ಚನ್ನಗಿರಿ ಚುನಾವಣೆಗೆ ಮಾದರಿಯಾಗಲಿ

Updated on: 

ಚನ್ನಗಿರಿ: ಮುಂದಿನ ವಿಧಾನಸಭಾ ಚುನಾವಣೆಯನ್ನು ಮಾದರಿ ಚುನಾವಣೆಯನ್ನಾಗಿ ಮಾಡಲು ಚನ್ನಗಿರಿ ಕ್ಷೇತ್ರದಿಂದ ಸ್ಪರ್ಧಿಸಲಿರುವ ಮಾಡಾಳ್ ವಿರೂಪಾಕ್ಷಪ್ಪ ಮತ್ತು ವಡ್ನಾಳ್ ರಾಜಣ್ಣ ಸೇರಿದಂತೆ ಹಲವು ಆಕಾಂಕ್ಷಿತರು   ಒಂದು ತೀರ್ಮಾನಕ್ಕೆ ಬಂದು ಈ ಬಗ್ಗೆ ಸಾರ್ವಜನಿಕರೆದುರು ತಿಳಿಸಬೇಕು ಎಂದು ಸಿರಿಗೆರೆ ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀ ತಾಲೂಕಿನ ರಾಜಗೊಂಡನಹಳ್ಳಿಯಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ಸೂಚಿಸಿದರು.
  ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲು, ನ್ಯಾಯ ಸಮ್ಮತ ಚುನಾವಣೆ ನಡೆಯಲು, ನೀವು ನಡೆಸುವ ಪ್ರಚಾರ ಸಭೆಗಳಿಗೆ ಗುರುಗಳಾದ ನಾವು ಬರುತ್ತೇವೆ. ಚುನಾವಣೆ ಹೆಸರಿನಲ್ಲಿ ವಿನಾಕಾರಣ ಹಣ ಖರ್ಚಾಗಬಾರದು ಎಂದು ಹೇಳಿದ ಶ್ರೀಗಳು, ಅಧಿಕಾರದಲ್ಲಿದ್ದಾಗ ಬೆಳ್ಳಿ- ಬಂಗಾರದ ಕಿರೀಟ ಮತ್ತು ಖಡ್ಗಗಳನ್ನು ಕೊಟ್ಟು ಸನ್ಮಾನಿಸುತ್ತಾರೆ. ಏಕೆಂದರೆ ಅಧಿಕಾರದಲ್ಲಿದ್ದವರಿಗೆ ಹೀಗೆ ಮಾಡಿದರೆ ಅವರಿಂದ ಹೆಚ್ಚಿನದ್ದನ್ನು ಪಡೆಯುವ ಮನಸ್ಥಿತಿಯವರಾಗಿರುತ್ತಾರೆ ಎಂದರು.
ಭ್ರಮೆ ಬೇಡ: ಕ್ಷೇತ್ರದಲ್ಲಿ ಧೂಳು ರಹಿತ ಮಾಡಲು ಎಲ್ಲಾ ಗ್ರಾಮಗಳಿಗೂ ಉತ್ತಮ ಕಾಂಕ್ರಿಟ್ ರಸ್ತೆ ಮಾಡಿಸಿದ್ದೇನೆ. ಎಲ್ಲಾ ರೀತಿಯಿಂದ ಅಭಿವೃದ್ಧಿ ಪಡಿಸಿದ್ದೇನೆ ಎಂದು ಶಾಸಕ ವಿರೂಪಾಕ್ಷಪ್ಪ ಹೇಳುತ್ತಾರೆ. ಈ ಬಗ್ಗೆ ಭ್ರಮೆ ಬೇಡ. ಕೆಲಸ ಮಾಡಿರುವ ಬಗ್ಗೆ ಸಂತೋಷ ವ್ಯಕ್ತ ಪಡಿಸಿ. ಇದನ್ನು ನೋಡಿ ಜನ ಓಟು ನೀಡುವುದಿಲ್ಲ ಎಂದರು.
  ಮಾಜಿ ಶಾಸಕ ವಡ್ನಾಳ್ ರಾಜಣ್ಣ ಮಾತನಾಡಿ, ಬರುವ ಚುನಾವಣೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಗುರುಗಳ ಮಾತನ್ನು ಪಾಲಿಸುತ್ತೇನೆ. ಆದರೆ ಇತರ ಪಕ್ಷದವರು ಮತದಾರರಿಗೆ ಕದ್ದು- ಮುಚ್ಚಿ ಆಮಿಷ ತೋರುವ ನಾಟಕ ಮಾಡದೆ ಇರಬೇಕು
  , ಪ್ರೀತಿ-ವಿಶ್ವಾಸಗಳಿಂದ ಗುರುಗಳ ಆಜ್ಞೆಯನ್ನು ಚಾಚೂ ತಪ್ಪದೆ ಪಾಲಿಸುತ್ತೇನೆ ಎಂದು ವಡ್ನಾಳ್ ರಾಜಣ್ಣ ಹೇಳಿದರು.
 ಮಾಡಾಳ್ ವಿರೂಪಾಕ್ಷಪ್ಪ ಮಾತನಾಡಿ, ಇದೊಂದು ರಾಜ್ಯದಲ್ಲಿಯೇ ಮಾದರಿಯಾದ ಚುನಾವಣೆಯಾಗಬೇಕು. ಸೋಲು- ಗೆಲುವು ಮುಖ್ಯವಲ್ಲ. ಕ್ಷೇತ್ರದಲ್ಲಿ ನಾನು ಅಭಿವೃದ್ಧಿ ಪಡಿಸಿರುವ ಬಗ್ಗೆ ನಂಬಿಕೆ ಇದೆ. ಜನರ ಪ್ರೀತಿ- ವಿಶ್ವಾಸವಿದೆ ಎಂದು ಹೇಳುತ್ತಾ ಗುರುಗಳ ಮಾರ್ಗದರ್ಶನದಂತೆ ಚುನಾವಣೆ ಮಾಡುತ್ತೇನೆ ಎಂದರು.    ಗ್ರಾಪಂ ಮಾಜಿ ಅಧ್ಯಕ್ಷ ಟಿ.ವಿ. ರಾಜು ಮಾತನಾಡಿ, ಚುನಾವಣೆಗೆ ಸ್ಪರ್ಧಿಸುವ ಎಲ್ಲಾ ಅಭ್ಯರ್ಥಿಗಳು ಮಠಕ್ಕೆ ಬಂದು ಗುರುಗಳ ತೀರ್ಮಾನ ಒಪ್ಪಿಕೊಳ್ಳಬೇಕು ಎಂದರು.
 ಧಾರ್ಮಿಕ ಸಮಾರಂಭದಲ್ಲಿ ಭ್ರಷ್ಟಾಚಾರ ಮುಕ್ತ ಸ್ವಚ್ಛ ಆಡಳಿತದ ಬಗ್ಗೆ ಮತ್ತು ಚುನಾವಣೆಯನ್ನು ಹೇಗೆ ನಡೆಸಬಹುದು ಎಂಬ ಬಗ್ಗೆ ಶ್ರೀಗಳವರು ವೇದಿಕೆಯನ್ನು ರೂಪಿಸಿ ಕೊಟ್ಟಿದ್ದು ಒಂದು ವಿಶೇಷವಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com