ಜಿ.ಎಚ್ ರಾಜು ಹೊನ್ನಾಳಿ
ಹೊನ್ನಾಳಿ: ಆಧುನಿಕ ಜೀವನ ಶೈಲಿ, ಟಿ.ವಿ. ಮಾಧ್ಯಮದ ಹಾವಳಿಯಿಂದಾಗಿ ಮೂಲೆ ಗುಂಪಾಗುತ್ತಿರುವ ನಾಟಕ ರಂಗಭೂಮಿ ಚಟುವಟಿಕೆಗಳನ್ನೇ ನಂಬಿರುವ ಅನೇಕ ನಾಟಕ ಕಂಪವಿಗಳೂ ಕೂಡ ಇಂದು ಕ್ಷೀಣಿಸುತ್ತಿವೆ. ಇಂತಹ ಚಟುವಟಿಕೆಗಳಾಗಿಯೇ ರಂಗಮಂದಿರಗಳಂತಹ ಕಟ್ಟಡಗಳೂ ಕೂಡ ಇದೀಗ ಉಪಯೋಗಕ್ಕೆ ಬಾರದ ಪಳೆಯುಳಿಕೆಗಳಾಗಿ ಉಳಿಯುತ್ತಿವೆ ಎಂಬುದಕ್ಕೆ ತಾಲೂಕಿನ ಕತ್ತಿಗೆ ಗ್ರಾಮದ ಲಂಕೇಶ್ ಬಯಲು ರಂಗಮಂದಿರ ಮೂಕಸಾಕ್ಷಿಯಾಗಿದೆ.
ಕಲೆ ಸಾಹಿತ್ಯ ಜಾನಪದ ಸಂಸ್ಕೃತಿ ಆಚರಣೆ ಹಾಗೂ ರಂಗಭೂಮಿ ಚಟುವಟಿಕೆಯ ಬೆಳವಣಿಗೆಗೆ ಫಲವತ್ತಾದ ಪ್ರದೇಶ ಎಂದು ಗುರುತಿಸಿಕೊಂಡಿದ್ದ ತಾಲೂಕಿನ ಕತ್ತಿಗೆ ಗ್ರಾಮದಲ್ಲಿ 1984ರ ಸಮಯದಲ್ಲಿ ಮುಖ್ಯ ಮಂತ್ರಿ ರಾಮಕೃಷ್ಣ ಹೆಗಡೆಯವರ ಅಡಳಿತದಲ್ಲಿ ಸುಸಜ್ಜಿತ ಬಯಲು ರಂಗಮಂದಿರ ನಿರ್ಮಿಸಿ ಇದಕ್ಕೆ ಪಿ. ಲಂಕೇಶ್ ಬಯಲು ರಂಗಮಂದಿರ ಎಂದು ನಾಮಕರಣ ಮಾಡಲಾಗಿತ್ತು.
ಉತ್ತಮ ವೇದಿಕೆಯಾಗಿತ್ತು: ಹೆಸರಿಗೆ ತಕ್ಕಂತೆ ಅಂದಿನ ದಿನಗಳಲ್ಲಿ ಈ ರಂಗಮಂದಿರ ಒಂದು ಉತ್ತಮ ಸಾಂಸ್ಕೃತಿಕ ಕಲೆ ಸಾಹಿತ್ಯ ಹಾಗೂ ರಂಗಭೂಮಿ ಚಟುವಟಿಕೆಗಳಿಗೆ ಒಂದು ಉತ್ತಮ ವೇದಿಕೆಯಾಗಿ ರೂಪುಗೊಂಡಿತ್ತು. ಆರಂಭ ದಿನಗಳಲ್ಲಿ ಈ ರಂಗಮಂದಿರದಲ್ಲಿ ಎಲ್ಲಾ ರೀತಿಯ ರಂಗ ಚಟುವಟಿಕೆ ನಡೆಯುತ್ತಿದ್ದು, ರಂಗಮಂದಿರದ ನಿರ್ವಹಣೆ ಕೂಡ ಗ್ರಾಮಸ್ಥರ ನೆರವಿನಿಂದ ಉತ್ತಮ ರೀತಿಯಲ್ಲಿ ನಡೆದುಕೊಂಡು ಬರುತ್ತಿತ್ತು.
ಈ ಮಧ್ಯೆ ಶಾಲಾ ಕಾಲೇಜುಗಳ ವತಿಯಿಂದ ನಡೆಯುವ ಎನ್ನೆಸ್ಸೆಸ್ ಸ್ವಯಂ ಸೇವಾ ಶಿಬಿರಗಳ ವಿದ್ಯಾರ್ಥಿಗಳ ಶ್ರಮದಾನದಿಂದ ರಂಗಮಂದಿರದ ಸುತ್ತಮುತ್ತಲ ವಾತವರಣ ಕೂಡ ಉತ್ತಮವಾಗಿಯೇ ಇತ್ತು. ಆದರೆ, ಕಾಲ ಕ್ರಮೇಣ ಪ್ರತಿಭಾವಂತ ಯುವಕರು ವ್ಯಾಸಂಗ ಸೇರಿದಂತೆ ವಿವಿಧ ಕಾರಣಗಳಿಗಾಗಿ ಪಟ್ಟಣಗಳ ಕಡೆಗೆ ಮುಖಮಾಡಿದ್ದರೊಂದಿಗೆ, ಗ್ರಾಮದಲ್ಲಿ ಉಳಿದವರ ಅನಾದರ ಕಾರಣ ಈ ರಂಗಮಂದಿರದಲ್ಲಿ ಯಾವುದೇ ರೀತಿಯ ಕಾರ್ಯಕ್ರಮ ನಡೆಯದ ಹಿನ್ನಲೆಯಲ್ಲಿ ಇದೀಗ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.
ಕಸದ ರಾಶಿ: ಇದೀಗ ಈ ರಂಗಮಂದಿರದ ಆವರಣದಲ್ಲಿ ಗಿಡಗಂಟಿಗಳು ಬೆಳದು ನಿಂತಿದ್ದು, ಅನುಪಯುಕ್ತ ವಸ್ತುಗಳನ್ನು ಜನ ಇಲ್ಲಿ ಎಸೆಯುವುದರಿಂದ ಇಡೀ ಆವರಣ ಕಸದ ತೊಟ್ಟಿಯಾಗಿದೆ.
ಇನ್ನು ರಂಗಮಂದಿರದ ಒಳಗಡೆ ಕೋಣೆಗಳಲ್ಲಿಯೂ ಎಲ್ಲೆಂದರಲ್ಲಿ ಇಸ್ಪೀಟ್ ಎಲೆ, ಕುಡಿತ ಮೋಜು ಮಾಡಿದ ಬಗ್ಗೆ ಕುರುಹುಗಳಿದ್ದು, ಕಸದ ರಾಶಿಯಿಂದ ಕೂಡಿದೆ.
ಕನ್ನಡ, ಸಂಸ್ಕೃತಿ ನಿರ್ವಹಣೆಗಾಗಿಯೇ ಇರುವ ಸರ್ಕಾರದ ಇಲಾಖೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಇತ್ತ ಕಡೆ ಗಮನಹರಿಸಿ ಒಬ್ಬ ಕ್ರಿಯಾಶೀಲ ಸಾಹಿತಿ ಹಾಗೂ ಪತ್ರಕರ್ತ ಪಿ. ಲಂಕೇಶ್ ಅವರ ಹೆಸರಿನ ರಂಗಮಂದಿರ ಉಳಿಸುವ ಕಾಯಕಲ್ಪದಲ್ಲಿ ತೊಡಗುವರೇ ಎಂಬ ಬಗ್ಗೆ ಜನ ನಿರೀಕ್ಷೆಯಲ್ಲಿದ್ದಾರೆ.