ಹರಪನಹಳ್ಳಿ: ಬಿಜೆಪಿ ಸರ್ಕಾರದ ಮಹತ್ವಕಾಂಕ್ಷೆ ಸುವರ್ಣ ಗ್ರಾಮ ಯೋಜನೆಯಡಿ ತಾಲೂಕಿನ ಏಳು ಗ್ರಾಮಗಳು ಆಯ್ಕೆಯಾಗಿದ್ದು ಅನುದಾನ ಪಡೆಯುತ್ತಿವೆ ಎಂದು ಶಾಸಕ ಜಿ. ಕರುಣಾಕರ ರೆಡ್ಡಿ ತಿಳಿಸಿದ್ದಾರೆ.
ಬಳಿಗನೂರು, ಮೈದೂರು, ಮತ್ತಿಹಳ್ಳಿ, ಕಂಚಿಕೇರೆ, ಸಾಸ್ವಿಹಳ್ಳಿ, ಕಡಬಗೇರೆ ಸೇರಿದಂತೆ ವಿವಿಧೆಡೆ ರು. 10 ಕೋಟಿ ಅನುದಾನದಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಪೂರ್ಣಗೊಂಡಿರುವ ವಿವಿಧ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿ, ಮೈದೂರಿನ ಬಹಿರಂಗ ಸಭೆಯಲ್ಲಿ ಮಾತನಾಡಿದರು.
ರಸ್ತೆ ಅಭಿವೃದ್ಧಿ: ಕಳೆದ ನಾಲ್ಕುವರೆ ವರ್ಷದಲ್ಲಿ ತಾಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಮೈದೂರು-ಬೆಣ್ಣಿಹಳ್ಳಿವರೆಗೆ ರಸ್ತೆ ನಿರ್ಮಾಣಕ್ಕೆ 1.60 ಕೋಟಿ ರು., ಮೈದೂರು-ಕೆಸರಹಳ್ಳಿ ನಡುವಿನ ರಸ್ತೆ ಅಭಿವೃದ್ಧಿಗೆ 1.60 ಕೋಟಿ ರು., ಅನುದಾನ ಬಿಡುಗಡೆಯಾಗಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಹೇಳಿದರು.
ಸುವರ್ಣ ಗ್ರಾಮ ಯೋಜನೆಯಡಿ ಆಯ್ಕೆಯಾಗಿರುವ ಬಳಿಗಾನೂರು ಅಭಿವೃದ್ಧಿಗೆ 21.58 ಲಕ್ಷ ರು., ಕುಡಿಯುವ ನೀರಿಗಾಗಿ 5 ಲಕ್ಷ ರು., ಚಕ್ ಡ್ಯಾಂ ನಿರ್ಮಾಣಕ್ಕೆ 15 ಲಕ್ಷ ರು., ಮತ್ತಿಹಳ್ಳಿಯಲ್ಲಿ ಸಮುದಾಯ ಭವನ ನಿರ್ಮಾಣ-14. 43 ಲಕ್ಷ ರು., ಸಾಸ್ವಿಹಳ್ಳಿ-88.44 ಲಕ್ಷ ರು., ಕಡಬಗೆರೆ ಸಮುದಾಯ ಭವನ ನಿರ್ಮಾಣ-11.15 ಲಕ್ಷ ರು., ಕಂಚಿಕೇರೆ ಗ್ರಾಮ ಅಭಿವೃದ್ಧಿಗೆ 105.82 ಲಕ್ಷ ರು., ಗುಂಡಗತ್ತಿ ಗ್ರಾಮ ಅಭಿವೃದ್ಧಿಗೆ 87.17 ಲಕ್ಷ ಞ್ಜ. ಹಾಗೂ ಕೂಲಹಳ್ಳಿ ಗ್ರಾಮದ ಅಭಿವೃದ್ಧಿಗೆ 64.56 ಲಕ್ಷ ರು. ಅನುದಾನ ಬಿಡುಗಡೆಯಾಗಿದ್ದು ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ಮೈದೂರು, ಮತ್ತಿಹಳ್ಳಿ, ಹುಣ್ಸಿಹಳ್ಳಿ, ಕುಣೆಮಾದಿಹಳ್ಳಿ, ಹಗರಿಗುಡಿಹಳ್ಳಿ, ನಾಗರಕೊಂಡ, ಕಡಬಘೇರೆ, ಕಸವನಹಳ್ಳಿ, ಗುಂಡಗತ್ತಿ, ಎರಡೆತ್ತಿನಹಳ್ಳಿ, ಸೇರಿದಂತೆ ವಿವಿಧೆ ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕ್ಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಇದಕ್ಕಾಗಿ 1 ಕೋಟಿ ರು. ಅನುದಾನ ಬಿಡುಗಡೆಯಾಗಿದೆ ಎಂದು ತಿಳಿಸಿದರು.
ಹಿಂದುಳಿದ ಪ್ರದೇಶದ ಜನತೆ ಶೈಕ್ಷಣಿಕವಾಗಿ, ಆರ್ಥಿಕವಾಗಿ ಸಬಲರಾಗಲು ವಿವಿಧ ವಸತಿಯುತ ಶಾಲೆಗಳು, ಪಾಲಿಟಿಕ್ನಿಕ್ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ಥಾಪಿಸಲಾಗಿದೆ. ಇವುಗಳ ಜತೆಗೆ ಸರ್ಕಾರ ಕೈಗಾರಿಕ ತರಬೇತಿ ಕೇಂದ್ರ (ಐಟಿಐ) ಶೈಕ್ಷಣಿಕ ವರ್ಷದಿಂದ ಆರಂಭ ಮಾಡಲು ಅನುಮತಿ ನೀಡಿದೆ ಎಂದು ತಿಳಿಸಿದರು.
ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಹಲವು ವರ್ಷಗಳ ಕಾಲ ಆಳ್ವಿಕೆ ಮಾಡಿದ ಪಕ್ಷಗಳು ಅಭಿವೃದ್ಧಿ ಯೋಜನೆಗಳನ್ನು ಜಾರಿಮಾಡುವಲ್ಲಿ ವಿಫಲವಾಗಿವೆ. ಆದರೆ ಬಿಜೆಪಿ ಸರ್ಕಾರ ಕೇವಲ 5 ವರ್ಷದಲ್ಲಿ ಜನಮಾನಸದಲ್ಲಿ ಉಳಿಯುವ ಅನೇಕ ಅಭಿವೃದ್ಧಿಗಳನ್ನು ಕಾರ್ಯಗಳನ್ನು ಮಾಡಿದೆ. ಜನಸಾಮಾನ್ಯರನ್ನು ಸ್ಪಂಧಿಸುವ, ಅಭಿವೃದ್ಧಿ ಕಾರ್ಯಮಾಡುವ ಪ್ರತಿನಿಧಿಗಳನ್ನು ಮತದಾರರು ಮೆಚ್ಚುತ್ತಾರೆ ಎಂದರು.
ಇದೇ ಸಂದರ್ಭದಲ್ಲಿ 65 ಲಕ್ಷ ರು.ವೆಚ್ಚದಲ್ಲಿ ತಾಲೂಕಿನ ಕೂಲಹಳ್ಳಿ ಗ್ರಾಮದಲ್ಲಿ ನಿರ್ಮಾಣವಾಗಿರುವ ಯಾತ್ರಿ ನಿವಾಸವನ್ನು ಲೋಕಾರ್ಪಣೆ ಮಾಡಲಾಯಿತು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶೀಲಾ ಗದ್ದಿಗೇಶ, ಸದಸ್ಯೆ ಕವಿತಾ, ತಾಪಂ ಸದಸ್ಯರಾದ ಕಿತ್ತೂರು ಒಬಪ್ಪ, ಲೀಲಮ್ಮ, ಜಯಮ್ಮ, ಗ್ರಾಪಂ ಅಧ್ಯಕ್ಷೆ ಮಂಜಮ್ಮ, ನೀಲಮ್ಮಲಕ್ಕಪ್ಪ, ತಾಲೂಕು ಬಿಜೆಪಿ ಅಧ್ಯಕ್ಷ ಅರುಂಡಿ ನಾಗರಾಜ, ನಂಜನಗೌಡ, ಗಿರಿರಾಜ ರೆಡ್ಡಿ, ಎಂ.ಪಿ. ನಾಯ್ಕ, ಉದಯಕುಮಾರ, ಗಿರೀಶ, ಎಚ್. ಕೊಟ್ರಬಸಪ್ಪ, ಮೈದೂರು ರಾಮಪ್ಪ, ಮಲ್ಲಿಕಾರ್ಜುನ, ಲೋಕೇಶ, ಕೆ. ಶಿವಣ್ಣ, ಕೆ. ಮಂಜುನಾಥ, ಬಾಗಳಿ ಕೊಟ್ರೇಶ ಇದ್ದರು.