ಸಮರ ಸೇನೆ ಕಾರ್ಯಕರ್ತರ ಸೆರೆ, ಬಿಡುಗಡೆ

Updated on: 

ದಾವಣಗೆರೆ: ಎಂಇಎಸ್, ಶಿವಸೇನೆ ವಿರುದ್ಧ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟಿಸುತ್ತಿದ್ದ ದಾವಣಗೆರೆಯ ಕರ್ನಾಟಕ ಸಮರ ಸೇನೆ ಕಾರ್ಯಕರ್ತರನ್ನು ಪೊಲೀಸರಿಂದ ಬಂಧಿಸಿದರು. ಬಳಿಕ ಬಿಡುಗಡೆ ಮಾಡಿದರು.
ಆ.2ರಂದು ಬೆಳಗಾವಿಗೆ ತೆರಳಿದ ಕಾರ್ಯಕರ್ತರು, ಕನ್ನಡದ ಧ್ವಜ ಸುಟ್ಟು, ಕರ್ನಾಟಕ ವಿರೋಧಿ ಧೋರಣೆ ತಾಳಿರುವ ಎಂಇಎಸ್ ಹಾಗೂ ಶಿವಸೇನೆ ಸಂಘಟನೆಗಳ ಪುಂಡಾಟಿಕೆ, ದಬ್ಬಾಳಿಕೆ ಖಂಡಿಸಿದರು. ಎರಡೂ ಸಂಘಟನೆಗಳನ್ನು ನಿಷೇಧಿಸಲು ರಾಜ್ಯ ಸರ್ಕಾರವನ್ನು  ಒತ್ತಾಯಿಸಿದರು. ಈ ಸಂದರ್ಭ ಪೊಲೀಸರು ಇವರನ್ನು ಬಂಧಿಸಿದ್ದರು.
ಗಡಿಭಾಗದಲ್ಲಿ ಅಶಾಂತಿಯನ್ನುಂಟು ಮಾಡುತ್ತಿರುವ ಎಂಇಎಸ್ ಪುಂಡಾಟಿಕೆಗೆ ರಾಜ್ಯ ಸರ್ಕಾರ ಕಡಿವಾಣ ಹಾಕುವುದರ ಮೂಲಕ ಕನ್ನಡಿಗರಿಗೆ ರಕ್ಷಣೆ ಕೊಡಬೇಕು. ಈ ಎರಡೂ ಸಂಘಟನೆಗಳನ್ನು ನಿಷೇಧಿಸಿ ಅಲ್ಲಿನ ಕನ್ನಡಿಗರು ಮತ್ತು ಮರಾಠಿಗರ ನಡುವೆ ಭಾಷಾ ಸಾಮರಸ್ಯ ಮೂಡಿಸುವ ಕಾರ್ಯ ಕೈಗೊಳ್ಳಬೇಕೆಂದು ಕರ್ನಾಟಕ ಸಮರ ಸೇನೆ ರಾಜ್ಯ ಕಾರ್ಯಾಧ್ಯಕ್ಷ ಬಿ. ವಾಸುದೇವ್ ಒತ್ತಾಯಿಸಿದರು.
ಕಿತ್ತೂರು ಚನ್ನಮ್ಮನ ಗಂಡುಮೆಟ್ಟಿನ ನಾಡಿನಲ್ಲಿ ಎಂಇಎಸ್‌ನವರು ದೌರ್ಜನ್ಯ ಗೂಂಡಾ ವರ್ತನೆ ನಡೆಸುತ್ತಿರುವುದು ಹೇಯಕೃತ್ಯ. ಇದರಿಂದ ಸ್ವಾಭಿಮಾನಿ ಕನ್ನಡಿಗರನ್ನು ಕೆಣಕಿದಂತಾಗಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಕನ್ನಡ ನಾಡಿನ ಹೆಣ್ಣುಮಕ್ಕಳು ಮನೆಗೊಬ್ಬರಂತೆ ಬಂದು ಎಂಇಎಸ್ ಶಿವಸೇನೆ ಅಟ್ಟಹಾಸ ಮೆಟ್ಟಿನಿಂತು ಕನ್ನಡ ನಾಡಿನ ಹಿತ ಕಾಯುತ್ತೇವೆ ಎಂದು ಸೇನೆಯ ರಾಜ್ಯ ಮಹಿಳಾ ಕಾರ್ಯಾಧ್ಯಕ್ಷೆ ಎಲ್.ಬಿ. ಪಾಟೀಲ್
ಹೇಳಿದರು.
ಪ್ರತಿಭಟನೆಯಲ್ಲಿ ದಾವಣಗೆರೆ ಜಿಲ್ಲಾಧ್ಯಕ್ಷ ಯೋಗೇಶ್, ರಾಜ್ಯ ಮಹಿಳಾ ಉಪಾಧ್ಯಕ್ಷೆ ವೈ. ಭಾಗ್ಯದೇವಿ, ರಾಜ್ಯ ಉಪಾಧ್ಯಕ್ಷ ಜಿ.ಪಿ. ಪ್ರಕಾಶ್, ರಾಜ್ಯ ಕಾರ್ಯದರ್ಶಿ ಸೈಯದ್ ರಹಮತುಲ್ಲಾ ಜಿಲ್ಲಾ ಮಹಿಳಾ ಉಪಾಧ್ಯಕ್ಷೆ ಎಸ್.ಆರ್. ಚಂದ್ರಕಲಾ, ಹಾವೇರಿ ಜಿಲ್ಲಾಧ್ಯಕ್ಷ ಭೀಮೇಶ್ ಎಸ್.ಕೆ., ಪರಶುರಾಮ್, ಬಸವರಾಜ್ ಇನ್ನಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com