗರ ಸ್ಥಳೀಯ ಸಂಸ್ಥೆ ಚುನಾವಣೆ ಕಣದಲ್ಲಿ 786 ಅಭ್ಯರ್ಥಿಗಳಿದ್ದಾರೆ.
ಪಾಲಿಕೆಯ 41 ವಾರ್ಡ್ಗೆ 266 ಮಂದಿ ಕಣದಲ್ಲಿದ್ದಾರೆ. ಇದರಲ್ಲಿ ಕಾಂಗ್ರೆಸ್ 41, ಬಿಜೆಪಿ 40, ಜೆಡಿಎಸ್ 36, ಸಿಪಿಐ 3, ಎನ್ಸಿಪಿ 1, ಸ್ವತಂತ್ರ 75, ಬಿಎಸ್ಸಾರ್ 33, ಕೆಜೆಪಿ 37 ಅಭ್ಯರ್ಥಿಗಳಿದ್ದಾರೆ.
ಹರಿಹರ ನಗರಸಭೆಯ 31 ವಾರ್ಡ್ಗೆ 169 ಮಂದಿ ಇದ್ದಾರೆ. ಕಾಂಗ್ರೆಸ್ 30, ಬಿಜೆಪಿ 22, ಜೆಡಿಎಸ್ 30, ಸ್ವತಂತ್ರ 32, ಜೆಡಿಯು 6, ಬಿಎಸ್ಸಾರ್ 20, ಕೆಜೆಪಿಯಿಂದ 28 ಮಂದಿ ಅಂತಿಮವಾಗಿದ್ದಾರೆ.
ಹರಪನಹಳ್ಳಿ ಪುರಸಭೆ 27 ವಾರ್ಡ್ಗೆ 132ರ ಪೈಕಿ 27 ಕಾಂಗ್ರೆಸ್, 27 ಬಿಜೆಪಿ, 16 ಜೆಡಿಎಸ್, 62 ಸ್ವತಂತ್ರ ಅಭ್ಯರ್ಥಿಗಳಾಗಿದ್ದಾರೆ. ಹೊನ್ನಾಳಿ ಪಪಂ 16 ವಾರ್ಡ್ಗೆ 74 ಮಂದಿ ಅಂತಿಮ ಕಣದಲ್ಲಿ ಇದ್ದಾರೆ. ಇದರಲ್ಲಿ ಕಾಂಗ್ರೆಸ್ 16, ಬಿಜೆಪಿ 16, ಜೆಡಿಎಸ್ 14, ಸ್ವತಂತ್ರ 13, ಬಿಎಸ್ಸಾರ್ ಕಾಂಗ್ರೆಸ್ 8, ಕೆಜೆಪಿ 7 ಮಂದಿ ಇದ್ದಾರೆ.
ಚನ್ನಗಿರಿ ಪಪಂ 19 ವಾರ್ಡ್ಗೆ 81 ಮಂದಿ ಕಣದಲ್ಲಿದ್ದಾರೆ. ಜಗಳೂರು ಪಪಂಗೆ 15 ವಾರ್ಡ್ಗೆ 64 ಮಂದಿ ಕಣದಲ್ಲಿ ಉಳಿದಿದ್ದಾರೆ. ಕಾಂಗ್ರೆಸ್ 15, ಬಿಜೆಪಿ 15, ಜೆಡಿಎಸ್ 14, ಸ್ವತಂತ್ರ 5, ಬಿಎಸ್ಸಾರ್ ಕಾಂಗ್ರೆಸ್ 6, ಕೆಜೆಪಿ 9 ಮಂದಿ ಕಣದಲ್ಲಿದ್ದಾರೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.