ಶಿವಮೊಗ್ಗ- ಹರಿಹರ ರೈಲ್ವೆ ಮಾರ್ಗ: ಪ್ರಾಥಮಿಕ ಹಂತದ ಪ್ರಕ್ರಿಯೆ ಪ್ರಾರಂಭ

Updated on

ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ  ಮಾ.26
ಶಿವಮೊಗ್ಗ- ಹರಿಹರ ನಡುವಿನ ನೂತನ ರೈಲ್ವೆ ಮಾರ್ಗ ನಿರ್ಮಾಣ ಕುರಿತಂತೆ ಪ್ರಾಥಮಿಕ ಹಂತದ ಪ್ರಕ್ರಿಯೆಗಳು ಆರಂಭಗೊಂಡಿವೆ. ಮಾರ್ಗ ನಿರ್ಮಾಣ ಕಾರ್ಯ ಆರಂಭಿಸಲು ರೈಲ್ವೆ ಇಲಾಖೆ ನಿರ್ಧರಿಸಿದ್ದು, ಮಾರ್ಗ ನಿರ್ಮಾಣಕ್ಕೆ ಅಗತ್ಯ ಭೂಮಿ ನೀಡುವಂತೆ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರವನ್ನು ಕೋರಿದೆ.
ಮಂಗಳವಾರ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ಈ ಸಭೆಯಲ್ಲಿ ರೈಲ್ವೆ ಇಲಾಖೆ ಮುಖ್ಯ ಎಂಜಿನಿಯರ್ ರವೀಂದ್ರನಾಥ್ ರೆಡ್ಡಿ ಸೇರಿದಂತೆ ರೈಲ್ವೆ ಇಲಾಖೆಯ ಅಧಿಕಾರಿಗಳು ಹಾಜರಿದ್ದು ಚರ್ಚೆ ನಡೆಸಿದರು.
ಉದ್ದೇಶಿತ ರೈಲ್ವೆ ಮಾರ್ಗ ಶಿವಮೊಗ್ಗ, ಹೊನ್ನಾಳಿ, ಮಲೆಬೆನ್ನೂರು ಮೂಲಕ ಹರಿಹರ ತಲುಪಲಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಹಾದು ಹೋಗುವ ಅಂದಾಜು 15 ಕಿಮೀ ವ್ಯಾಪ್ತಿಯ ಮಾರ್ಗ ನಿರ್ಮಾಣಕ್ಕೆ ಅಗತ್ಯ ಭೂಮಿ ನೀಡುವಂತೆ ರೈಲ್ವೆ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಕೋರಿದರು.
ಡಿಸಿ ಭರವಸೆ: ಭೂ ಸ್ವಾಧೀನಕ್ಕೆ ಅಗತ್ಯವಾದ ಅನುದಾನವನ್ನು ಸರ್ಕಾರ ಜಿಲ್ಲಾಡಳಿತಕ್ಕೆ ಬಿಡುಗಡೆ ಮಾಡುತ್ತಿದ್ದಂತೆ ಭೂ ಸ್ವಾಧೀನ ಪ್ರಕ್ರಿಯೆ ಆರಂಭಿಸುವ ಭರವಸೆಯನ್ನು ಜಿಲ್ಲಾಧಿಕಾರಿಯವರು ರೈಲ್ವೆ ಇಲಾಖೆಗೆ ನೀಡಿದ್ದಾರೆ. ಸದ್ಯ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಈ ಪ್ರಕ್ರಿಯೆ ತಡವಾಗಬಹುದು. ತುರ್ತು ಅನುದಾನ ಬಿಡುಗಡೆ ಮಾಡಿಸುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತದಿಂದ ಸಾಧ್ಯವಾಗುವ ಎಲ್ಲ ರೀತಿಯ ಕ್ರಮ ಹಾಗೂ ನೆರವು ನೀಡುವ ಭರವಸೆಯನ್ನು ಜಿಲ್ಲಾಧಿಕಾರಿಯವರು ರೈಲ್ವೆ ಅಧಿಕಾರಿಗಳಿಗೆ ನೀಡಿದ್ದಾರೆ.
ಯೋಜನೆ: ಉದ್ದೇಶಿತ ರೈಲ್ವೆ ಮಾರ್ಗ ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆಯಲ್ಲಿ ಹಾದು ಹೋಗಲಿದೆ. ಈ ಮಾರ್ಗ ಅಂದಾಜು 75 ಕಿ.ಮೀ.ನಷ್ಟಿದ್ದು 866 ಕೋಟಿ ಅಂದಾಜು ವೆಚ್ಚದ ಯೋಜನೆಯಾಗಿರುತ್ತದೆ. ಈಗಾಗಲೇ ಕೇಂದ್ರ ಸರ್ಕಾರ ಮಾರ್ಗ ನಿರ್ಮಾಣಕ್ಕೆ ಅನುಮತಿ ನೀಡಿ ಅನುದಾನ ಮೀಸಲಿರಿಸಿದೆ. ಮಾರ್ಗ ನಿರ್ಮಾಣ ಸಮೀಕ್ಷಾ ಕಾರ್ಯವೂ ಪೂರ್ಣಗೊಳಿಸಲಾಗಿದೆ.
ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದ್ದು ಶೇ.50ರಷ್ಟು ಹಣವನ್ನು ರಾಜ್ಯ ಸರ್ಕಾರ ಬಳಸುತ್ತಿದೆ.
ಮಾರ್ಗ ನಿರ್ಮಾಣಕ್ಕೆ ಅಗತ್ಯ ಭೂಮಿಯನ್ನು ಸರ್ಕಾರ ಉಚಿತವಾಗಿ ರೈಲ್ವೆ ಇಲಾಖೆ ನೀಡುವುದಾಗಿ ಈ ಹಿಂದೆಯೇ ಒಪ್ಪಂದದಲ್ಲಿ ತಿಳಿಸಿದೆ. ಸದ್ಯ ರೈಲ್ವೆ ಇಲಾಖೆ ಮಾರ್ಗ ನಿರ್ಮಾಣಕ್ಕೆ ಆಸಕ್ತಿ ತೋರಿದೆ. ಈ ಹಿನ್ನೆಲೆಯಲ್ಲಿ ಭೂಮಿ ನೀಡುವಂತೆ ಸರ್ಕಾರವನ್ನು ರೈಲ್ವೆ ಇಲಾಖೆ ಕೋರಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com