ಹರಿಹರ: ಆಧುನಿಕ ಜಗತ್ತಿನಲ್ಲಿ ವಿದ್ಯಾರ್ಥಿಗಳಿಗೆ ಸಾಕಷ್ಟು ಆಕರ್ಷಣೆಗಳು ಕಾಡುತ್ತಿದ್ದರೂ ಅವೆಲ್ಲವನ್ನೂ ಮೀರಿ ಪಠ್ಯದ ಜೊತೆಗೆ ಕ್ರೀಡಾ, ಕಲೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ, ಆಕರ್ಷಣೆ ಮೂಡಿಸಬೇಕಾದ ಅಗತ್ಯವಿದೆ ಎಂದು ಹಿರಿಯ ಜಾನಪದ ತಜ್ಞ ಡಾ. ಎಂ.ಜಿ. ಈಶ್ವರಪ್ಪ ಹೇಳಿದರು.
ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಸೋಮವಾರ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಹಾಗೂ ರಾಘವೇಂದ್ರ ಸ್ವಾಮಿ ವೃಂದಾವನ ಟ್ರಸ್ಟ್ ಪ್ರೌಢಶಾಲಾ ಕನ್ನಡ ಶಿಕ್ಷಕರಿಗಾಗಿ ಏರ್ಪಡಿಸಿದ್ದ ಗಮಕ, ವಚನ ಹಾಗೂ ಹರಿದಾಸ ಕೀರ್ತನೆ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಇಂದು ಕೇವಲ ಅಂಕ ಗಳಿಕೆಗಷ್ಟೇ ಸೀಮಿತರಾಗುತ್ತಿದ್ದಾರೆ. ಅಂಕ ಗಳಿಕೆಗಿಂತಲೂ ಗುಣಾತ್ಮಕ ಶಿಕ್ಷಣ ಮೌಲ್ಯಯುತವಾದುದು ಎಂಬುದನ್ನು ಸಾಧಿಸಿ ತೋರಿಸುವ ಸವಾಲು ಶಿಕ್ಷಕರ ಮೇಲಿದೆ ಎಂದರು.
ದೃಶ್ಯ ಮಾಧ್ಯಮಗಳು ಭೀಭತ್ಸ ಹಾಗೂ ಭಯಂಕರ ದೃಶ್ಯಗಳನ್ನು ಪ್ರಸಾರ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ವಿಜ್ಞಾನದ ಸಂಶೋಧನೆಗಳು ಮತ್ತು ವಿವಿಧ ಕ್ಷೇತ್ರಗಳ ಸಾಧನೆ, ಮೌಲ್ಯ ಬಿತ್ತುವಂತಹ ಕಾರ್ಯಕ್ರಮಗಳಿಗೆ ಮಾಧ್ಯಮಗಳು ಒತ್ತು ನೀಡಬೇಕಿದೆ. ಆದರೆ, ಅಂತಹ ಕೆಲಸ ಮಾತ್ರ ಆಗುತ್ತಿಲ್ಲ. ಬದಲಾಗಿ ಸಾಮಾಜಿಕ ಅಪರಾಧ ಹೆಚ್ಚಳವಾಗುವಂತಹ ಕಾರ್ಯಕ್ರಮ ಬಿತ್ತರಿಸುತ್ತಿರುವುದು ಆತಂಕದ ಸಂಗತಿಯಾಗಿದೆ ಎಂದು ಹೇಳಿದರು.
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ಗಂಗಮ್ಮ ಕೇಶವಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಗಮಕ ಕಲಾ ಪರಿಷತ್ ಅಧ್ಯಕ್ಷ ಎಂ.ಆರ್. ಸತ್ಯನಾರಾಯಣ, ರಾಘವೇಂದ್ರ ಮಠದ ಪ್ರಧಾನ ಅರ್ಚಕ ವರಹಾಚಾರ್, ಅಕಾಡೆಮಿ ರಿಜಿಸ್ಟ್ರಾರ್ ಟಿ.ಜೆ. ನರಸಿಂಹಮೂರ್ತಿ, ನಿವೃತ್ತ ಪ್ರಾಚಾರ್ಯ ಡಾ. ಅನಂತ ಪದ್ಮನಾಭರಾವ್, ಸಂಗೀತ ಕಲಾವಿದ ದ್ವಾರಕೀಶ, ಎಸ್.ಎಚ್. ಹೂಗಾರ್, ರಮಾ ಜಕಾತಿ ಇತರರು ಇದ್ದರು.
ಬಿಇಒ ಮಲ್ಲಿಕಾರ್ಜುನ ಕನ್ನಡ ಭಾಷಾ ಪಠ್ಯದ ಕಾವ್ಯಗಳನ್ನು ಕೀರ್ತನೆ ವಾಚಿಸಿ, ಅದಕ್ಕೆ ಸೂಕ್ತ ವ್ಯಾಖ್ಯಾನ ಹೊಂದಿರುವ ಸಿಡಿಯನ್ನು ಬಿಡುಗಡೆ ಮಾಡಿದರು. ನವ್ಯಾ ಭಟ್ ಸಂಗಡಿಗರು ಪ್ರಾರ್ಥಿಸಿದರು.
Advertisement