ಹೊನ್ನಾಳಿ: ತಾಲೂಕಿನಲ್ಲಿ ಹಲವಾರು ಸರ್ಕಾರಿ ಕಟ್ಟಡಗಳನ್ನು ಸರ್ಕಾರದ ಲಕ್ಷಾಂತರ ರೂಪಾಯಿ ಅನುದಾನದಲ್ಲಿ ನಿರ್ಮಿಸಲಾಗುತ್ತಿದ್ದು, ಇಂತಹ ಕಾಮಗಾರಿಗಳ ಮೇಲೆ ಸಚಿವರ ಹೆಸರನ್ನು ದಪ್ಪ ಅಕ್ಷರಗಳಲ್ಲಿ ಹಾಕಲಾಗುತ್ತಿರುದು ಪ್ರಜಾತಂತ್ರ ಸರ್ಕಾರಿ ವ್ಯವಸ್ಥೆಯನ್ನು ಅಣಕಿಸಿದಂತಿದೆ ಎಂದು ಕಾಂಗ್ರೆಸ್ ಮುಖಂಡ ಎಚ್.ಬಿ. ಮಂಜಪ್ಪ, ಜೆಡಿಎಸ್ ಮುಖಂಡ ಎಂ.ಆರ್. ಮಹೇಶ್ ಸೇರಿದಂತೆ ಹಲವರು ಅಭಿಪ್ರಾಯಪಟ್ಟಿದ್ದಾರೆ.
ಸರ್ಕಾರಿ ಕಟ್ಟಡಗಳ ಮೇಲೆ ಮೂಲ ಹೆಸರಿನ ಬದಲಿಗೆ ಸಚಿವರ ಹೆಸರನ್ನೇ ಪ್ರಧಾನವಾಗಿ ನಾಮಫಲಕಗಳಲ್ಲಿ ಸಿಮೆಂಟ್ ಮೌಲ್ಡ್ ಅಕ್ಷರಗಳಲ್ಲಿ ನಿರ್ಮಿಸುತ್ತಿರುವ ಕ್ರಮ ಖಂಡಿಸಿ ಭಾನುವಾರ ಸ್ಥಳೀಯ ನೂತನ ನೂರು ಹಾಸಿಗೆ ಅಸ್ಪತ್ರೆ ಕಟ್ಟಡ ಮುಂದೆ ಮುಖಂಡರೊಂದಿಗೆ ಸೇರಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಮಾತನಾಡಿದರು.
ಉದಾಹರಣೆಗಳಿಲ್ಲ: ಜೆಡಿಎಸ್ ಮುಖಂಡ ಎಂ.ಆರ್. ಮಹೇಶ್ ಮಾತನಾಡಿ, ರಾಜ್ಯದಲ್ಲಿ ಎಲ್ಲಿ ಕೂಡ ಈ ರೀತಿಯ ಸರ್ಕಾರಿ ಹಣದಲ್ಲಿ ಸರ್ಕಾರಿ ಕಟ್ಟಡಗಳ ಮೇಲೆ ದೊಡ್ಡದಾಗಿ ತಮ್ಮ ಹೆಸರುಗಳನ್ನು ಸಿಮೆಂಟ್ ಅಕ್ಷರಗಳಲ್ಲಿ ಅಚ್ಚುಹಾಕಿಸಿಕೊಂಡ ಸಚಿವರ ಉದಾಹರಣೆಗಳಿಲ್ಲ ಎಂದರು.
ಸರ್ಕಾರದ ಒಬ್ಬ ಪ್ರತಿನಿಧಿಯಾಗಿ ಜನಸೇವೆ ಹೆಸರಿನಲ್ಲಿ ಜನರಿಗಾಗಿ ಸರ್ಕಾರಿ ಹಣದಲ್ಲಿ ಮಾಡಲಾದ ಕಾಮಗಾರಿ ಮೇಲೆ ಈ ರೀತಿ ಹೆಸರು ಹಾಕಿಸಿಕೊಳ್ಳುವ ಕೀಳು ರಾಜಕಾರಣಕ್ಕೆ ಸ್ಥಳೀಯ ಶಾಸಕ ಹಾಗೂ ಅಬಕಾರಿ ಸಚಿವರು ಇಳಿದಿರುವುದು ರಾಜಕೀಯ ದಿವಾಳಿತನದ ಪರಮಾವಧಿ ಎಂದು ಹೇಳಿದರು.
ಬೇಕಾದ ಕಟ್ಟಡದ ಒಂದು ಭಾಗದಲ್ಲಿ ಇವರ ಹೆಸರು ಕೆತ್ತಿದ ಕಲ್ಲು ಹಾಕಿಸಿಕೊಳ್ಳಲಿ ಇದನ್ನು ಬಿಟ್ಟು ಸರ್ಕಾರಿ ಕಟ್ಟಣಡದ ಮೇಲೆ ನಾಮಫಲಕದಲ್ಲಿ ದೊಡ್ಡದಾಗಿ ಹೆಸರು ಹಾಕಿಸಿಕೊಂಡು ಕಟ್ಟಡದ ಹೆಸರನ್ನು ಸಣ್ಣದಾಗಿ ಹಾಕಿಸಿಕೊಳ್ಳುತ್ತಿರುವುದು ಅಧಿಕಾರದ ದುರುಪಯೋಗವಾಗುತ್ತದೆ ಎಂದರು.
ಕಾಂಗ್ರೆಸ್ ಹಿರಿಯ ಮುಖಂಡ ಬಿ. ಸಿದ್ದಪ್ಪ ಹಾಗೂ ಎಂ. ಸಿದ್ದಪ್ಪ ಮಾತನಾಡಿ, ಸಚಿವರ ಈ ರೀತಿಯ ನಡವಳಿಕೆಗಳು ಅನಗತ್ಯವಾಗಿ ಶಾಂತಿ ಭಂಗವಾಗುವಂತೆ ಮಾಡಬಹುದಾಗಿದ್ದು, ಈ ರೀತಿಯ ನಡವಳಿಕೆಗಳ ಬಗ್ಗೆ ಜಿಲ್ಲಾಡಳಿತ ನಿಗಾವಹಿಸಿ ಕ್ರಮ ಕೈಗೊಳ್ಳಬೇಕು ಎಂದು ಸ್ಥಳಕ್ಕೆ ಅಗಮಿಸಿ ಮನವಿ ಪತ್ರ ಸ್ವೀಕರಿಸಿದ ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ಅವರಿಗೆ ಮನವಿ ಮಾಡಿದರು.