ಹರಪನಹಳ್ಳಿ: ಜನಪದ ಕಲಾವಿದರು ಹಾಗೂ ಅವರ ಕಲಾ ಪ್ರಕಾರಗಳನ್ನು ಕರ್ನಾಟಕ ಜನಪದ ಅಕಾಡೆಮಿಯಿಂದ ವೆಬ್ ಸೈಟ್ಗೆ ಅಳವಡಿಸಲು ಚಿಂತನೆ ನಡೆದಿದೆ ಎಂದು ಅಕಾಡೆಮಿ ಅಧ್ಯಕ್ಷ ಬಾನಂದೂರು ಕೆಂಪಯ್ಯ ತಿಳಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜನಪದಕ್ಕೆ ಸಂಬಂದ ಪಟ್ಟ ಬಹಳಷ್ಟು ಪುಸ್ತಕಗಳು ಪ್ರಕಟಗೊಂಡಿವೆ, ಆದರೆ ಅವುಗಳನ್ನು ಓದುವ ಜನ ಕಡಿಮೆ. ಆದ್ದರಿಂದ ಈ ಯೋಜನೆ ರೂಪಿಸಿದ್ದೇವೆ ಎಂದು ಅವರು ಹೇಳಿದರು.
ಅನುದಾನ: ವೆಬ್ಸೈಟ್ಗೆ ಅಳವಡಿಸಲು ಸುಮಾರು 20 ಲಕ್ಷ ರು.ಗಳು ಬೇಕಾಗುತ್ತದೆ. ಈ ಸಂಬಂಧ ಸರ್ಕಾರಕ್ಕೆ ಅನುದಾನ ಕೋರಿದ್ದೇವೆ ಎಂದರು. ಜನಪದ ಅಕಾಡೆಮಿಗೆ ರಾಜ್ಯ ಸರ್ಕಾರ 45 ಲಕ್ಷ ರು.ಗಳ ಅನುದಾನ ನೀಡಿದೆ. ಅದರಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದೇವೆ ಎಂದರು.
ಚರ್ಮ ವಾದ್ಯ ಸಮ್ಮೇಳನ: ಇದೇ ಪ್ರಥಮ ಬಾರಿಗೆ ಅಖಿಲ ಕರ್ನಾಟಕ ಚರ್ಮ ವಾದ್ಯ ಸಮ್ಮೇಳನವನ್ನು ದಾವಣಗೆರೆಯಲ್ಲಿ ಶೀಘ್ರ ಆಯೋಜಿಸಲು ನಿರ್ಧರಿಸಿದ್ದೇವೆ. ಅಖಿಲ ಕರ್ನಾಟಕ ಮಹಿಳಾ ಜಾನಪದ ಸಮ್ಮೇಳನವನ್ನು ದಾವಣಗೆರೆ ಅಥವಾ ಬಿಜಾಪುರದಲ್ಲಿ ಹಾಗೂ ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಜನಪದ ವಿದ್ವಾಂಸರ ಸಮ್ಮೇಳನ ಹಮ್ಮಿಕೊಳ್ಳಲು ಯೋಜನೆ ಇದೆ ಎಂದರು.
ಮಾಶಾಸನ: 60 ವರ್ಷ ತುಂಬಿದ ಕಲಾವಿದರನ್ನು ಪರೀಕ್ಷಿಸಿ ಸಂದರ್ಶನ ಮಾಡಿ ಸರ್ಕಾರಕ್ಕೆ ಮಾಶಾಸನಕ್ಕೆ ಶಿಪಾರಸು ಮಾಡಲಾಗುವುದು ಹಾಗೂ ಈಗಿರುವ ಮಾಶಾಸನವನ್ನು 1 ಸಾವಿರ ರು.ಗಳಿಂದ 2 ಸಾವಿರ ರು.ಗಳಿಗೆ ಹೆಚ್ಚಿಸಲು ಸರ್ಕಾರಕ್ಕೆ ಮನವಿ ಮಾಡಲಾಗುವುದು.
100 ವರ್ಷ ತುಂಬಿದ ಕಲಾವಿದರ ಜನ್ಮ ಶತಮಾನೋತ್ಸವಕ್ಕೆ ನಿರ್ಧರಿಸಿದ್ದೇವೆ. ದೊಡ್ಡಾಟ, ಸಣ್ಣಾಟ ಹಾಗೂ ತೊಗಲು ಗೊಂಬೆಯಾಟಗಳನ್ನು ಯಕ್ಷಗಾನ ಅಕಾಡೆಮಿಯಿಂದ ದಿಂದ ಜಾನಪದ ಅಕಾಡೆಮಿ ವರ್ಗಾಯಿಸಬೇಕು ಎಂಬುದು ನನ್ನ ಅಭಿಪ್ರಾಯ, ಈ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.
ಡೊಳ್ಳಿನ ಸಮ್ಮೇಳನ: ಉತ್ತರ ಭಾರತದಲ್ಲಿ ಮೊಹರಂ ಕುಣಿತ ಅತ್ಯಂತ ಪ್ರಸಿದ್ಧಿ ಪಡೆದಿದ್ದು, ಧಾರವಾಡ ಭಾಗದಲ್ಲಿ ಈ ಕುರಿತು ಕಾರ್ಯಕ್ರಮ ಹಾಗೂ ಮುಂಡರಗಿಯಲ್ಲಿ ಡೊಳ್ಳಿನ ಸಮ್ಮೇಳನ ನಡೆಸಲು ಉದ್ದೇಶಿಸಲಾಗಿದೆ. ಇದಕ್ಕೆ ಜಾನಪದ ಅಕಾಡೆಮಿಗೆ ರು. 2 ಕೋಟಿ ಅನುದಾನಕ್ಕೆ ಪ್ರಸ್ಥಾವನೆ ಸಲ್ಲಿಸಲಾಗುವುದು ಎಂದು ಅವರು ಹೇಳಿದರು. ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬಿ. ಪರಶುರಾಮ, ಡಾ.ಕೆ. ರುದ್ರಪ್ಪ ಇದ್ದರು.