ಕೆಲವೇ ದಿನದಲ್ಲಿ ನೀರಿಗೆ ಹಾಹಾಕಾರ

Updated on: 

ದಾವಣಗೆರೆ: ಭದ್ರಾ ನಾಲೆಯಲ್ಲಿ ಹಿಂದೆ ನೀರು ಬಿಟ್ಟಾಗಲೇ ಕೆರೆ ತುಂಬಿಸಿಕೊಳ್ಳದೇ ನಿರ್ಲಕ್ಷ್ಯ ತೋರಿದ್ದ ಪಾಲಿಕೆ ಅಧಿಕಾರಿಗಳು ಈಗ ಬುಧವಾರ ರಾತ್ರಿ ಅಥವಾ ಗುರುವಾರದ ಬೆಳಿಗ್ಗೆ ಹೊತ್ತಿಗಷ್ಟೇ ನಗರಕ್ಕೆ ನೀರು ಕೊಡುವಷ್ಟು ಮಾತ್ರ ನೀರಿನ ಸಂಗ್ರಹವಿದೆ ಎಂಬುದಾಗಿ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
 ನಗರದ ಪಾಲಿಕೆಯಲ್ಲಿ ಸೋಮವಾರ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಕುರಿತ ತುರ್ತು ಸಭೆಯಲ್ಲಿ ಮಹಾನಗರ ಇನ್ನು 3- 4 ದಿನಗಳಲ್ಲೇ ಕುಡಿಯುವ ನೀರಿಗೆ ತೀವ್ರ ಹಾಹಾಕಾರಕ್ಕೆ ತುತ್ತಾಗುವ ಸಂಗತಿಯನ್ನು ಪಾಲಿಕೆ ನೀರು ಪೂರೈಕೆ ವಿಭಾಗದ ಎಂಜಿನಿಯರ್‌ಗಳು, ಅಧಿಕಾರಿಗಳು ಎಳೆ ಎಳೆಯಾಗಿ ಬಿಡಿಸಿಟ್ಟರು.
ನಿರೀಕ್ಷಿತ ಮಟ್ಟದಲ್ಲಿಲ್ಲ: ಟಿವಿ ಸ್ಟೇಷನ್ ಕೆರೆ, ಕುಂದುವಾಡ ಕೆರೆಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ನೀರಿನ ಸಂಗ್ರಹವೇ ಇಲ್ಲ. ಭದ್ರಾ ಡ್ಯಾಂನಿಂದ ತುಂಗಭದ್ರಾ ನದಿಗೆ ಹಾಗೂ ಭದ್ರಾ ಕಾಲುವೆಗಳಿಗೆ ಬಿಟ್ಟಿರುವ ನೀರು ಇಲ್ಲಿಗೆ ತಲುಪಲು ಕಾಲಾವಕಾಶ ಹಿಡಿಯುತ್ತದೆ. ನದಿ ಹಾಗೂ ನಾಲೆಯಲ್ಲಿ ಬರುವ ನೀರನ್ನು ನೀರು ಶುದ್ಧೀಕರಣ ಘಟಕಕ್ಕೆ ಪಂಪ್ ಮಾಡಿ, ಆ ನೀರನ್ನು ಶುದ್ಧೀಕರಿಸಿ ಬಿಡಬೇಕು. ಅದಕ್ಕೂ ಕಾಲಾವಕಾಶವು ಹಿಡಿಯುತ್ತದೆ ಎಂದು ಅವರು ಹೇಳಿದರು.
 ಆಡಳಿತ ಪಕ್ಷದ ಸದಸ್ಯರಾದ ಉಮಾ ಪ್ರಕಾಶ, ಪುಷ್ಪಾ ದುರುಗೇಶ ಮಾತನಾಡಿ, ವಾರಕ್ಕೊಮ್ಮೆಯೂ ನೀರು ಬಿಡಲು ಆಗುವುದಿಲ್ಲವೆಂದರೆ ಹೇಗೆ ವಾರ್ಡ್‌ನಲ್ಲಿ ನೀರಿನ ಸಮಸ್ಯೆ ಬಗ್ಗೆ ಜನ ಪ್ರಶ್ನಿಸುತ್ತಾರೆ. ನೀರು ಪೂರೈಸುವ ಕುರಿತಂತೆ ಜನ ಕೇಳುವ ಪ್ರಶ್ನೆಗೆ ಏನು ಉತ್ತರ ನೀಡಬೇಕು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಕಿವಿಗೊಡಲಿಲ್ಲ: ನೀರು ಪೂರೈಕೆ ಸಮಸ್ಯೆ ಬಗ್ಗೆ 3- 4 ತಿಂಗಳ ಹಿಂದೆ ಆಯುಕ್ತರು, ಇಂಜಿನಿಯರ್ ಗಮನಕ್ಕೆ ತಂದರೂ ಕಿವಿಗೊಡಲಿಲ್ಲ. ಅಂದು ಎಚ್ಚೆತ್ತಿದ್ದರೆ ಇಂದು ನೀರಿನ ಸಮಸ್ಯೆ ಉದ್ಭವಿಸುತ್ತಿರಲಿಲ್ಲ. ಅಧಿಕಾರಿ ವರ್ಗದ ನಿರ್ಲಕ್ಷ್ಯದಿಂದ ಪಾಲಿಕೆ ಸದಸ್ಯರು ಜನಾಕ್ರೋಶಕ್ಕೆ ಗುರಿಯಾಗಬೇಕಾದ ಸ್ಥಿತಿ ತಂದಿಟ್ಟಿದ್ದೀರಿ.
  ಯಾರೊಬ್ಬರೂ ನಮ್ಮ ಮನವಿಗೆ ಸ್ಪಂದಿಸದಿದ್ದರೆ, ನಾವು ಯಾರಿಗೆ ಹೇಳಬೇಕು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
 ವಿಪಕ್ಷ ಸದಸ್ಯ ದಿನೇಶ ಕೆ. ಶೆಟ್ಟಿ ಮಾತನಾಡಿ, ನೀರಿನ ಬಗ್ಗೆ ಸಾರ್ವಜನಿಕರಿಂದ ಪಾಲಿಕೆ ಸದಸ್ಯರು ಕೇಳಬಾರದಂತಹ ಮಾತು ಕೇಳುವಂತಾಗಿದೆ. ಕಳೆದ 10 ದಿನಗಳಿಂದ ತಮ್ಮ ವಾರ್ಡ್‌ಗೆ ನೀರು ಪೂರೈಸಿಲ್ಲ. ಹೀಗೆ ನಿರ್ಲಕ್ಷ್ಯ ತೋರಿದರೆ ಹೇಗೆ ಆಡಳಿತ ಪಕ್ಷ ಮತ್ತು ಅಧಿಕಾರಿಗಳಂತೂ ವಿಪಕ್ಷಗಳ ಸಲಹೆ, ಸೂಚನೆ ಸಕಾರಾತ್ಮಕವಾಗಿ ಸ್ವೀಕರಿಸುತ್ತಿಲ್ಲ ಎಂದು ಟೀಕಿಸಿದರು.
ಅಂಧಾ ದರ್ಬಾರ್: ಸಮಾರಂಭಗಳಲ್ಲೇ ಆಡಳಿತ ಪಕ್ಷ ಮೈಮರೆತಿದೆ. ಜನರ ಸಮಸ್ಯೆ ಬಗ್ಗೆ ತಲೆ ಕೆಡೆಸಿಕೊಂಡಿಲ್ಲ. ಆಡಳಿತ ಪಕ್ಷ ಬಿಜೆಪಿ ಹೀಗೆ ನಿರ್ಲಕ್ಷ್ಯ ಧೋರಣೆ ತೋರುತ್ತಿರುವುದರಿಂದ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ಯಾರ ಹೆದರಿಕೆ ಇಲ್ಲದೇ, ಅಂಧಾ ದರ್ಬಾರ್ ಮುಂದುವರಿಸುತ್ತಿದ್ದಾರೆ. ಪಾಲಿಕೆ ಸದಸ್ಯರು ಅಧಿಕಾರಿಗೆ ಫೋನ್ ಮಾಡಿದರೂ, ಬೇಜವಾಬ್ದಾರಿಯಿಂದ ಪ್ರತಿಕ್ರಿಯಿಸುತ್ತಿದ್ದಾರೆ. ಇದಕ್ಕೆಲ್ಲಾ ಬಿಜೆಪಿ ಆಡಳಿತ ವೈಫಲ್ಯವೇ ಕಾರಣ ಎಂದು ಆರೋಪಿಸಿದರು.
 ವಿಪಕ್ಷ ನಾಯಕ ಡಿ.ಎನ್. ಜಗದೀಶ, ಸದಸ್ಯ ಕೆ.ಜಿ. ಶಿವಕುಮಾರ ಮಾತನಾಡಿ, ಪಾಲಿಕೆ ಗೋದಾಮಿನಲ್ಲಿ ಹುಡುಕಿದರೂ ಅರ್ಧ ಇಂಚು ಗಾತ್ರದ ಪೈಪ್ ಇಲ್ಲ. ಕೊಳವೆಬಾವಿ ದುರಸ್ತಿಪಡಿಸಿ, ಮೋಟಾರ್, ಹ್ಯಾಂಡ್‌ಪಂಪ್ ಅಳವಡಿಸಿದರೆ  ನೀರಿನ ಸಮಸ್ಯೆ ಸಾಕಷ್ಟು ಕಡಿಮೆಯಾಗುತ್ತದೆ ಎಂದರು.
ಮಾತಿನ ಜಟಾಪಟಿ: ಸ್ಥಾಯಿ ಸಮತಿ ಅಧ್ಯಕ್ಷ ಬಿ. ಲೋಕೇಶ, ವಿಪಕ್ಷ ಸದಸ್ಯ ದಿನೇಶ ಕೆ. ಶೆಟ್ಟಿ, ಆಡಳಿತ ಪಕ್ಷದ ಸದಸ್ಯ ಕೆ.ಆರ್. ವಸಂತಕುಮಾರ, ವಿಪಕ್ಷದ ಕೋಳಿ ಇಬ್ರಾಹಿಂ ಸಾಬ್ ಮಧ್ಯೆ ತೀವ್ರ ಮಾತಿನ ಜಟಾಪಟಿ ನಡೆಯಿತು. ಒಂದು ಹಂತದಲ್ಲಿ ವಿಪಕ್ಷದ ಸದಸ್ಯರೊಬ್ಬರು ಆಡಳಿತ ಪಕ್ಷದ ಸದಸ್ಯನ್ನತ್ತ ನುಗ್ಗಿ ಬರುವುದಕ್ಕೆ ಟೇಬಲ್ ಮೇಲೆ ಹತ್ತಲು ಮುಂದಾಗಿದ್ದು ಮಾತ್ರ ಪಾಲಿಕೆ ಎತ್ತ ಸಾಗುತ್ತಿದೆ ಎಂಬುದನ್ನು ಸೂಚ್ಯವಾಗಿ ಹೇಳುವಂತಿತ್ತು.
 ಮೇಯರ್ ಸುಧಾ ಜಯರುದ್ರೇಶ್ ಅಧ್ಯಕ್ಷತೆ ವಹಿಸಿದ್ದರು. ಉಪ ಮೇಯರ್ ಮಹೇಶ ರಾಯಚೂರು, ಸ್ಥಾಯಿ ಸಮಿತಿ ಅಧ್ಯಕ್ಷ ಆವರಗೆರೆ ಜಿ. ಸುರೇಶ, ಸದಸ್ಯರಾದ ಮಾದಮ್ಮ ಮುನಿಸ್ವಾಮಿ, ಸುಶೀಲಮ್ಮ, ಸೌಭಾಗ್ಯ ಮುಕುಂದ, ಬಸಮ್ಮ, ಸಂಕೋಳ ಚಂದ್ರಶೇಖರ, ವಿಪಕ್ಷ ಸದಸ್ಯರಾದ ಕೆ. ಪರಸಪ್ಪ, ಆಯುಕ್ತ ಬಿ. ಭೀಮಪ್ಪ, ಉಪ ಆಯುಕ್ತ ರವೀಂದ್ರ ಮಲ್ಲಾಪುರ ಮೊದಲಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com