ಹರಪನಹಳ್ಳಿ: ತಾಲೂಕಿನ ಕಂಚಿಕೇರಿಯಲ್ಲಿ ಕೆರೆಯಿಂಕ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 80 ಟ್ರ್ಯಾಕ್ಟರ್ ಮರಳನ್ನು ಕಂದಾಯ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸೋಮವಾರ ಜಪ್ತು ಮಾಡಿದ್ದಾರೆ. ಗ್ರಾಮದ ಅಲ್ಲಲ್ಲಿ ಮರಳು ಸಂಗ್ರಹಿಸಲಾಗಿತ್ತು. ಅಧಿಕಾರಿಗಳು ಸ್ಥಳೀಯ ಪಶು ಇಲಾಖೆಯ ಕಚೇರಿ ಹಿಂಭಾಗ ಒಂದೇ ಕಡೆ ಮರಳು ದಾಸ್ತಾನು ಮಾಡಿದ್ದಾರೆ. ಮರಳನ್ನು ವಶಪಡಿಸಿಕೊಳ್ಳುವ ಸಂದರ್ಭದಲ್ಲಿ ಮರಳಿನ ಮಾಲೀಕರು ಮನೆ ಕಟ್ಟಲು ತಂದಿದ್ದೇವೆ ಎಂದು ಸಮಜಾಯಿಸಿ ನೀಡಲು ಮುಂದಾಗಿದ್ದಾರೆ. ಆದರೆ ಅಧಿಕಾರಿಗಳು ಏನೇ ಆಗಲಿ ಅಕ್ರಮವಾಗಿ ಸಂಗ್ರಹಿಸುವ ಹಾಗಿಲ್ಲ ಎಂದು ಕಾನೂನು ತಿಳಿವಳಿಕೆ ಜೊತೆಗೆ ಎಚ್ಚರಿಕೆ ನೀಡಿದ್ದಾರೆ. ಈಗ ಒಂದೇ ಕಡೆ ಸಂಗ್ರಹ ಮಾಡಲಾದ ಮರಳಿಗೆ ಪೊಲೀಸ್ ಕಾವಲು ಹಾಕಲಾಗಿದ್ದು, ಶೀಘ್ರದಲ್ಲಿಯೇ ಸರ್ಕಾರದ ನಿಯಮದಂತೆ ಹರಾಜು ಹಾಕಲಾಗುವುದು ಎಂದು ತಹಸೀಲ್ದಾರ ತಿಳಿಸಿದ್ದಾರೆ. ಲೋಕೋಪಯೋಗಿ ಇಲಾಖೆ ಎಇಇ ಮಲ್ಲಿಕಾರ್ಜುನ ಹಾಗೂ ಇತರರು ದಾಳಿ ತಂಡದಲ್ಲಿ ಇದ್ದರು. ತಹಸೀಲ್ದಾರ್ ಎಂ.ಆರ್. ನಾಗರಾಜ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.
Advertisement