ಕ.ಪ್ರ.ವಾರ್ತೆ,ದಾವಣಗೆರೆ,ಮಾ.9
ದಾವಣಗೆರೆ ಮಹಾ ನಗರ ಪಾಲಿಕೆಯ 2013 ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಕಾರ್ಯ ಮಾ.11ರಂದು ನಗರದ ಡಿಆರ್ಆರ್ ಸರ್ಕಾರಿ ಪಾಲಿಟೆಕ್ನಿಕ್ನಲ್ಲಿ ನಡೆಯಲಿದ್ದು, ಇದಕ್ಕಾಗಿ ಈಗಾಗಲೇ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಸುಭಾಷ್ ಶಿವಪ್ಪ ಪಟ್ಟಣಶೆಟ್ಟಿ ತಿಳಿಸಿದ್ದಾರೆ.
ನಗರದ ಡಿಆರ್ಆರ್ ಪಾಲಿಟೆಕ್ನಿಕ್ನಲ್ಲಿ ಶನಿವಾರ ಮತ ಎಣಿಕಾ ಕೇಂದ್ರಗಳ ಪರಿಶೀಲನೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆಯ 41 ವಾರ್ಡ್ಗಳ ಮತ ಎಣಿಕೆ ಕಾರ್ಯ ಪಾಲಿಟೆಕ್ನಿಕ್ನ 8 ಕೊಠಡಿಗಳಲ್ಲಿ ಅಂದು ಬೆಳಿಗ್ಗೆ 7ರಿಂದ ಆರಂಭಗೊಳ್ಳಲಿದೆ ಎಂದರು.
ಪ್ರತಿ ಚುನಾವಣಾಧಿಕಾರಿಗೆ 5 ವಾರ್ಡ್ಗಳಂತೆ 6 ಸುತ್ತಿನಲ್ಲಿ ಮತ ಎಣಿಕೆ ನಡೆಯಲಿದೆ.
ಬಣ್ಣದ ಗುರುತು ಚೀಟಿ: 8 ಕೊಠಡಿಗಳಲ್ಲಿ ಏಕ ಕಾಲಕ್ಕೆ 8 ವಾರ್ಡ್ಗಳ ಮತ ಎಣಿಕೆ ಆರಂಭಗೊಳ್ಳಲಿದೆ. ಪ್ರತಿ ಸುತ್ತಿಗೂ ಮತ ಎಣಿಕೆ ಏಜೆಂಟರ್ಗಳಿಗೆ ವಿವಿಧ ಬಣ್ಣಗಳ ಗುರುತಿನ ಚೀಟಿ ನೀಡಲಾಗಿದೆ. ವಾರ್ಡ್ ನಂ.1, 6, 11, 16, 21, 26, 31 ಹಾಗೂ 36ನೇ ವಾರ್ಡ್ಗಳ ಮತ ಎಣಿಕೆ ಅಂದು ಬೆಳಿಗ್ಗೆ 7 ಗಂಟೆಗೆ ಆರಂಭಗೊಳ್ಳಲಿದೆ ಎಂದು ಅವರು ಹೇಳಿದರು.
ಮೊದಲ ಹಂತದ ಮತ ಎಣಿಕೆಗೆ ಮತ ಎಣಿಕೆ ಏಜೆಂಟರಿಗೆ ಹಸಿರು ಬಣ್ಣದ ಗುರುತಿನ ಚೀಟಿ ಹಾಜರುಪಡಿಸಿದರಷ್ಟೇ ಕಾಲೇಜು ಆವರಣ ಪ್ರವೇಶಿಸಲು ಅವಕಾಶ ನೀಡಲಾಗುವುದು. ವಾರ್ಡ್ ಎಣಿಕೆ ಕಾರ್ಯ ಮುಕ್ತಾಯಗೊಂಡು ಏಜೆಂಟರು ಹೊರ ಬಂದ ನಂತರ 2ನೇ ಹಂತದ ವಾರ್ಡ್ಗಳಾದ 2, 7, 12, 17, 22, 27, 32, 37ನೇ ವಾರ್ಡ್ ಎಣಿಕೆ ಆರಂಭವಾಗಲಿದೆ. ವಾರ್ಡ್ ಎಣಿಕೆಗೆ ತಿಳಿ ಪಿಂಕ್ ಬಣ್ಣದ ಗುರುತಿನ ಚೀಟಿ ಹಾಜರುಪಡಿಸಿದ ಏಜೆಂಟರಿಗಷ್ಟೇ ಪಾಲಿಟೆಕ್ನಿಕ್ ಒಳಗೆ ಪ್ರವೇಶಾವಕಾಶ ನೀಡಲಾಗುವುದು ಎಂದರು.
ನಂತರ 3ನೇ ಸುತ್ತಿನಲ್ಲಿ ವಾರ್ಡ್ ಸಂಖ್ಯೆ 3, 8, 13, 18, 23, 28, 33, 38ನೇ ವಾರ್ಡ್ನ ಏಜೆಂಟರಿಗೆ ಕಡು ಹಳದಿ ಬಣ್ಣದ ಗುರುತಿನ ಚೀಟಿ, 4ನೇ ಸುತ್ತಿನಲ್ಲಿ ವಾರ್ಡ್ ಸಂಖ್ಯೆ 5, 10, 15, 20, 25, 30, 35, 40ನೇ ವಾರ್ಡ್ ಏಜೆಂಟರಿಗೆ ತಿಳಿ ಹಳದಿ ಬಣ್ಣದ ಗುರುತಿನ ಚೀಟಿ ನೀಡಲಾಗುವುದು.
5ನೇ ಹಂತದಲ್ಲಿ ಮತ್ತು ಕೊನೆಯದಾಗಿ ವಾರ್ಡ್ ಸಂಖ್ಯೆ 41ರ ಎಣಿಕೆ ಆರಂಭಗೊಳ್ಳಲಿದೆ. ಕಡು ಪಿಂಕ್ ಬಣ್ಣದ ಗುರುತಿನ ಚೀಟಿ ನೀಡಲಾಗಿದೆ.
ಆರನೇ ಹಂತದಲ್ಲಿ ಮತಗಳ ಎಣಿಕೆ ಕಾರ್ಯ ನಡೆಯಲಿದೆ.
ಮತ ಎಣಿಕೆ ಕೊಠಡಿ: 1ನೇ ಚುನಾವಣಾಧಿಕಾರಿ ಕೊಠಡಿಗೆಯಲ್ಲಿ ವಾರ್ಡ್ ಸಂಖ್ಯೆ 1ರಿಂದ 5ನೇ ವಾರ್ಡ್ ಮತ ಎಣಿಕೆಗೆ 10 ಟೇಬಲ್, 2ನೇ ಚುನಾವಣಾಧಿಕಾರಿ ಕೊಠಡಿಯಲ್ಲಿ 6ರಿಂದ 10ನೇ ವಾರ್ಡ್ನ ಎಣಿಕೆಗೆ 11 ಟೇಬಲ್, 3ನೇ ಚುನಾವಣಾಧಿಕಾರಿ ಕೊಠಡಿಯಲ್ಲಿ ವಾರ್ಡ್ ಸಂಖ್ಯೆ 11ರಿಂದ 15ರ ಮತ ಎಣಿಕೆಗೆ 9 ಟೇಬಲ್, 4ನೇ ಚುನಾ ವಣಾಧಿಕಾರಿ ಕೊಠಡಿಯಲ್ಲಿ ವಾರ್ಡ್ ಸಂಖ್ಯೆ 16ರಿಂದ 20ರ ವರೆಗಿನ ಎಣಿಕೆಗೆ 1- ಟೇಬಲ್ ಕಲ್ಪಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
5ನೇ ಚುನಾವಣಾಧಿಕಾರಿ ಕೊಠಡಿಯಲ್ಲಿ ವಾರ್ಡ್ ಸಂಖ್ಯೆ 21ರಿಂದ 25ರವರೆಗಿನ ಎಣಿಕೆಗೆ 11 ಟೇಬಲ್, 7ನೇ ಚುನಾವಣಾಧಿಕಾರಿ ಕೊಠಡಿಯಲ್ಲಿ ವಾರ್ಡ್ ಸಂಖ್ಯೆ 31ರಿಂದ 35ರ ಎಣಿಕೆಗೆ 8 ಟೇಬಲ್, 8ನೇ ಚುನಾವಣಾಧಿಕಾರಿ ಕೊಠಡಿಗೆ 13 ಟೇಬಲ್ಗಳಲ್ಲಿ ವಾರ್ಡ್ ಸಂಖ್ಯೆ 26ರಿಂದ 41ರವರೆಗಿನ ವಾರ್ಡ್ಗಳ ಮತ ಎಣಿಕೆ ಕಾರ್ಯ ನಡೆಯಲಿದೆ. ಬೆಳಗ್ಗೆ 7ರಿಂದ ಆರಂಭ: ಅಂದು ಬೆಳಿಗ್ಗೆ 7 ಗಂಟೆಯಿಂದ ಆರಂಭಗೊಳ್ಳುವ ಎಣಿಕೆ ಕಾರ್ಯವು ಅಂದು ಮಧ್ಯಾಹ್ನದ ಒಳಗಾಗಿ ಮುಗಿಯಲಿದೆ. ಪ್ರತಿ ಸುತ್ತಿನ ಎಣಿಕೆ ಕೇವಲ 45 ನಿಮಿಷದಿಂದ 1 ಗಂಟೆಯಲ್ಲಿ ಮುಗಿಯಲಿದೆ.
ಪ್ರತಿ ಸುತ್ತಿನ ವಿದ್ಯುನ್ಮಾನ ಮತ ಯಂತ್ರ(ಇ ವಿಎಂ)ಗಳ ಮತ ಎಣಿಕೆ ಆರಂಭಗೊಳ್ಳುವ ಮುನ್ನ ಅಂಚೆ ಮತ ಪತ್ರಗಳ ಎಣಿಕೆ ನಡೆಯಲಿದೆ. ವಿಜೇತ ಅಭ್ಯರ್ಥಿಗಳು ಹಾಗೂ ಪಕ್ಷದವರು, ಬೆಂಬಲಿಗರು ವಿಜಯದ ಮೆರವಣಿಗೆ, ಬೈಕ್ ರ್ಯಾಲಿ ಮತ್ತಿತರೆ ಆಚರಣೆ ನಡೆಸುವುದನ್ನು ನಿಷೇಧಿಸಿದೆ.
ಸಂಚಾರಕ್ಕೆ ಪರ್ಯಾಯ ರಸ್ತೆ: ಎಣಿಕಾ ಕೇಂದ್ರದ ಮುಂಭಾಗದ ಹದಡಿ ರಸ್ತೆಯಲ್ಲಿ ಯುಬಿಡಿಟಿ ಕಾಲೇಜು ಗೇಟಿನಿಂದ ಡಿಆರ್ಆರ್ ಪಾಲಿಟೆಕ್ನಿಕ್ ವಸತಿ ಗೃಹಗಳ ಗೇಟ್ವರೆಗೆ ವಾಹನ ಸಂಚಾರ ಸ್ಥಗಿತಗೊಳಿಸಲಿದ್ದು, ಸಂಚಾರಕ್ಕೆ ಪರ್ಯಾಯ ರಸ್ತೆಗಳಲ್ಲಿ ಅನುವು ಮಾಡಿಕೊಡಲಾಗುವುದು ಎಂದು ಅವರು ಹೇಳಿದರು.
ಎಸ್ಪಿ ಲಾಭೂ ರಾಮ್, ಪಾಲಿಕೆ ಆಯುಕ್ತ ಬಿ. ಭೀಮಪ್ಪ, ಉಪ ಆಯುಕ್ತ ರವೀಂದ್ರ ಮಲ್ಲಾಪುರ, ವೃತ್ತ ನಿರೀಕ್ಷಕ ಚಂದ್ರಹಾಸ ಲಕ್ಷ್ಮಣನಾಯ್ಕ, ಪಾಲಿಕೆ ಮುಖ್ಯ ಲೆಕ್ಕಾಧಿಕಾರಿ ಸೋಮನಾಥ, ಸಮಾಜ ಕಲ್ಯಾಣಾಧಿಕಾರಿ ಪಿ.ಕೆ. ಮಹಾಂತೇಶ, ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ಅಧಿಕಾರಿ ಆನಂದ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಿ.ಸಿ. ಸಿದ್ದಪ್ಪ, ಶಿವನಗೌಡ ಪಾಟೀಲ್ ಮತ್ತಿತರರು ಇದ್ದರು.