ಹೊನ್ನಾಳಿ: ಇಲ್ಲಿನ ಪಪಂ ಇಡೀ ಪಟ್ಟಣದ ಜನರ ಆರೋಗ್ಯ ಹರಾಜಿಗಿಟ್ಟಿದೆ ಎಂದು ಮಾನವ ಹಕ್ಕು ಸಮಿತಿಯ ತಾಲೂಕು ಅಧ್ಯಕ್ಷ ಕೆ.ಎಚ್. ರಾಜಪ್ಪ ದೂರಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಸ್ತುತ ದಿನಗಳು ಬೇಸಿಗೆ ದಿನಗಳಾಗಿದ್ದು, ಕುಡಿಯುವ ನೀರಿನ ಹಾಹಾಕಾರ ತೀವ್ರವಾಗಿದೆ. ಪಟ್ಟಣದಲ್ಲಿ ಕುಡಿಯುವ ನೀರಿನ ಶುದ್ಧೀಕರಣ ಘಟಕವಿದ್ದರೂ, ನಲ್ಲಿಗಳಲ್ಲಿ ಮಾತ್ರ ಕುಲುಷಿತ ನೀರು ಪೊರೈಕೆಯಾಗುತ್ತಿದ್ದು, ಈ ಬಗ್ಗೆ ಪಪಂ ಅಧಿಕಾರಿಗಳಿಗೆ ಹಾಗೂ ಆರೋಗ್ಯ ನಿರೀಕ್ಷಕರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದರು.
ಸಾಕಷ್ಟು ಕಶ್ಮಲ: ಪಪಂನಿಂದ ಸರಬರಾಜು ಮಾಡುವ ನಲ್ಲಿ ನೀರಿನಲ್ಲಿ ಸಾಕಷ್ಟು ಕಶ್ಮಲವಿದ್ದು, ಇದರಿಂದ ಮಹಿಳೆಯರು ಮಕ್ಕಳು ಭೀಕರ ರೋಗಕ್ಕೆ ತುತ್ತಾಗುತ್ತಾ ದೂರದ ಆಸ್ಪತ್ರೆಗಳಿಗೆ ಹತ್ತಾರು ಸಾವಿರ ರೂಪಾಯಿಗಳನ್ನು ಖರ್ಚುಮಾಡಿಕೊಂಡು ಹೋಗುವ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದರು.
ಸಾರ್ವಜನಿಕರ ಯಾವುದೇ ಮನವಿಗೆ ಗಮನಹರಿಸುವ ಕನಿಷ್ಠ ಸೌಜನ್ಯ ಕೂಡ ಪಪಂ ಆರೋಗ್ಯ ನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ರಾಮಚಂದ್ರಪ್ಪ ಅವರಿಗೆ ಇಲ್ಲವಾಗಿದ್ದು, ಇವರು ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಭ್ರಷ್ಟಾರದಲ್ಲಿ ಮುಳುಗಿ ಹೋಗಿದ್ದಾರೆ ಎಂದು ಆರೋಪಿಸಿದರು.
ಕಳಪೆ ಕಾಮಗಾರಿ: ಪಟ್ಟಣದ ಎಲ್ಲಾ ವಾರ್ಡ್ಗಳಲ್ಲಿ ಕಾಂಕ್ರಿಟ್ ಚರಂಡಿ ಕಾಮಗಾರಿ ನಡೆದಿದ್ದು, ಸುಂಪೂರ್ಣ ಕಳಪೆ ಕೆಲಸಗಳಾಗಿರುವ ಕಾರಣ ನೀರು ಸರಾಗವಾಗಿ ಹರಿದು ಹೋಗದೇ ಚರಂಡಿಯಲ್ಲಿ ನಿಂತು ಕಸಕಡ್ಡಿಗಳು ತುಂಬಿ ಕೊಳೆತು ದುರ್ವಾಸನೆ ಬೀರುವಂತಾಗಿವೆ ಎಂದರು.
ಕೂಡಲೇ ಜಿಲ್ಲಾಧಿಕಾರಿ ಹಾಗೂ ಪೌರಾಡಳಿತ ಇಲಾಖೆ ಉನ್ನತಾಧಿಕಾರಿಗಳು ಪಟ್ಟಣಕ್ಕೆ ಭೇಟಿ ನೀಡಿ, ಪಟ್ಟಣದ ಪ್ರತಿ ವಾರ್ಡ್ನ ಪರಿಸ್ಥಿತಿ ಪರಿಶೀಲಿಸಿ ಮಾಡಿ, ಸ್ಚಚ್ಛತೆ ಕಾರ್ಯದಲ್ಲಿ ನಿರ್ಲಕ್ಷ್ಯವಹಿಸುತ್ತಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಮಾನವ ಹಕ್ಕುಗಳ ತಾಲೂಕು ಸಮಿತಿ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಮಾನವ ಹಕ್ಕುಗಳ ಸಮಿತಿ ಗೌರವಾಧ್ಯಕ್ಷ ಕೋಟೆ ಚಂದ್ರಕುಮಾರಪ್ಪ, ಉಪಾಧ್ಯಕ್ಷ ವಸಂತಕುಮಾರ್ ಮೊದಲಾದವರು ಹಾಜರಿದ್ದರು.