ಕ.ಪ್ರ ವಾರ್ತೆ, ದಾವಣಗೆರೆ, ಮಾ.5
ದಾವಿವಿ ದೃಶ್ಯಕಲಾ ಮಹಾ ವಿದ್ಯಾಲಯದ ಅಪೂರ್ಣ ಕಲಾ ಗ್ಯಾಲರಿಯನ್ನು 1 ಕೋಟಿ ವೆಚ್ಚದಲ್ಲಿ ಪೂರ್ಣಗೊಳಿಸುವ ಜೊತೆಗೆ ಕಾಲೇಜನ್ನು 15 ಲಕ್ಷ ವೆಚ್ಚದಲ್ಲಿ ನವೀಕರಣ ಮಾಡುವ ಕಾರ್ಯ ಕೈಗೆತ್ತಿಕೊಂಡಿರುವುದಾಗಿ ದಾವಿವಿ ಕುಲಪತಿ ಪ್ರೊ. ಎಸ್. ಇಂದುಮತಿ ತಿಳಿಸಿದರು.
ನಗರದ ದಾವಿವಿ ದೃಶ್ಯಕಲಾ ಕಾಲೇಜಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಲಿತಕಲಾ ಮಹಾ ವಿದ್ಯಾಲಯ ಹೆಸರನ್ನು ವಿವಿ ದೃಶ್ಯಕಲಾ ಮಹಾ ವಿದ್ಯಾಲಯ ಎಂಬುದಾಗಿ ಪುನರ್ ನಾಮಕರಣ ಮಾಡಿದ್ದು, ಇದೀಗ ಕಾಲೇಜಿಗೆ ಕಾಯಕಲ್ಪ ನೀಡುವ ಕೆಲಸಕ್ಕೆ ವಿವಿ ಮುಂದಾಗಿದೆ ಎಂದರು.
ಕಾಮಗಾರಿಗೆ ಸೂಚನೆ: ಕಾಲೇಜು ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ. ದಾವಿವಿ 2009ರಲ್ಲಿ ಸ್ಥಾಪನೆಯಾದಾಗಿನಿಂದ ಕಾಲೇಜಿನಲ್ಲಿ ಆರ್ಟ್ ಗ್ಯಾಲರಿ ಕಟ್ಟಡದ ಕಾಮಗಾರಿ ಕುವೆಂಪು ವಿವಿ ಸ್ಥಗಿತಗೊಳಿಸಿತ್ತು. ಕಟ್ಟಡವನ್ನು ಹಸ್ತಾಂತರಿಸಲು ಕುವಿವಿಗೆ ನಿರಂತರ ಒತ್ತಡ ಹೇರಿದ್ದೆವು. ಅಂತಿಮವಾಗಿ ಸರ್ಕಾರದ ಮಟ್ಟದಲ್ಲೇ ಇದು ಬಗೆಹರಿದಿದ್ದು, ಗುತ್ತಿಗೆದಾರರ ಹಳೆ ಬಾಕಿ ಪಾವತಿಸಿದೆ. ಕಾಮಗಾರಿ ಕೈಗೊಳ್ಳಲು ಸೂಚಿಸಿದೆ ಎಂದು ಅವರು ಹೇಳಿದರು.
ಶಿಲ್ಪಕಲೆ ಕೋರ್ಸ್ಗೆ ಬೇಡಿಕೆ: ಅನಿಮೇಷನ್, ಶಿಲ್ಪಕಲೆ, ಟೆರ್ರಾಕೋಟಾ, ಉಬ್ಬುಶಿಲ್ಪ, ಗ್ರಾಫಿಕ್ಸ್ ಸೇರಿದಂತೆ ಹಲವಾರು ಕೋರ್ಸ್ಗೆ ಬೇಡಿಕೆ ಇದ್ದು, ಅವುಗಳನ್ನು ಆರಂಭಿಸಲಾಗುವುದು. ಅಗತ್ಯ ಮೂಲ ಸೌಕರ್ಯ, ಬೋಧಕ ಸಿಬ್ಬಂದಿ ಒದಗಿಸಲಿದ್ದೇವೆ. ಕುವಿವಿ ನಿರ್ಲಕ್ಷ್ಯದಿಂದ ಕಾಲೇಜಿನಲ್ಲಿ ಶೈಕ್ಷಣಿಕ ವಾತಾವರಣವಿಲ್ಲದಂತಾಗಿತ್ತು. ಖಾಯಂ ಬೋಧಕರಿಲ್ಲದೆ, ವಿದ್ಯಾರ್ಥಿಗಳ ಸಂಖ್ಯೆ ವರ್ಷ ವರ್ಷಕ್ಕೂ ಕಡಿಮೆಯಾಗುತ್ತಾ ಬಂದಿತ್ತು ಎಂದು ಅವರು ಹೇಳಿದರು.
ಸಮರ್ಪಕ ನಿರ್ವಹಣೆ ಇಲ್ಲದ್ದರಿಂದ ಭೂತ ಬಂಗಲೆಯಂತೆ, ಪಾಳು ಕಟ್ಟಡದಂತಾಗಿದ್ದ ಕಾಲೇಜನ್ನು ದಾವಿವಿ ವಶಕ್ಕೆ ಪಡೆದ ನಂತರ ಪುನಶ್ಚೇತನ ನೀಡುವ ಕೆಲಸ ಹಂತ ಹಂತವಾಗಿ ನಡೆದಿದೆ. 3 ದಶಕದಿಂದ ಕಾಲೇಜಿನ ಅನೇಕ ಕೊಠಡಿ ಬೀಗ ತೆಗೆದಿರಲಿಲ್ಲ. ಸ್ವಚ್ಛತೆ ದೂರದ ಮಾತಾಗಿತ್ತು. ಬಳಕೆಯಾಗದ್ದರಿಂದ ಅನೇಕ ಸಾಮಗ್ರಿ ಹಾಳಾಗಿದ್ದವು ಎಂದು ಅವರು ಅವ್ಯವಸ್ಥೆ ಬಗ್ಗೆ ಎಳೆ ಎಳೆಯಾಗಿ ಬಿಡಿಸಿದ್ದರು.
15 ಲಕ್ಷ ವೆಚ್ಚ: ಕಟ್ಟಡ ದುರಸ್ತಿ, ಪೀಠೋಪಕರಣ ಖರೀದಿಗೆ ಕೋಟ್ಯಂತರ ಹಣ ದುರ್ಬಳಕೆ ಮಾಡಿಕೊಳ್ಳಲು ಕೆಲವರು ಯತ್ನಿಸಿದ್ದರು. ತಾವು, ಕುಲ ಸಚಿವ ಡಾ. ಡಿ.ಎಸ್. ಪ್ರಕಾಶ್ ಜೊತೆ ಭೇಟಿ ನೀಡಿ, ಪರಿಶೀಲಿಸಿದಾಗ ಅಷ್ಟೊಂದು ಹಣದ ಅವಶ್ಯಕತೆ ಇಲ್ಲ ಎಂಬುದು ಸ್ಪಷ್ಟವಾಯಿತು. ಕಟ್ಟಡ ದುರಸ್ತಿ, ಹಳೆ ಪೀಠೋಪಕರಣಗಳನ್ನು ಕೇವಲ 15 ಲಕ್ಷ ವೆಚ್ಚದಲ್ಲಿ ಸರಿಪಡಿಸುವ ಕೆಲಸ ನಡೆದಿದೆ ಎಂದು ಅವರು ತಿಳಿಸಿದರು.
ವಿವಿ ಕುಲ ಸಚಿವ ಡಾ. ಡಿ.ಎಸ್. ಪ್ರಕಾಶ, ಉಪ ಕುಲ ಸಚಿವ ಜಯದೇವಪ್ಪ, ಬೋಧಕಿ ವಾಸಂತಿ ಮತ್ತಿತರರು ಇದ್ದರು.
ಕಾಲೇಜಿನ ಜಾಗ ಒತ್ತುವರಿ: ಕಿಡಿ
ಸುಮಾರು 22.20 ಎಕರೆ ಜಮೀನನ್ನು ಕಾಲೇಜು ಹೊಂದಿತ್ತು. ಇದರಲ್ಲಿ ಈಗ ಕೇವಲ 18 ಎಕರೆ ಮಾತ್ರ ಬಾಕಿ ಉಳಿದಿದೆ. ಅಕ್ಕಪಕ್ಕದ ಖಾಸಗಿ ಬಡಾವಣೆಯವರು ಕಾಲೇಜು ಜಾಗದಲ್ಲೇ ರಸ್ತೆಯನ್ನು ನಿರ್ಮಾಣ ಮಾಡಿದ್ದು, ಅದನ್ನು ತೆರವುಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ಪ್ರೊ. ಎಸ್. ಇಂದುಮತಿ ಹೇಳಿದರು.
ಕಾಲೇಜಿಗೆ ಇರಬೇಕಾಗಿದ್ದ 15 ಹುದ್ದೆಗಳ ಪೈಕಿ ಕೇವಲ ಮೂವರು ಖಾಯಂ ಉಪನ್ಯಾಸಕರಿದ್ದಾರೆ. ಖಾಲಿ ಹುದ್ದೆಗಳ ನೇಮಕಕ್ಕೆ ಸರ್ಕಾರದ ಅನುಮೋದನೆ ಕೋರಲಾಗಿದೆ. ಬೋಧಕೇತರ ಸಿಬ್ಬಂದಿ ಪೈಕಿ ಮಂಜೂರಾದ ಹುದ್ದೆ ಎಷ್ಟು ಎಂಬ ಬಗ್ಗೆ ದಾಖಲೆ ಲಭ್ಯವಾಗಿಲ್ಲ. ಈ ಬಗ್ಗೆ ಪರಿಶೀಲಿಸಲಾಗುವುದು. ಅಗತ್ಯ ಸಿಬ್ಬಂದಿಯನ್ನು ನೇಮಿಸಲು ದಾವಣಗೆರೆ ವಿಶ್ವ ವಿದ್ಯಾನಿಲಯ ಕ್ರಮ ಕೈಗೊಳ್ಳಲಿದೆ ಎಂದು ಪ್ರೊ. ಎಸ್. ಇಂದುಮತಿ ತಿಳಿಸಿದರು.