ಅಭ್ಯರ್ಥಿ ಪರ, ವಿರುದ್ಧ ಭಾರೀ ಬೆಟ್ಟಿಂಗ್

Updated on: 

ಕ.ಪ್ರ.ವಾರ್ತೆ, ದಾವಣಗೆರೆ, ಮಾ.8
ಅತ್ತೂ ಕರೆದು ಔತಣ ಮಾಡಿಸಿಕೊಂಡರು ಎನ್ನುವಂತೆ ಆಯಾ ಪಕ್ಷಗಳ ಟಿಕೆಟ್ ಪಡೆದವರು ನಿನ್ನೆಯ ಚುನಾವಣೆಯಲ್ಲಿ ತಮ್ಮ ಹಣೆಬರಹವನ್ನು ವಾರ್ಡ್‌ನ ಮತದಾರರು ಏನೆಂದು ಬರೆದಿದ್ದಾರೋ ಎಂಬ ಆತಂಕದಲ್ಲಿ ಕಳೆಯುತ್ತಿದ್ದರೆ, ಅಭ್ಯರ್ಥಿ ಪರ ಮತ್ತು ವಿರುದ್ಧ ವ್ಯಾಪಕ ಬೆಟ್ಟಿಂಗ್ ಕಟ್ಟುತ್ತಿರುವ ಸಂಗತಿಯೂ ಈಗ ಆರೂ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಹರಿದಾಡುತ್ತಿವೆ.
 ದಾವಣಗೆರೆ ನಗರ ಪಾಲಿಕೆ ಸೇರಿದಂತೆ ಜಿಲ್ಲೆಯ ಆರೂ ನಗರ ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶ ತೀವ್ರ ಕುತೂಹಲ ಕೆರಳಿಸಿವೆ. 149 ವಾರ್ಡ್‌ಗಳಲ್ಲೂ ನಿಖರವಾಗಿ ಫಲಿತಾಂಶ ಹೀಗೇ ಬರುತ್ತದೆ ಎಂಬುದಾಗಿ ಹೇಳಲು ಸಾಧ್ಯವಿಲ್ಲದಂತಾಗಿದೆ. ಮತದಾರರೂ ಸಹ ತಮ್ಮ ಗುಟ್ಟನ್ನು ಬಿಟ್ಟು ಕೊಟ್ಟಿಲ್ಲ. ಒಟ್ಟಾರೆ, ಫಲಿತಾಂಶ ಮಾತ್ರ ನಿಗೂಢವಾಗಿದೆ.
ಯಾರಿಗೆ ಪಟ್ಟ: ಬಿಜೆಪಿ, ಕಾಂಗ್ರೆಸ್ ಪಕ್ಷಗಳು ತಾವೇ ಅಧಿಕಾರಕ್ಕೆ ಬರುವುದಾಗಿ ಹೇಳಿಕೊಳ್ಳುತ್ತಿದ್ದರೆ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಬಿಎಸ್ಸಾರ್ ಕಾಂಗ್ರೆಸ್ ಸಂಸ್ಥಾಪಕ ಬಿ. ಶ್ರೀರಾಮುಲು ತಮ್ಮ ಪಕ್ಷ ಸ್ವಂತ ಬಲದಿಂದ ದಾವಣಗೆರೆ ಪಾಲಿಕೆಯಲ್ಲಿ ಆಡಳಿತ ನಡೆಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
   ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಇಲ್ಲಿ ಯಾರೇ ಅಧಿಕಾರಕ್ಕೆ ಬಂದರೂ ಕೆಜೆಪಿ ನೆರವಿನಿಂದಲೇ ಬರಬೇಕೆಂಬ ಫಲಿತಾಂಶ ನಿಶ್ಚಿತವೆಂಬ ಭವಿಷ್ಯ ನುಡಿದಿದ್ದರು.
 ಸೀಟುಗಳ ಲೆಕ್ಕಾಚಾರ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆದ ಮತ ಚಲಾವಣೆ ಆದಾರದಲ್ಲಿ, ಯಾವ ಜನರು ಹೆಚ್ಚಿನ ಮತಗಳನ್ನು ಚಲಾಯಿಸಿದ್ದಾರೆ ಎಂಬ ಆದಾರದಲ್ಲಿ ಆಯಾ ಪಕ್ಷಗಳ ಮುಖಂಡರು ಚಿಂತನ ಮಂಥನ ನಡೆಸಿ, ಅಧಿಕಾರಕ್ಕೆ ಅಗತ್ಯ ಸೀಟು ಸೆಳೆಯುವ ಲೆಕ್ಕಾಚಾರದಲ್ಲಿವೆ. ಪ್ರಮುಖ ಪಕ್ಷಗಳು ಯಾವ್ಯಾವ ವಾರ್ಡ್‌ನಲ್ಲಿ ಪಕ್ಷಕ್ಕೆ ಹಿನ್ನಡೆಯಾಗಲಿದೆ, ಗೆಲ್ಲುವಂತಹ ಬಂಡಾಯ, ಸ್ವತಂತ್ರ ಅಭ್ಯರ್ಥಿಗಳಲ್ಲಿ ಗೆಲ್ಲುವ ಸಾಧ್ಯತೆಯವರಿಗೆ ಬಲೆ ಬೀಸುವ ಪ್ರಯತ್ನ ನಡೆಯುತ್ತಿವೆ. ಅಂತಹವರ ಹಿತೈಷಿಗಳ ಮೂಲಕವೂ ಆಹ್ವಾನ ಹೋಗುತ್ತಿವೆ.
 ಕ್ರಿಕೆಟ್ ಬೆಟ್ಟಿಂಗ್ ಇಲ್ಲಿ ಸಾಮಾನ್ಯ. ಈಗ ಚುನಾವಣಾ ಫಲಿತಾಂಶ, ಅಭ್ಯರ್ಥಿ ಸೋಲು- ಗೆಲುವಿನ ಮೇಲೆ ಬೆಟ್ಟಿಂಗ್ ನಡೆಯುತ್ತಿದ್ದಾರೆ. ಅದು ಕೆಲವೇ ಸಾವಿರಗಳಿಂದ ಅನೇಕ ಲಕ್ಷಗಳ ಹಂತವನ್ನೂ ತಲುಪುತ್ತಿದ್ದಾರೆ. ಒಟ್ಟಾರೆ, ಎಲ್ಲಾ ಮಾಹಿತಿ ಸಂಗ್ರಹಿಸಿ, ಲೆಕ್ಕ ಹಾಕಿದರೂ ಅದು ಹಲವಾರು ಕೋಟಿಗಳನ್ನು ದಾಟುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಎಲ್ಲೇ ಹೋದರೂ , ಬಂದರೂ ಕ್ರಿಕೆಟ್ ಸ್ಕೋರ್ ಕೇಳಿದಂತೆ ಎಷ್ಟು ಕಟ್ಟಿದ್ದಾರಂತೆ, ಯಾರು ಗೆಲ್ಲುತ್ತಾರೆ, ಯಾರ ವಿರುದ್ಧ ಕಟ್ಟಿದ್ದಾರೆ, ಯಾರ ಬೆಟ್ಟಿಂಗ್ ಕಟ್ಟಿದ್ದಾರೆ ಎಂಬುದೇ ಈಗ ಸುದ್ದಿಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com