ದಾವಣಗೆರೆ: ಸ್ಪೀಕರ್ ಕಚೇರಿಯನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಬಿಜೆಪಿಯ 16 ಶಾಸಕರ ಅನರ್ಹತೆಗೆ ಕಾರಣರಾಗಿದ್ದಂತಹ ಯಡಿಯೂರಪ್ಪ ವಿರುದ್ಧ ಅದೇ ತಂತ್ರ ಅನುಸರಿಸಿದ ಸಿಎಂ ಜಗದೀಶ ಶೆಟ್ಟರ್ ಅದನ್ನೇ ತಿರುಗುಬಾಣವಾಗಿ ಪ್ರಯೋಗಿಸಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 16 ಶಾಸಕರನ್ನು ಯಡಿಯೂರಪ್ಪ ಸ್ವೀಕರ್ ಕಚೇರಿಯನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಅನರ್ಹಗೊಳಿಸಿದ್ದರು. ನಂತರ ಶಾಸಕರ ಅನರ್ಹತೆಯ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಸ್ಪೀಕರ್, ಸಿಎಂಗೆ ಛೀಮಾರಿ ಹಾಕಿದ್ದ ಸುಪ್ರೀಂ ಕೋರ್ಟ್ ಶಾಸಕರ ಅನರ್ಹತೆ ಆದೇಶ ರದ್ಧುಗೊಳಿಸಿತ್ತು ಎಂದರು.
ಅಂದು ಬಿಎಸ್ವೈ ಇಂದು ಶೆಟ್ಟರ್: ಅಂದು ಸ್ಪೀಕರ್ ಕಚೇರಿಯನ್ನು ಬಿ.ಎಸ್. ಯಡಿಯೂರಪ್ಪ ದುರುಪಯೋಗಪಡಿಸಿಕೊಂಡಿದ್ದರೆ, ಅದೇ ತಂತ್ರವನ್ನು ಇಂದು ಜಗದೀಶ ಶೆಟ್ಟರ್ ಅನುಸರಿಸಿದ್ದಾರೆ. ಯಡಿಯೂರಪ್ಪ ಬಿಟ್ಟಿದ್ದ ಬಾಣವೇ ತಿರುಗುಬಾಣವಾಗುವಂತೆ ಶೆಟ್ಟರ್ ಮಾಡಿದ್ದಾರೆ. ಸಂವಿಧಾನಿಕ ಸಂಸ್ಥೆಯಾದ ಸ್ಪೀಕರ್ ಕಚೇರಿಯನ್ನು ಅಂದು ಯಡಿಯೂರಪ್ಪ ದುರ್ಬಳಕೆ ಮಾಡಿಕೊಂಡಿದ್ದರೆ, ಅದೇ ಕೆಲಸ ಇಂದು ಶೆಟ್ಟರ್ ಮಾಡುತ್ತಿದ್ದಾರೆ ಎಂದು ಅವರು ದೂರಿದರು.
ಬಹುಮತ ಕಳೆದುಕೊಂಡ ಜಗದೀಶ ಶೆಟ್ಟರ್ ಹಿಂದೆ ಬೊಮ್ಮಾಯಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆದೇಶ ಗಮನದಲ್ಲಿ ಇಟ್ಟುಕೊಂಡು ಮುಂದುವರಿಯಬೇಕಾಗುತ್ತದೆ. ಮೊದಲು ಶೆಟ್ಟರ್ ಬಹುಮತ ಸಾಬೀತುಪಡಿಸಲಿ.
ಆ ನಂತರವೇ ಬಜೆಟ್ ಮಂಡಿಸುವ ಕೆಲಸಕ್ಕೆ ಮುಂದಾಗಬೇಕಾಗುತ್ತದೆ. ರಾಜ್ಯಪಾಲರು ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂದು ಅವರು ತಿಳಿಸಿದರು.
ತೀವ್ರ ಆಕ್ರೋಶ: ಪೂರ್ವ ಮಾಹಿತಿಯೋ, ಪಶ್ಚಿಮ ಮಾಹಿತಿಯೋ ಗೊತ್ತಿಲ್ಲ. ಬಿಜೆಪಿಯ 13 ಶಾಸಕರು ರಾಜಿನಾಮೆ ನೀಡಲು ಬಂದಾಗ ಸ್ಪೀಕರ್ ಬೋಪಯ್ಯ ಕಚೇರಿಯಲ್ಲಿ ಇಲ್ಲದೆ ಇದ್ದುದು ಸಾಕಷ್ಟು ಅನುಮಾನಗಳಿಗೂ ಕಾರಣವಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ದೂರಿದರು.
ಯಡಿಯೂರಪ್ಪ ಬೆಂಬಲಿಗರಾದ 13 ಶಾಸಕರು ರಾಜಿನಾಮೆ ನೀಡಲು ಬಂದಾಗ ಸ್ಪೀಕರ್ ಬೋಪಯ್ಯ ನಾಪತ್ತೆಯಾಗಿದ್ದುದು ಸರಿಯಲ್ಲ. ಸ್ಪೀಕರ್ ವರ್ತನೆ ಸಾಕಷ್ಟು ಅನುಮಾನಕ್ಕೂ ದಾರಿ ಮಾಡಿಕೊಟ್ಟಿದೆ ಎಂದರು.
ಬೋಪಯ್ಯ ತಾವು ಎಲ್ಲಿಗೆ ಹೋಗುತ್ತಿದ್ದೇವೆಂಬ ಬಗ್ಗೆ ತಮ್ಮ ಕಚೇರಿಗೆ ಮಾಹಿತಿ ನೀಡದಿರುವುದು ಸರಿಯಲ್ಲ. ಜವಾಬ್ಧಾರಿಯುತ ಸ್ಥಾನದಲ್ಲಿರುವ ಸ್ಪೀಕರ್ ಕಚೇರಿಗೆ ತಾವು ಎಲ್ಲಿಗೆ ಹೋಗಿದ್ದೇವೆಂಬ ಬಗ್ಗೆ ಮಾಹಿತಿಯನ್ನು ನೀಡಿದ್ದರೆ ಇಂತಹ ಅನುಮಾನವೂ ಹುಟ್ಟುತ್ತಿರಲಿಲ್ಲ. ಒಟ್ಟಾರೆ, ಸ್ಪೀಕರ್ ನಡೆ ಮಾತ್ರ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.