ಹರಿಹರ: ಜನಪ್ರತಿನಿಧಿಗಳು ಜನಪ್ರಿಯ ಯೋಜನೆಗಳ ಬಗ್ಗೆಯಷ್ಟೇ ಗಮನ ನೀಡದೇ ಜನಪರ ಕೆಲಸಗಳೆಡೆಗೆ ಆಸಕ್ತಿ ತೋರಿದಾಗ ಮಾತ್ರ ಅವರು ಜನಪ್ರಿಯ ರಾಜಕಾರಣಿಗಳಾಗಲು ಸಾಧ್ಯ ಎಂದು ಸಾಣೇಹಳ್ಳಿ ಶಾಖಾ ಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ನಗರದ ಭಾಗೀರಥಿ ಕನ್ವೆಷನ್‌ಹಾಲ್‌ನಲ್ಲಿ ಎಚ್. ಶಿವಪ್ಪ ಅಭಿಮಾನಿ ಬಳಗದಿಂದ ಮಂಗಳವಾರ ನಡೆದ ಎಚ್. ಶಿವಪ್ಪನವರ ಪ್ರಥಮ ಪುಣ್ಯಸ್ಮರಣೆ, ನೆನಪು-ನಮನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು ಅಂತಹ ರಾಜಕಾರಣಿಗಳು ಮಾತ್ರ ಜನಮಾನಸದಲ್ಲಿ ಉಳಿಯುತ್ತಾರೆ ಎಂದು ಅಭಿಪ್ರಾಯ ಪಟ್ಟರು.
ಬಹುತೇಕ ಸರ್ಕಾರಗಳು ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸುತ್ತಾ ಬಂದಿವೆ. ಅಂತಹ ಸರ್ಕಾರಗಳಲ್ಲಿ ಇದ್ದೂ ಜನಪರ ಕಾಳಜಿಯಿಂದ ಕೆಲಸ ಮಾಡಿದ ಕೆಲವೇ ಸಭ್ಯ ರಾಜಕಾರಣಿಗಳಲ್ಲಿ ಎಂ.ಪಿ.ಪ್ರಕಾಶ ಹಾಗೂ ಶಿವಪ್ಪನವರು ಒಬ್ಬರು ಎಂದು ತಿಳಿಸಿದರು.
ರಾಜಕಾರಣದಲ್ಲಿ ಮೋಸ, ವಂಚನೆ, ಸುಳ್ಳು ಮಿತಿ ಮೀರಿದೆ. ಹಣ ಇಲ್ಲದಿದ್ದಲ್ಲಿ ಯಾವುದೇ ಚುನಾವಣೆಗಳಲ್ಲಿ ಭಾಗವಹಿಸದಂಥಹ ಪರಿಸ್ಥಿತಿ ಬಂದೊದಗಿದೆ. ಇಂಥಹ ಪರಿಸ್ಥಿತಿಯಲ್ಲಿಯೂ ಶಿವಶಂಕರ್ ಶಾಸಕರಾಗಿ ಆಯ್ಕೆಯಾಗಿದ್ದಾರೆ. ತಂದೆಯಂತೆಯೆ ಅವರೂ ಉತ್ತಮ ಜನಪರ ಕಾರ್ಯಗಳನ್ನು ಮಾಡುವ ಭರವಸೆ ಇದೆ ಎಂದರು.
ಸರ್ಕಾರ ಅನ್ನಭಾಗ್ಯ ಯೋಜನೆ, ಹೆಚ್ಚುವರಿ ಮದ್ಯದಂಗಡಿಗಳಿಗೆ ಪರವಾನಗಿ ನೀಡುತ್ತಿರುವುದು ಒಳ್ಳೆಯದಲ್ಲ. ಜನರಿಗೆ ದುಡಿಯಲು ಹೊಸ ಉದ್ಯೋಗಾವಕಾಶ ಸೃಷ್ಟಿಸುವ ಚಿಂತನೆ ನಡೆಸಬೇಕು. ಇದರಿಂದ ಪ್ರತಿಯೊಬ್ಬರಿಗೂ ದುಡಿಯುವ ಅವಕಾಶ ಸಿಗುತ್ತದೆ. ಕಡಿಮೆ ಬೆಲೆಯಲ್ಲಿ ದಿನ ನಿತ್ಯದ ವಸ್ತುಗಳನ್ನು ವಿತರಿಸುವ ಅಗ್ಗದ ಯೋಜನೆಗಳನ್ನು ಸರ್ಕಾರ ಕೈಬಿಡಬೇಕು ಎಂದು ತಿಳಿಸಿದರು.
ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಸಿದ್ದಲಿಂಗ ಸ್ವಾಮೀಜಿ, ಅಣಜಿ ಮಠದ ಮುರುಘರಾಜೇಂದ್ರ ಸ್ವಾಮೀಜಿ, ಕಪಿಲಾ ಸಂಗಮದ ಪಂಚಾಕ್ಷರಯ್ಯ ಸ್ವಾಮೀಜಿ, ಗುತ್ತೂರು ಸಿದ್ಧಾಶ್ರಮದ ಪ್ರಭುಲಿಂಗ ಸ್ವಾಮೀಜಿ, ಆವರಗೊಳ್ಳದ ಪುರವರ್ಗ ಹಿರೇಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಆರೋಗ್ಯಮಾತೆ ಚರ್ಚ್‌ನ ರೆ.ಫಾ. ಸ್ಟ್ಯಾನಿ ಡಿ ಸೋಜಾ ಹಾಗೂ ಇತರ ಶ್ರೀಗಳು ಸಾನಿಧ್ಯ ವಹಿಸಿದ್ದರು.
ಶಾಸಕ ಎಚ್.ಎಸ್. ಶಿವಶಂಕರ್, ವನಮಾಲಮ್ಮ, ಎಚ್.ಎಸ್. ಅರವಿಂದ್. ಎಚ್.ಎಸ್. ನಾಗರಾಜ್, ಚೇತನಾ ಶ್ರೀಕಂಠಸ್ವಾಮಿ, ಎಚ್. ಹನುಮಗೌಡ, ಎನ್.ಜಿ. ನಾಗನಗೌಡ, ನಂದಿಗೌಡ, ಡಿ.ಎಂ. ಹಾಲಸ್ವಾಮಿ, ಕಸಾಪ ಜಿಲ್ಲಾ ಘಟಕ ಅಧ್ಯಕ್ಷ ಎ.ಆರ್. ಉಜ್ಜನಪ್ಪ, ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
Advertisement