ದಾವಣಗೆರೆ: ಅಪಘಾತದಲ್ಲಿ ಟ್ರ್ಯಾಕ್ಟರ್ ಮೈಮೇಲೆ ಹರಿದು 8 ತುಂಡಾಗಿ, ಅಪ್ಪಚ್ಚಿಗೊಂಡಿದ್ದ ಯುವಕನ ಸೊಂಟವನ್ನು ಸಂಪೂರ್ಣವಾಗಿ ಮರು ಜೋಡಣೆ ಮಾಡುವಂತಹ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಆತನಿಗೆ ಬಾಳು ಕಲ್ಪಿಸುವಲ್ಲಿ ನಗರದ ಅಪೂರ್ವ ಆಸ್ಪತ್ರೆಯ ವೈದ್ಯರ ತಂಡವು ಯಶಸ್ವಿಯಾಗಿದೆ.
ನಗರದ ಜೆ, ಉಸ್ಮಾನ್ಗೆ ಅಪಘಾತದಲ್ಲಿ ಟ್ರ್ಯಾಕ್ಟರ್ ಸೊಂಟದ ಮೇಲೆ ಹತ್ತಿದ್ದರಿಂದ ಸೊಂಟವು 8 ತುಂಡುಗಳಾಗಿ ನುಜ್ಜುಗುಜ್ಜಾಗಿತ್ತು.
ಸೊಂಟ ಮುರಿದು, ತೀವ್ರ ರಕ್ತಸ್ರಾವದಿಂದ ಉಸಿರಾಟದ ತೊಂದರೆ, ಸೊಂಟವನ್ನು ಮಿಸುಕಾಡಿಸಲೂ ಆಗದೆ ಅಸಹಾಯಕ ಸ್ಥಿತಿಯಲ್ಲಿದ್ದ ಉಸ್ಮಾನ್ಗೆ ಅಪರೂಪ ಹಾಗೂ ವಿಶೇಷ ಶಸ್ತ್ರಚಿಕಿತ್ಸೆ ನಡೆಸಲು ಆಸ್ಪತ್ರೆ ಕೀಲು- ಮೂಳೆ ತಜ್ಞ, ಬೆಂಗಳೂರಿನ ಹಾಸ್ಮ್ಯಾಟ್ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುವ ಡಾ. ಸಿದ್ದಲಿಂಗೇಶ ಹಿರೇಮಠ, ಫಿಜಿಷಿಯನ್ ಡಾ. ಜಿ.ಬಿ. ಜ್ಯೋತಿ ಪ್ರಕಾಶ, ಡಾ. ಬಿ.ಜಿ. ರೇಣುಕಾರನ್ನು ಒಳಗೊಂಡ ತಂಡ ಸವಾಲಿನಂತಿದ್ದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮಾಡಿದೆ.
48 ತಾಸು ತೀವ್ರ ನಿಗಾ ಚಿಕಿತ್ಸೆ: ಗಾಯಾಳು ಉಸ್ಮಾನ್ಗೆ ಅಗತ್ಯವಾಗಿದ್ದ ಎಲ್ಲಾ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಿ, ಜೀವನ್ಮರಣದ ಹೋರಾಟ ನಡೆಸಿದ್ದ ಆತನನ್ನು ಬದುಕಿಸಲಾಯಿತು. 48 ತಾಸು ತೀವ್ರ ನಿಗಾ ಚಿಕಿತ್ಸೆ ಮೂಲಕ ಆತ ಇಂದು ಅಪಾಯದಿಂದ ಪಾರಾಗುವಂತೆ ಮಾಡಲಾಗಿದೆ. ಇದು ವೈದ್ಯ ಲೋಕದ ಆರ್ಥೋಪೆಡಿಕ್ ಶಸ್ತ್ರಚಿಕಿತ್ಸೆಗಳಲ್ಲೇ ಅತಿ ವಿರಳ, ಅತ್ಯಂತ ಕ್ಲಿಷ್ಟಕರ ಎಂದು ಶಸ್ತ್ರ ಚಿಕಿತ್ಸೆಯ ನೇತೃತ್ವ ವಹಿಸಿದ್ದ ಡಾ. ಸಿದ್ದಲಿಂಗೇಶ ಹೀರೇಮಠ ಗೋಷ್ಠಿಯಲ್ಲಿ ಹೇಳಿದರು.