ಡಿಜಿಟಲ್ ತಾರಾಲಯ ಸ್ಥಾಪನೆಗೆ ಯತ್ನ

Updated on: 

ದಾವಣಗೆರೆ: ಹುಳುಪಿನಕಟ್ಟೆ ಬಳಿ ಉದ್ದೇಶಿತ ಜಿಲ್ಲಾ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಡಿಜಿಟಲ್ ತಾರಾಲಯ ಸ್ಥಾಪಿಸಲು ಅಗತ್ಯವಾದ ರು. 12 ಕೋಟಿ ಅನುದಾನ ಬಿಡುಗಡೆಗೆ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಮೀನುಗಾರಿಕೆ ಸಚಿವ ಆನಂದ ಆಸ್ನೋಟಿಕರ್‌ಗೆ ಒತ್ತಡ ಹೇರುವುದಾಗಿ ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದರು.
ತಾಲೂಕಿನ ಆನಗೋಡು ಹೋಬಳಿಯ ಹುಳುಪಿನಕಟ್ಟೆ ಗ್ರಾಮದಲ್ಲಿ ಸೋಮವಾರ ಜಿಲ್ಲಾ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಕಟ್ಟಡದ ಭೂಮಿಪೂಜೆ ಸಮಾರಂಭದಲ್ಲಿ ಮಾತನಾಡಿದ ಅವರು, ಇಲ್ಲಿ ಡಿಜಿಟಲ್ ತಾರಾಲಯ ಸ್ಥಾಪನೆಗೆ ಅಗತ್ಯ ಅನುದಾನ ನೀಡಲು ಸಚಿವ ಎಸ್.ಎ. ರವೀಂದ್ರನಾಥ್, ತಾವು ಹಾಗೂ ಶಾಸಕರು ಸಚಿವ ಆಸ್ನೋಟಿಕರ್‌ಗೆ ಒತ್ತಾಯಿಸುವುದಾಗಿ ತಿಳಿಸಿದರು.
25 ವರ್ಷದ ಕನಸು: ಸುಮಾರು 25 ವರ್ಷಗಳಷ್ಟು ಹಿಂದೆಯೇ ಜಿಲ್ಲಾ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಕಟ್ಟಡಕ್ಕೆ ಪ್ರಯತ್ನ ನಡೆದಿತ್ತು. ತಡವಾದರೂ ಈಗ ಕೇಂದ್ರ ಸ್ಥಾಪನೆಯಾಗುತ್ತಿದೆ. ಇದಕ್ಕಾಗಿ ರು. 5 ಕೋಟಿ ಅನುದಾನಕ್ಕೆ ರಾಜ್ಯ ಸರ್ಕಾರವು ಕೇಂದ್ರಕ್ಕೆ ಮನವಿ ಮಾಡಿತ್ತು. ಕೇಂದ್ರ ಸಚಿವ ಕಪಿಲ್ ಸಿಬಲ್ ಮೇಲೆ ತಾವು ನಿರಂತರ ಒತ್ತಡ ಹೇರಿದ ಪರಿಣಾಮ 1.98 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಇದರಲ್ಲಿ 33 ಲಕ್ಷ ಬಂದಿದೆ ಎಂದರು.
ಡಾ. ಎ.ಪಿ.ಜೆ. ಕಲಾಂ, ಪ್ರೊ. ಯು.ಆರ್. ರಾವ್, ಮಾಧವರಾವ್, ಪ್ರಹ್ಲಾದ್, ಶಿವನಾಥ್ ಪಿಳ್ಳೆಯಂತಹ ಸಾಧಕರು ನೀವಾಗಿ. ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವ ಕೆಲಸ ಶಿಕ್ಷಕರು, ಪಾಲಕರಿಂದಾಗಬೇಕು. ಪ್ರತಿ ವರ್ಷ 2- 3 ಸಲ ಕೇಂದ್ರಕ್ಕೆ ಮಕ್ಕಳನ್ನು ಕರೆ ತಂದು, ವಿಜ್ಞಾನಾಸಕ್ತಿ ಹೆಚ್ಚಿಸಬೇಕು ಎಂದು ಅವರು ಕರೆ ನೀಡಿದರು.
ಆನಗೋಡು ಪ್ರಾಣಿ ಸಂಗ್ರಹಾಲಯಕ್ಕೆ ಸೌಲಭ್ಯ ಕಲ್ಪಿಸಲು ಸೂಚನೆ ನೀಡಿದ್ದೇವೆ. ಅದೇ ಪಾರ್ಕ್ ಎದುರಿನಲ್ಲಿ ವಿಜ್ಞಾನ ಕೇಂದ್ರ ತಲೆ ಎತ್ತುತ್ತಿದೆ. ಉಭಯ ಕೇಂದ್ರಕ್ಕೆ ಅಗತ್ಯ ನೆರವನ್ನು ತಾವು, ಸಂಸದರು ಹಾಗೂ ಶಾಸಕರು ನೀಡಲಿದ್ದೇವೆ. ಒಟ್ಟಾರೆ, ಇವೆರೆಡೂ ಜಿಲ್ಲೆಯ ಪ್ರವಾಸಿ ತಾಣ ಆಗಬೇಕು ಎಂದು ಸಿದ್ದೇಶ್ವರ ಹೇಳಿದರು.
ರು. 3 ಕೋಟಿ ಅನುದಾನ: ಅಧ್ಯಕ್ಷತೆ ವಹಿಸಿದ್ದ ಶಾಸಕ ಎಂ. ಬಸವರಾಜನಾಯ್ಕ ಮಾತನಾಡಿ, ಕೇಂದ್ರ ಸ್ಥಾಪನೆಗೆ 25 ವರ್ಷಗಳ ಪ್ರಯತ್ನದ ಫಲವಿದು. ಆದಷ್ಟು ಬೇಗನೆ ಕಾಮಗಾರಿ ಪೂರ್ಣಗೊಳಿಸಿ. ಈ ಭಾಗವನ್ನು ಪ್ರವಾಸಿ ತಾಣವಾಗಿಸಲು 3 ಕೋಟಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಇದು ಬಜೆಟ್‌ನಲ್ಲಿ ಮಂಜೂರಾಗುವ ಸಾಧ್ಯತೆ ಇದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರವೀಂದ್ರನಾಥ ಕೇಂದ್ರದ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿದರು. ಜಿಪಂ ಅಧ್ಯಕ್ಷೆ ಶೀಲಾ ಗದ್ದಿಗೇಶ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಭಾನುವಳ್ಳಿ ವೀರಭದ್ರಪ್ಪ, ಶಾರದಾ ಉಮೇಶನಾಯ್ಕ, ಸೊಕ್ಕೆ ಎಚ್. ನಾಗರಾಜ, ತಾಪಂ ಸದಸ್ಯೆ ಪಾಲಾಕ್ಷಮ್ಮ ಸಂಗಪ್ಪ,  ಸುವರ್ಣಮ್ಮ, ಜಿಲ್ಲಾಧಿಕಾರಿ ಎಸ್ಸೆಸ್ ಪಟ್ಟಣಶೆಟ್ಟಿ, ಜಿಪಂ ಸಿಇಓ ಎ.ಬಿ. ಹೇಮಚಂದ್ರ, ಡಿಡಿಪಿಐ ಡಿ.ಕೆ. ಶಿವಕುಮಾರ ವೇದಿಕೆಯಲ್ಲಿದ್ದರು.
ಬಿಐಇಟಿ ಕಾಲೇಜು ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ, ಪ್ರಾಧ್ಯಾಪಕ ಪ್ರೊ. ರಂಗಸ್ವಾಮಿ, ಶಿಕ್ಷಕ ಗುರುಸಿದ್ದಸ್ವಾಮಿ, ನಿರ್ಮಿತಿ ಕೇಂದ್ರ ರಾಜಪ್ಪ, ಶಿಕ್ಷಣಾಧಿಕಾರಿ ಕೆ.ಎಂ. ಗಂಗಾಧರಸ್ವಾಮಿ, ಎಚ್.ಜೆ. ಜಯದೇವಪ್ಪ, ಗ್ರಾಪಂ ಅಧ್ಯಕ್ಷೆ ರಂಗಮ್ಮ ಕೋಟೆಪ್ಪ, ಉಪಾಧ್ಯಕ್ಷ ಪಿ. ಪ್ರಭು, ಸದಸ್ಯ ಎಚ್.ಎಸ್. ಪ್ರಕಾಶ, ಇಪ್ಟಾ ಕಲಾವಿದ ಐರಣಿ ಚಂದ್ರು, ಬಿಜೆಪಿ ಮುಖಂಡ ಹಾಲೇಶಪ್ಪ ಇತರರು ಇದ್ದರು. ಸಿದ್ದಗಂಗಾ ಶಾಲೆ ಮಕ್ಕಳು ಪ್ರಾರ್ಥಿಸಿದರು. ದಾನಿ ವಿದ್ಯಾರ್ಥಿಗಳು, ಸಂಸ್ಥೆ, ಶಿಕ್ಷಕರು, ಸಂಸ್ಥೆ ಪದಾಧಿಕಾರಿಗಳಿಗೆ ಸನ್ಮಾನಿಸಲಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com