ಹರಪನಹಳ್ಳಿ: ವಿವಿಧ ಸೌಲಭ್ಯಕ್ಕಾಗಿ ರಾಜ್ಯ ಕಟ್ಟಡ ಕಟ್ಟುವ, ಕಲ್ಲು ಒಡೆಯುವ ಮತ್ತು ಕ್ವಾರಿ ಕಾರ್ಮಿಕರ ಸಮಿತಿ ಆ.6 ರಂದು ಬೆಂಗಳೂರಿನ ಕಾರ್ಮಿಕ ಭವನದ ಎದುರು ಆಯೋಜಿಸಿರುವ ಬೆಂಗಳೂರು ಚಲೋ ಪ್ರತಿಭಟನೆಗೆ ಒತ್ತಾಯಿಸಿ ಇಲ್ಲಿನ 500ಕ್ಕೂ ಹೆಚ್ಚು ಕಾರ್ಮಿಕರು ಪಾಲ್ಗೊಳ್ಳುತ್ತಿದ್ದಾರೆ. ಕಾರ್ಮಿಕರಿಗೆ ಸೌಲಭ್ಯಗಳ ವಿಳಂಬ ಹಾಗೂ 5 ಸಾವಿರ ಪಿಂಚಣಿ ಸೇರಿ ವಿವಿಧ ಬೇಡಿಕೆಗಳ ಮುಂದಿಟ್ಟುಕೊಂಡು ಕಾರ್ಮಿಕರು ಹೋರಾಟಕ್ಕೆ ಇಳಿದಿದ್ದಾರೆ. ತಾಲೂಕಿನ ಕಾರ್ಮಿಕರು ಆ.5ರಂದು ಸಂಜೆ 6ಕ್ಕೆ ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ಸೇರಬೇಕು ಎಂದು ಸಂಘಟನೆ ಪ್ರಧಾನ ಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9880110921 ಸಂಪರ್ಕಿಸಲು ಕೋರಿದ್ದಾರೆ.
ಬಸವಣ್ಣನ ಆದರ್ಶ ಇಂದಿನ ಸಮಾಜಕ್ಕೆ ಅಗತ್ಯ: ಶಂಕರಪ್ಪ
ಚನ್ನಗಿರಿ: 12ನೇ ಶತಮಾನದ ಶರಣರ ವಚನ ಸಾಹಿತ್ಯ ಮತ್ತು ಜಗಜ್ಯೋತಿ ಬಸವೇಶ್ವರ ಆದರ್ಶ ತತ್ವಗಳು ಪ್ರಸ್ತುತ ದಿನಮಾನಕ್ಕೆ ಬೇಕಾಗಿದೆ ಎಂದು ಸರ್ಕಾರಿ ಬಾಲಿಕಾ ಪ್ರೌಢಶಾಲೆ ಮುಖ್ಯ ಶಿಕ್ಷಕ ಎಸ್.ಶಂಕರಪ್ಪ ಹೇಳಿದರು. ತಾಲೂಕು ಶರಣ ಸಾಹಿತ್ಯ ಪರಿಷತ್, ಪಾಂಡೋಮಟ್ಟಿ ವಿರಕ್ತಮಠದ ಆಶ್ರಯದಲ್ಲಿ ಜಿ.ಎಸ್. ಮಹೇಶ್ವರಪ್ಪ, ಡಾ. ಅಶೋಕ್ ಅವರ ಮನೆಯಲ್ಲಿ ಶ್ರಾವಣ ಸಂಜೆ ಮನೆ ಅಂಗಳದಲ್ಲಿ ಮಹಾಮನೆ ಎಂಬ ಶರಣರ ಚಿಂತನೆ ಸಮಾರಂಭದಲ್ಲಿ ಮಾತನಾಡಿದರು. ಉದ್ಘಾಟನೆಯನ್ನು ಪಾಂಡೋಮಟ್ಟಿ ವಿರಕ್ತ ಮಠದ ಶ್ರೀಗುರುಬಸವ ಸ್ವಾಮೀಜಿ ವಹಿಸಿ, ಕಾಯಕ ಮತ್ತು ದಾಸೋಹಗಳ ಮಹತ್ವದ ಬಗ್ಗೆ ವಿವರವಾಗಿ ತಿಳಿಸಿದರು. ಅಧ್ಯಕ್ಷತೆಯನ್ನು ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಸ್. ಮಲ್ಲಿಕಾರ್ಜುನಪ್ಪ ವಹಿಸಿಮಾತನಾಡಿದರು. ಮುಖ್ಯಅಥಿಗಳಾಗಿ ಗರಗದ ಶಿವಲಿಂಗಪ್ಪ, ಮಲ್ಲಿಕಾರ್ಜುನಪ್ಪ, ಕುಮಾರ್, ಡಾ. ಅಶೋಕ್ ಉಪಸ್ಥಿತರಿದ್ದರು.
ಮಳೆ; 7 ಮನೆಗೆ ಹಾನಿ
ದಾವಣಗೆರೆ: ಜಿಲ್ಲೆಯಲ್ಲಿ ಭಾನುವಾರ 4.1 ಮಿ.ಮೀ. ಮಳೆಯಾಗಿದ್ದು, 7 ಮನೆಗಳು ಭಾಗಶಃ ಹಾನಿಗೀಡಾಗಿವೆ ಎಂದು ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರು ತಿಳಿಸಿದ್ದಾರೆ. ಚನ್ನಗಿರಿ ತಾಲೂಕಿನಲ್ಲಿ 5 ಮನೆ, ಹೊನ್ನಾಳಿಯಲ್ಲಿ 2 ಮನೆಗಳು ಸೇರಿದಂತೆ ಒಟ್ಟು 7 ಮನೆಗಳಿಗೆ ಹಾನಿಯಾಗಿದ್ದು, ಸಂತ್ರಸ್ತರಿಗೆ ಪ್ರಕೃತಿ ವಿಕೋಪ ಮಾರ್ಗಸೂಚಿ ಅನ್ವಯ ಸೂಕ್ತ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. ದಾವಣಗೆರೆ, ಹರಿಹರ ತಾಲೂಕಿನಲ್ಲಿ 4.0 ಮಿ.ಮೀ. ಮಳೆಯಾಗಿದ್ದರೆ, ಹೊನ್ನಾಳಿ 6.0 ಮಿ.ಮೀ., ಚನ್ನಗಿರಿಯಲ್ಲಿ 5.0 ಮಿ.ಮೀ, ಹರಪನಹಳ್ಳಿ 2.0 ಮಿ.ಮೀ., ಜಗಳೂರು 4.0 ಮಿ.ಮೀ. ಮಳೆಯಾಗಿದೆ. ತುಂಗಭದ್ರಾ ನದಿಯಲ್ಲಿ ಭಾನುವಾರ ನೀರಿನ ಹರಿವಿನ ಪ್ರಮಾಣ 6.75 ಮೀಟರ್ ವರದಿಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.