14 ಲಕ್ಷ ವೆಚ್ಚದಲ್ಲಿ ಸಾಯಿಬಾಬಾ ನಾಟಕ!

Updated on: 

ಕನ್ನಡಪ್ರಭ ವಾರ್ತೆ  ದಾವಣಗೆರೆ  ಮಾ.5
ಕೊಟ್ಟೂರಿನಲ್ಲಿ ಶ್ರೀ ಗುರುಕೊಟ್ಟೂರೇಶ್ವರಸ್ವಾಮಿ ರಥೋತ್ಸವ ಅಂಗವಾಗಿ ದಾವಣಗೆರೆಯ ಕೆಬಿಆರ್ ಡ್ರಾಮಾ ಕಂಪನಿ 14 ಲಕ್ಷ ವೆಚ್ಚದಲ್ಲಿ 'ದೈವ ಸ್ವರೂಪಿ ಸಾಯಿಬಾಬಾ' ನಾಟಕವನ್ನು ಮಾರ್ಚ್ 6ರಂದು ಪ್ರದರ್ಶಿಸಲಿದೆ ಎಂದು ಕಂಪನಿ ಮಾಲೀಕ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿಂದೋಡಿ ಶ್ರೀಕಂಠೇಶ್ವರ್ ಅವರು ತಿಳಿಸಿದ್ದಾರೆ.
ಮಂಗಳವಾರ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, '14 ಲಕ್ಷ ವೆಚ್ಚದಲ್ಲಿ ವಿಶೇಷ ಸೀನರಿ, ಡಿಜಿಟಲ್ ಸೌಂಡ್ ಸಿಸ್ಟಂ, ಆಧುನಿಕ ಟ್ರಿಕ್ಸ್ ಬಳಸಲಾಗುತ್ತಿದೆ. ನಾಟಕದ ಅಂತಿಮ ಘಟ್ಟದ 3 ನಿಮಿಷಕ್ಕೆ ಸುಮಾರು 4.5 ಲಕ್ಷ ವೆಚ್ಚ ಮಾಡಲಾಗಿದೆ. ಸಾಯಿಬಾಬಾ ಉದ್ಭವವಾಗುವ, ಹತ್ತಾರು ದೇವರು ಏಕಕಾಲಕ್ಕೆ ಲೀನವಾಗುವ ಸನ್ನಿವೇಶಗಳನ್ನು ಅದ್ದೂರಿಯಾಗಿ ಪ್ರದರ್ಶಿಸಲಾಗುವುದು. ಅಷ್ಟೇ ಅಲ್ಲದೆ, ಜೀವಂತ ಕುದುರೆ, ನಾಯಿಗಳನ್ನು ಪ್ರದರ್ಶನಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.
18 ತಿಂಗಳ ಪ್ರಯತ್ನ: ರಂಗಭೂಮಿ ಸಂಕಷ್ಟದಲ್ಲಿರುವ ಕಾಲವಿದು. ಹೀಗಿದ್ದರೂ ಕೆಬಿಆರ್ ಡ್ರಾಮಾ ಕಂಪನಿ ಸಮಾಜಕ್ಕೆ ಏನಾದರೂ ಸಂದೇಶವನ್ನು ನೀಡುವ ಸದುದ್ದೇಶದಿಂದ ಪವಾಡ ಪುರುಷ ಸಾಯಿಬಾಬಾ ನಾಟಕ ಪ್ರದರ್ಶಿಸಲು ಕಳೆದ 18 ತಿಂಗಳ ನಿರಂತರ ಪ್ರಯತ್ನ ಇಂಥ ಸಾಹಸಕ್ಕೆ ಮುಂದಾಗಿದೆ ಎಂದರು. ಕೊಟ್ಟೂರಿನಲ್ಲಿ ಮಾ.6ರಿಂದ ಸಂಜೆ 6.15 ಮತ್ತು ರಾತ್ರಿ 10.30ಕೆ ಹೀಗೆ 2 ಪ್ರದರ್ಶನವಿರುತ್ತವೆ. ಚಿತ್ರಕಥೆ, ನಿರ್ದೇಶಕ ಚಿಂದೋಡಿ ಬಂಗಾರೇಶ್, ನಿರ್ಮಾಣ ಚಿಂದೋಡಿ ಮಧುಕೇಶ ಅವರದ್ದು.
ಶಿರಡಿಯಲ್ಲೂ ಪ್ರದರ್ಶನ: ಚಿಂದೋಡಿ ಶಂಭುಲಿಂಗಪ್ಪ ಮಾತನಾಡಿ, 'ಶಿರಡಿ ಸಾಯಿಬಾಬಾ ಮಂದಿರ ಟ್ರಸ್ಟ್ ಪ್ರಮುಖರು ಈಗಾಗಲೇ ನಾಟಕ ವೀಕ್ಷಿಸಿ, ಮೆಚ್ಚುಗೆ ಸೂಚಿಸಿದ್ದಾರೆ. ಏ.11ಕ್ಕೆ ಮಹಾರಾಷ್ಟ್ರದ ಶಿರಡಿಯಲ್ಲಿ, ಏ.13ಕ್ಕೆ ಸಾಂಗ್ಲಿ, ಏ.1ಕ್ಕೆ ಪುಣೆಯಲ್ಲಿ ಶಿರಡಿ ಸಾಯಿಬಾಬಾ ನಾಟಕ ಪ್ರದರ್ಶನವಿದೆ ಎಂದರು.  ಹಿರಿಯ ಕಲಾವಿದ ಮೆಹಬೂಬ್ ಅಲಿ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com