ದಾವಣಗೆರೆ: ತಾಲೂಕಿನ ಆನಗೋಡು ಗ್ರಾಮದ ಇಂದಿರಾ ಪ್ರಿಯದರ್ಶಿನಿ ಪ್ರಾಣಿ ಸಂಗ್ರಹಾಲಯ(ಝೂ)ಕ್ಕೆ ಭೇಟಿ ನೀಡಿದ್ದ ಸಂಸದ ಜಿ.ಎಂ. ಸಿದ್ದೇಶ್ವರ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಆನಗೋಡು ಪ್ರಾಣಿ ಸಂಗ್ರಹಾಲಯಕ್ಕೆ ಕೆಲ ತಿಂಗಳ ಹಿಂದೆಯೇ ಭೇಟಿ ನೀಡಿದ್ದ ಸಂಸದ ಸಿದ್ದೇಶ್ವರ, ಇಲ್ಲಿರುವ ಹೆಣ್ಣು ಕರಡಿಗೆ ಜೋಡಿ ಕಲ್ಪಿಸಲು ಹೇಳಿದ್ದರೂ ಈವರೆಗೆ ಮಾಡದ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಕರಡಿಯನ್ನು ನಾನು ದತ್ತು ತೆಗೆದುಕೊಳ್ಳುವುದಾಗಿ ಈ ಹಿಂದೆಯೇ ಹೇಳಿದ್ದೇನೆ. ಆದರೆ, ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಆಸಕ್ತಿ ಇದ್ದಂತೆ ಕಾಣುತ್ತಿಲ್ಲ. ಕರಡಿಯನ್ನು ದತ್ತು
ಪಡೆಯಲು ನಿಗದಿಪಡಿಸಿರುವ 35 ಸಾವಿರ ರು.ಗಳನ್ನು ನೀಡಿ, ಕರಡಿ ದತ್ತು ಪಡೆಯುತ್ತೇನೆ. ಇದಕ್ಕೆ ಬೇಕಾದ ಪ್ರಕ್ರಿಯೆಯನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಅವರು ಸೂಚಿಸಿದರು.
ಮೈಸೂರಿನಿಂದ ಕರಡಿ: ಉಪ ಅರಣ್ಯ ಸಂರಕ್ಷಣಾಧಿಕಾರಿ ಮಳವಳ್ಳಿ ಮಾತನಾಡಿ, ರಾಜ್ಯ ಮೃಗಾಲಯ ಅಭಿವೃದ್ಧಿ ಪ್ರಾಧಿಕಾರದಿಂದ 34 ಲಕ್ಷ ಹೆಚ್ಚುವರಿ ಹಣ ಬಿಡುಗಡೆಯಾಗಿದೆ. ಆನಗೋಡು ಪ್ರಾಣಿ ಸಂಗ್ರಹಾಲಯ ಹೊಂದಿರುವ ಹೆಣ್ಣು ಕರಡಿಗೆ ತುಂಬಾ ದಿನಗಳಿಂದ ಜೋಡಿ ಇರಲಿಲ್ಲ. ಶೀಘ್ರದಲ್ಲೇ ಮೈಸೂರು ಪ್ರಾಣಿ ಸಂಗ್ರಹಾಲಯದಿಂದ ಗಂಡು ಕರಡಿಯನ್ನು ತರುವ ಬಗ್ಗೆ ಶೀಘ್ರದಲ್ಲೇ ಕ್ರಮ ಕೈಗೊಳ್ಳುತ್ತೇವೆ ಎಂದು ಸಂಸದರ ಗಮನಕ್ಕೆ ತಂದರು.
ಶಾಸಕ, ಬಂಜಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ಬಸವರಾಜನಾಯ್ಕ, ಜಿಲ್ಲಾಧಿಕಾರಿ ಸುಭಾಷ್ ಶಿವಪ್ಪ ಪಟ್ಟಣಶೆಟ್ಟಿ, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೇಮಚಂದ್ರ, ಹಾಲೇಶಪ್ಪ ಇದ್ದರು.