ಮಾಯಕೊಂಡ ತಾ. ಘೋಷಣೆಗೆ ಒತ್ತಾಯ

Updated on: 

ಕ.ಪ್ರ ವಾರ್ತೆ, ದಾವಣಗೆರೆ, ಮಾ.5
ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಕೊಟ್ಟ ಮಾತಿನಂತೆ ಮಾ.15ರಂದು ರಾಜ್ಯ ಗೆಜೆಟ್‌ನಲ್ಲಿ ಮಾಯಕೊಂಡ ತಾಲೂಕು ಘೋಷಿಸದಿದ್ದರೆ, ಮಾರನೆಯ ದಿನದಿಂದಲೇ ದಾವಣಗೆರೆ ಜಿಲ್ಲಾಧಿಕಾರಿ ಕಚೇರಿ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಆರಂಭಿಸುವುದಾಗಿ ಮಾಯಕೊಂಡ ತಾಲೂಕು ಹೋರಾಟ ಸಮಿತಿ ಎಚ್ಚರಿಸಿದೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.15ರಂದು ರಾಜ್ಯ ಗೆಜೆಟ್‌ನಲ್ಲಿ ಮಾಯಕೊಂಡ ತಾಲೂಕನ್ನು ಘೋಷಿಸುವುದಾಗಿ ನೀಡಿದ ಭರವಸೆಯಂತೆ ಸಿಎಂ ಶೆಟ್ಟರ್ ನಡೆದುಕೊಳ್ಳಬೇಕು. ಇಲ್ಲದಿದ್ದರೆ ಗ್ರಾಮಸ್ಥರು ಸಾವನ್ನೂ ಲೆಕ್ಕಿಸದೆ, ಅಮರಣಾಂತ ಉಪವಾಸ ಆರಂಭಿಸಬೇಕಾದೀತು ಎಂದರು.
ಕಡೆಗಣನೆ ಸರಿಯಲ್ಲ: ದಿವಂಗತ ರಾಮಕೃಷ್ಣ ಹೆಗಡೆ ಕಾಲದಿಂದಲೂ ಮಾಯಕೊಂಡ ತಾಲೂಕಿಗಾಗಿ ಹೋರಾಟ ನಡೆದೇ ಇತ್ತು. ನ್ಯಾಮತಿಯನ್ನು ತಾಲೂಕಾಗಿ ಘೋಷಿಸಿದ ಸರ್ಕಾರ ಮಾಯಕೊಂಡವನ್ನು ಕಡೆಗಣಿಸಿದ್ದು ಸರಿಯಲ್ಲ. ಹೆಗಡೆ ಕಾಲದಿಂದ ಈವರೆಗಿನ ಹೋರಾಟಕ್ಕೆ ಯಾವೊಂದು ಸರ್ಕಾರ ಸ್ಪಂದಿಸಿಲ್ಲ. ಸಚಿವ ರವೀಂದ್ರನಾಥ, ಸಂಸದ ಸಿದ್ದೇಶ್ವರ, ಶಾಸಕ ಬಸವರಾಜ ನಾಯ್ಕ ಮತ್ತಿತರರ ನೇತೃತ್ವದ ನಿಯೋಗಕ್ಕೆ ನೀಡಿದ ಭರವಸೆಯಂತೆ ತಾಲೂಕು ಘೋಷಿಸಲಿ ಎಂದು ಅವರು ಒತ್ತಾಯಿಸಿದರು.
ಸಮಿತಿಗಳ ಶಿಫಾರಸ್ಸು: ಹುಂಡೇಕಾರ್, ಗದ್ದಿಗೌಡರ್, ವಾಸುದೇವರಾವ್ ಸಮಿತಿಗಳು ಮಾಯಕೊಂಡ ತಾಲೂಕು ಘೋಷಣೆಗೆ ಶಿಫಾರಸ್ಸು ಮಾಡಿವೆ. ಈಗಾಗಲೇ ಮಾಯಕೊಂಡ ಸುತ್ತಮುತ್ತಲಿನ ಗ್ರಾಪಂಗಳೂ ಮಾಯಕೊಂಡ ತಾಲೂಕು ಘೋಷಣೆಗೆ ಗೊತ್ತುವಳಿ ಅಂಗೀಕರಿಸಿದೆ. ಜನರ ಭಾವನೆಗೆ ಬೆಲೆ ಕೊಟ್ಟು, ಸರ್ಕಾರ ತಾಲೂಕು ಘೋಷಿಸಬೇಕು. ಮಾ.15ರ ಒಳಗಾಗಿ ಮತ್ತೊಮ್ಮೆ ಸಿಎಂ ಜಗದೀಶ ಶೆಟ್ಟರ್ ಬಳಿ ನಿಯೋಗ ಹೋಗಿ, ಮಾ.15ರಂದು ತಾಲೂಕು ಘೋಷಣೆಗೆ ಒತ್ತಾಯಿಸಲಾಗುವುದು ಎಂದು ಅವರು ಹೇಳಿದರು.
ದೊಡ್ಡ ಹೋಬಳಿ ಕೇಂದ್ರವೆಂಬ ಖ್ಯಾತಿಯ ಮಾಯಕೊಂಡ ರಾಜ್ಯ ಹೆದ್ದಾರಿ 19 (ಎ)ದಲ್ಲಿದೆ. ಬೆಂಗಳೂರು, ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ- ಧಾರವಾಡ, ಚಿತ್ರದುರ್ಗ ಸೇರಿದಂತೆ ಅನೇಕ ಭಾಗಗಳಿಗೆ ನೇರ ರಸ್ತೆ ಮಾರ್ಗ ಹೊಂದಿದೆ. ಯಾವುದೇ ಹೋಬಳಿ ಕೇಂದ್ರಕ್ಕೂ ಇಲ್ಲದ ರೇಲ್ವೆ ಸೌಕರ್ಯ ಇಲ್ಲಿಗೆ ಇದೆ. ಜಿಲ್ಲಾ, ತಾಲೂಕು ಕೇಂದ್ರದಿಂದ 32 ಕಿ.ಮೀ. ಅಂತರದಲ್ಲಿ ಇರುವ ಸುತ್ತಮುತ್ತ ಲಿನ 70ಕ್ಕೂ ಹೆಚ್ಚು ಗ್ರಾಮವನ್ನು ಹೊಂದಿರುವ ಮಾಯಕೊಂಡ ತಾಲೂಕು ಘೋಷಿಸಲಿ ಎಂದು  ಆಗ್ರಹಿಸಿದರು.
ಮಾಯಕೊಂಡ ಗ್ರಾಪಂ ಅಧ್ಯಕ್ಷ ಆರ್. ನಾಗರಾಜಪ್ಪ, ಹೋರಾಟ ಸಮತಿ ಮುಖಂಡ, ಪುರಸಭೆ ಮಾಜಿ ಅಧ್ಯಕ್ಷ ಎಸ್. ನೀಲಪ್ಪ, ಬಿ.ಕೆ. ಬೀರಪ್ಪ, ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ನಲ್ಕುಂದ ಹಾಲೇಶ, ರಾಜಶೇಖರ ಸಂಡೂರು, ಎಂ.ಜಿ. ಗುರುನಾಥ, ಜಗದೀಶ ಮತ್ತಿತರರು ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com