ಕ.ಪ್ರ.ವಾರ್ತೆ ದಾವಣಗೆರೆ ಮಾ.7
ನಕಲಿ ಮತದಾನ ಮಾಡಿದ್ದನ್ನು ಖಂಡಿಸಿ ಅಸಲಿ ಮತದಾರರಿಂದ ಚಾಲೆಂಜ್ ಮತ ಚಲಾವಣೆ, ಮತಗಟ್ಟೆ ಬಳಿ ಧಾವಿಸಿ ಮತ ಕೇಳುತ್ತಿದ್ದ ಅಭ್ಯರ್ಥಿಯೊಬ್ಬರಿಗೆ ಎದುರಾಳಿ ಅಭ್ಯರ್ಥಿ ಬೆಂಬಲಿಗರ ಕಡೆಯಿಂದ ತೀವ್ರ ವಿರೋಧ, ಮತಗಟ್ಟೆ ಸಮೀಪ ಮತದಾರರಿಗೆ ಕರಪತ್ರ ಪ್ರದರ್ಶಿಸುತ್ತಿದ್ದ ಹಿನ್ನೆಲೆಯಲ್ಲಿ ಎರಡು ಕಡೆಯವರ ಮಧ್ಯೆ ಮಾತಿನ ಚಕಮಕಿ...
ಇವು ದಾವಣಗೆರೆ ಮಹಾ ನಗರ ಪಾಲಿಕೆಯ 41 ವಾರ್ಡ್ಗಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಅಲ್ಲಲ್ಲಿ ಕಂಡು ಬಂದ ದೃಶ್ಯಗಳಾಗಿವೆ.
ನಗರ ಪಾಲಿಕೆ 34, 35 ಸೇರಿದಂತೆ ಅನೇಕ ವಾರ್ಡ್ನಲ್ಲಿ ಕೆಲ ಮತದಾರರು ತಮ್ಮ ಗುರುತಿನ ಚೀಟಿ ಸಮೇತ ಮತ ಚಲಾಯಿಸಲು ಬಂದಾಗ, ಅದಾಗಲೇ ಮತ ಚಲಾವಣೆಯಾಗಿದೆ ಎಂಬ ಸಂಗತಿ ಕೇಳಿ ಅವಕ್ಕಾದರು. ಮುಂದೇನು ಮಾಡಬೇಕು ಎಂಬುದೇ ತೋಚದಂತಾದರು. ತಕ್ಷಣ ಅಂತಹವರ ನೆರವಿಗೆ ಬಂದ ಮುಖಂಡರು ಮತದಾನ ವಂಚಿತವಾಗುವುದರ ಬದಲಿಗೆ, ಚಾಲೆಂಜ್ ಮತ ಚಲಾಯಿಸುವಂತೆ ಮನವಿ ಮಾಡಿ, ಮತ ಚಲಾವಣೆಯಾಗುವಂತೆ ನೋಡಿಕೊಂಡರು.
ಕರಪತ್ರ ತೆಗೆಸಲು ಒತ್ತಾಯ: ಮತಗಟ್ಟೆಯೊಂದರ ಬಳಿ ಮತದಾರರ ಗಮನ ಸೆಳೆಯಲು ಕರಪತ್ರ ಪ್ರದರ್ಶಿಸುತ್ತಿದ್ದ ಅಭ್ಯರ್ಥಿ ಬೆಂಬಲಿಗರೊಂದಿಗೆ ಎದುರಾಳಿ ಅಭ್ಯರ್ಥಿ ಕಡೆಯವರು ವಾಗ್ವಾದಕ್ಕಿಳಿದರು. 35ನೇ ವಾರ್ಡ್ನಲ್ಲಿ ಮತಗಟ್ಟೆಯೊಂದರ ಸಮೀಪವಿದ್ದ ಪಕ್ಷವೊಂದರ ಏಜೆಂಟರು ಮತದಾರರಿಗೆ ಪಕ್ಷದ ಕರಪತ್ರ ನೀಡುತ್ತಿದ್ದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಎದುರಾಳಿ ಪಕ್ಷದವರು ತಕ್ಷಣ ಅಲ್ಲಿಂದ ಕರಪತ್ರವನ್ನು ತೆಗೆಸಲು ಒತ್ತಾಯಿಸಿದರು. ಆಗ ಚುನಾವಣಾಧಿಕಾರಿ, ಪೊಲೀಸರು ಕರಪತ್ರ ತೆಗೆಸಿದ್ದರಿಂದ ಪರಿಸ್ಥಿತಿ ತಿಳಿಗೊಳಿಸಿದರು.
ಅಭ್ಯರ್ಥಿಯೊಬ್ಬರು 27ನೇ ವಾರ್ಡ್ನ ಮತಗಟ್ಟೆ ಬಳಿ ನಿಂತಿದ್ದರಿಂದ ಎದುರಾಳಿ ಪಕ್ಷದ ಕಾರ್ಯಕರ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಆಗ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತಾದರೂ ಸ್ಥಳಕ್ಕೆ ಧಾವಿಸಿದ ಪೊಲೀಸ್ ಅಧಿಕಾರಿ, ಸಿಬ್ಬಂದಿ ಪರಿಸ್ಥಿತಿ ತಿಳಿಗೊಳಿಸಿದರು. 26ನೇ ವಾರ್ಡ್ನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಜೊತೆಗಿದ್ದುಕೊಂಡೇ ಚುನಾವಣೆ ಎದುರಿಸಿದರು.
ಪೊಲೀಸರ ಹರಸಾಹಸ: ಪ್ರತಿ ಮತಗಟ್ಟೆ ಗಡಿರೇಖೆಯಿಂದ ಅಭ್ಯರ್ಥಿ ಬೆಂಬಲಿಗರನ್ನು ಪೊಲೀಸರು ದೂರ ಕಳಿಸುತ್ತಿದ್ದರು. ಈ ವಾರ್ಡ್ನಲ್ಲಿ ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ಬೆಂಬಲಿಗರನ್ನು ಗಡಿ ರೇಖೆಯಿಂದ ದೂರ ಕಳಿಸುವಲ್ಲಿ. ಗುಂಪು ಸೇರದಂತೆ ತಡೆಯಲು ಪೊಲೀಸರು ಹರ ಸಾಹಸಪಟ್ಟರು.
ಹೊಸ ಮತದಾರರಿಂದ ವಯೋವೃದ್ಧರವರೆಗೆ ಬಹುತೇಕ ಮತದಾರರು ಸ್ವಯಂ ಪ್ರೇರಣೆಯಿಂದ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರು. ಕೆಟಿಜೆ ನಗರದ ಚಿರಂಜೀವಿ ಶಾಲೆ ಮತಗಟ್ಟೆಯಲ್ಲಿ ದೇವರಾಜ, ರೇಣುಕಮ್ಮ ಎಂಬ ಅಂಧರು ಮತಗಟ್ಟೆಗೆ ಧಾವಿಸಿ, ಮತ ಚಲಾಯಿಸಿ, ಇತರರಿಗೂ ಮಾದರಿಯಾದರು.