ದಾವಣಗೆರೆ: ಯಪ್ಪಾ... ಯವ್ವಾ... ಎಂಬುದಾಗಿ ಇಲ್ಲಿನ ಯಲ್ಲಮ್ಮ ನಗರದ ಬಳಿ ಕೊಳವೆ ಬಾವಿಗೆ ಬಿದ್ದಿದ್ದ ಬಾಲಕ ಕರಿಯ ಕೊಳವೆಬಾವಿಗೆಹಾರವಾಗಿ 14 ವರ್ಷ ಕಳೆದಿದ್ದು, ಅದಾದ ನಂತರ ರಾಜ್ಯದಲ್ಲಿ ಅನೇಕ ಮಕ್ಕಳು ಬಲಿಯಾಗಿದ್ದರೂ, ಕಣ್ಣುಮುಚ್ಚಿ ಕುಳಿತ ಸ್ಥಳೀಯ ಆಡಳಿತದ ಬೇಜವಾಬ್ದಾರಿತನದಿಂದ ನಗರದಲ್ಲಿ ಇಂದಿಗೂ ಅನೇಕ ಕೊಳವೆ ಬಾವಿಗಳು ಬಲಿಗಾಗಿ ಬಾಯಿ ತೆರೆದು ಕುಳಿತಿವೆ.
ಯಲ್ಲಮ್ಮ ನಗರದಲ್ಲಿ 2000ನೇ ಇಸ್ವಿಯಲ್ಲಿ ಬಾಯಿ ತೆರೆದಿದ್ದ ಕೊಳವೆ ಬಾವಿ ಬಳಿ ಆಟವಾಡುತ್ತಿದ್ದ ಕೂಲಿ ಕಾರ್ಮಿಕ ದಂಪತಿ ಮಗ ಕರಿಯ ಆಕಸ್ಮಾತ್ ಕೊಳವೆಬಾವಿಗೆ ಬಿದ್ದು ಪ್ರಾಣ ತ್ಯಜಿಸಿದ್ದ. ಅದಾದ ನಂತರ
ಅಂತಹ ಹಲವಾರು ಪ್ರಕರಣಗಳು ರಾಜ್ಯ, ರಾಷ್ಟ್ರದ ವಿವಿಧೆಡೆ ನಡೆದಿವೆ.
ಕೊಳವೆ ಬಾವಿಗಳು ವಿಫಲವಾದ ನಂತರ ಅವುಗಳನ್ನು ಮುಚ್ಚುವ ಕೆಲಸವನ್ನು ಯಾರೂ ಮಾಡುತ್ತಿಲ್ಲ. ಖಾಸಗಿಯಾಗಿರಲಿ, ಸರ್ಕಾರಿ ಅಥವಾ ಸ್ಥಳೀಯ ಸಂಸ್ಥೆಯೇ ಆಗಲಿ. ಕೊಳವೆ ಬಾವಿ ಕೊರೆಸುವಾಗ ಇರುವ ಆಸಕ್ತಿ, ಕಾಳಜಿ ಅದು ವಿಫಲವಾದ ನಂತರ ಮುಚ್ಚುವ ಬಗ್ಗೆ ಇರುವುದಿಲ್ಲ. ಪರಿಣಾಮ ಅಮಾಯಕ ಮಕ್ಕಳು ಪ್ರಾಣ ಕಳೆದುಕೊಳ್ಳುತ್ತಾರೆ.
ಕೊಳವೆ ಬಾವಿಯೊಳಗೆ ಸಿಲುಕಿದ್ದ ಕರಿಯ ನೋವು, ಭಯ, ಯಮಯಾತನೆಯಿಂದ ಯಪ್ಪಾ.... ಯವ್ವಾ.... ಎಂಬುದಾಗಿ ಕೂಗುತ್ತಲೇ ಪ್ರಾಣತ್ಯಾಗ ಮಾಡಿದ್ದ ನಿದರ್ಶನ ಇಲ್ಲಿದೆ. ಹಾಗಿದ್ದರೂ ಮಹಾನಗರ ಪಾಲಿಕೆ ಆಡಳಿತ ಯಂತ್ರ ಮಾತ್ರ ಕುಂಭಕರ್ಣ ನಿದ್ರೆಯಿಂದ ಎಚ್ಚೆತ್ತಂತೆ ಕಾಣುತ್ತಿಲ್ಲ. ಪರಿಣಾಮ ಇಂದಿಗೂ ಇಲ್ಲಿ ಹತ್ತಾರು ಕೊಳವೆ ಬಾವಿಗಳು ಅಮಾಯಕ ಜೀವಗಳನ್ನು ಬಲಿ ಪಡೆಯಲು ಬಾಯಿ ತೆರೆದು ಕುಳಿತಿವೆ.
ಬಾಗಲಕೋಟೆ ಜಿಲ್ಲೆ ಸೂಳಿಕೇರಿ ಗ್ರಾಮದಲ್ಲಿ ತಿಮ್ಮಣ್ಣ ಕೊಳವೆ ಬಾವಿಗೆ ಬಿದ್ದ ಹಿನ್ನೆಲೆಯಲ್ಲಿ ಸರ್ಕಾರ ಮತ್ತೊಮ್ಮೆ ತೆರೆದ ಕೊಳವೆ ಬಾವಿ ಮುಚ್ಚಲು ಕಟ್ಟುನಿಟ್ಟಿನ ಆದೇಶ ಮಾಡಿದೆ. ಆದರೆ, ಸರ್ಕಾರದ ಆದೇಶ ಮಾತ್ರ ದಾವಣಗೆರೆ ಜಿಲ್ಲಾ ಆಡಳಿತ ಹಾಗೂ ನಗರ ಪಾಲಿಕೆಗೆ ತಲುಪಿದಂತೆ ಕಾಣುತ್ತಿಲ್ಲ.
ಇಲ್ಲಿನ ಭಗತ್‌ಸಿಂಗ್ ನಗರದ ಮುಖ್ಯರಸ್ತೆಯಲ್ಲೇ ಶಾಲೆ ಗೋಡೆಗೆ ಹೊಂದಿಕೊಂಡಿರುವ ತೆರೆದ ಕೊಳವೆ
ಬಾವಿ ಬಲಿಗಾಗಿ ಕಾದಿದೆ. ಮೂರು ತಿಂಗಳ ಹಿಂದಷ್ಟೇ ಕೊಳವೆ ಬಾವಿಗೆ ಹಾಕಿದ್ದ ಪಂಪ್‌ಸೆಟ್ ಅನ್ನು ಬೇರೆಡೆಗೆ ಒಯ್ದಿದ್ದು, ಕೊಳವೆ ಬಾವಿ ಮಾತ್ರ ಮುಚ್ಚಿಲ್ಲ. ಅಂಜುಮನ್ ವಿದ್ಯಾಸಂಸ್ಥೆಯಲ್ಲಿ ನರ್ಸರಿಯಿಂದ ಹೈಸ್ಕೂಲಿನವರೆಗೆ ಸಾವಿರಾರು ಮಕ್ಕಳು ಓದುತ್ತಾರೆ. ನಿತ್ಯ ಸಾವಿರಾರು ಮಕ್ಕಳು ಅದೇ ಕೊಳವೆಬಾವಿ ಬಳಿಯೇ ಆಟವಾಡುತ್ತಾರೆ. ಯಾವುದೇ ಸಮಯದಲ್ಲಿ ಅಪಾಯ ಸಂಭವಿಸಬಹುದಾಗಿದೆ.
ಎಂಸಿಸಿ 'ಬಿ' ಬ್ಲಾಕ್‌ನ ಹಳೆ ಆರ್.ಟಿ.ಒ. ಕಚೇರಿ ಬಳಿ ಆಂಜನೇಯ ಬಡಾವಣೆಯ ರಸ್ತೆ, ಎಸ್ಪಿಎಸ್‌ನಗರದ ಎರಡು ಕಡೆ, ಎಸ್‌ಎಸ್ ಬಡಾವಣೆಯ ಒಳಾಂಗಣ ಕ್ರೀಡಾಂಗಣದ ಬಳಿ ಹೀಗೆ ಅನೇಕ ಕಡೆ ತೆರೆದ ಕೊಳವೆ ಬಾವಿಗಳು ಇದ್ದು, ಅವು ಮಕ್ಕಳನ್ನು ಬಲಿ ಪಡೆಯುವ ಮುನ್ನ ಜನಪ್ರತಿನಿಧಿಗಳು, ಅಧಿಕಾರಿಗಳು ಎಚ್ಚೆತ್ತುಅವುಗಳನ್ನು ಮುಚ್ಚಿಸಲು ಪ್ರಥಮಾದ್ಯತೆ ಮೇಲೆ ಕ್ರಮ ಕೈಗೊಳ್ಳಬೇಕು ಎಂಬುದಾಗಿ ಸಾರ್ವಜನಿಕರು ಒತ್ತಾಯಿಸುತ್ತಾರೆ.
Advertisement