ದಾವಣಗೆರೆ: ವಾಜಪೇಯಿ ಆರೋಗ್ಯಶ್ರೀ ಯೋಜನೆ ಯೋಜನೆಯಡಿ ಬೃಹತ್ ಆರೋಗ್ಯ ಮೇಳ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಶಂಕು ಸ್ಥಾಪನೆ ಸಮಾರಂಭ ಫೆ.2ರಂದು ನಗರದಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಸುಭಾಷ್ ಶಿವಪ್ಪ ಪಟ್ಟಣಶೆಟ್ಟಿ ತಿಳಿಸಿದರು.
ನಗರದ ಡಿಸಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ದಾವಣಗೆರೆ ಹೊರ ವಲಯದ ನೂತನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿ ಕಟ್ಟಡದ ಶಂಕು ಸ್ಥಾಪನೆ ಸಮಾರಂಭ ನಡೆಯಲಿದೆ ಎಂದರು.
ಆರೋಗ್ಯ ಮೇಳ: ಅದೇ ದಿನ ಬೆಳಿಗ್ಗೆ 11ಕ್ಕೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಆಶ್ರಯದಲ್ಲಿ ನಗರದ ಜಿಲ್ಲಾಸ್ಪತ್ರೆಯಲ್ಲಿ ವಾಜಪೇಯಿ ಆರೋಗ್ಯ ಶ್ರೀ ಯೋಜನೆಯಡಿ ಬೃಹತ್ ಆರೋಗ್ಯ ಮೇಳ ನಡೆಯಲಿದೆ. ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಅರವಿಂದ ಲಿಂಬಾವಳಿ ಮೇಳವನ್ನು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರವೀಂದ್ರನಾಥ ಕಾರ್ಯಕ್ರಮ ಉದ್ಘಾಟಿಸುವರು. ಸಂಸದ ಜಿ.ಎಂ. ಸಿದ್ದೇಶ್ವರ ವಸ್ತು ಪ್ರದರ್ಶನ ಉದ್ಘಾಟಿಸುವರು ಎಂದರು.
ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ, ವಿಪ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿಸ್ವಾವು, ಶಾಸಕರಾದ ಎಂ. ಬಸವರಾಜನಾಯ್ಕ, ಬಿ.ಪಿ. ಹರೀಶ, ಎಸ್.ವಿ. ರಾಮಚಂದ್ರ, ಕರುಣಾಕರರೆಡ್ಡಿ, ಮೇಯರ್ ಸುಧಾ ಜಯರುದ್ರೇಶ, ಜಿಪಂ ಅಧ್ಯಕ್ಷೆ ಶೀಲಾ ಗದ್ದಿಗೇಶ, ತಾಪಂ ಅಧ್ಯಕ್ಷ ದೊಗ್ಗಳ್ಳಿ ರೇವಣಸಿದ್ದಪ್ಪ ಪಾಲ್ಗೊಳ್ಳುವರು ಎಂದರು.
ಪ್ರತಿ ಬಿಪಿಎಲ್ ಕುಟುಂಬಕ್ಕೆ 1 ವರ್ಷಕ್ಕೆ 1.5 ಲಕ್ಷ ವರೆಗೆ ಚಿಕಿತ್ಸಾ ಸೌಲಭ್ಯ ಯೋಜನೆಯಡಿ ದೊರಕಲಿದೆ. ವಿಶೇಷ ಪ್ರಕರಣಗಳಲ್ಲಿ ಇದಕ್ಕಿಂತಲೂ ಹೆಚ್ಚಿನ ಹಣದ ಅವಶ್ಯಕತೆ ಇದ್ದಲ್ಲಿ, ಹೆಚ್ಚುವರಿ ರು. 50 ಸಾವಿರ ವರೆಗೆ ನೀಡಲಾಗುತ್ತದೆ. ಈ ಸೌಲಭ್ಯವು ಬಿಪಿಎಲ್ ಕುಟುಂಬದ ಯಾವುದೇ ಐವರು ಸದಸ್ಯರಿಗೆ ಮಾತ್ರ ಲಭ್ಯವಿರುತ್ತದೆ.
ನಗರದ ಸಿಟಿ ಸೆಂಟ್ರಲ್ ಆಸ್ಪತ್ರೆ, ಕಡ್ಲಿ ಆಸ್ಪತ್ರೆ, ಎಸ್ಸೆಸ್ ಹೈಟೆಕ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಚಿಕಿತ್ಸೆ ಸೌಲಭ್ಯ ಕಲ್ಪಿಸಲಾಗುವುದು ಎಂದರು. ಪಾಲಿಕೆ ಆಯುಕ್ತ ಬಿ. ಭೀಮಪ್ಪ, ಜಿಲ್ಲಾ ಆಸ್ಪತ್ರೆ ಅಧೀಕ್ಷಕ ಡಾ. ಟಿ. ಪರಶುರಾಮಪ್ಪ ಇದ್ದರು.