ಹರಪನಹಳ್ಳಿ: ಮಣ್ಣು ಪರೀಕ್ಷೆಯ ಅಧಾರದ ಮೇಲೆ ರಾಸಾಯನಿಕ ಗೊಬ್ಬರ ಬಳಸಬೇಕು ಎಂದು ಕಾಡಜ್ಜಿ ಕೃಷಿ ಸಂಶೋಧನ ಕೇಂದ್ರದ ವಿಜ್ಞಾನಿ ಡಾ.ಪರಶುರಾಮ್ ಚಂದ್ರವಂಶಿ ತಿಳಿಸಿದ್ದಾರೆ.
ತಾಲೂಕಿನ ಚಿಗಟೇರಿ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಕೃಷಿ ಇಲಾಖೆ ಹಾಗೂ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಹಸಿರು ಕ್ರಾಂತಿಯ ಸಮಯದಲ್ಲಿ ರಾಸಾಯನಿಕ ಗೊಬ್ಬರ ಬಳಕೆ ಮಾಡಿ ಹೆಚ್ಚು ಇಳುವರಿ ತರುವ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಲಾಯಿತು. ಆದರೆ, ಮಣ್ಣು ಪರೀಕ್ಷೆ ಮಾಡಿಸಿ ಅಗತ್ಯವಿರುವ ಪೌಷ್ಟಿಕಾಂಶಗಳಿರುವ ರಸ ಗೊಬ್ಬರ ಮಾತ್ರ ಬಳಸುವುದನ್ನು ರೈತರಿಗೆ ಮನದಟ್ಟು ಮಾಡದೆ ಹೋಗಿದ್ದು ಭೂಮಿ ಬರಡಾಗಲು ಕಾರಣವಾಯಿತು ಎಂದರು.
ಅತಿಯಾಗಿ, ಅನಗತ್ಯವಾಗಿ ರಸಗೊಬ್ಬರ ಬಳಕೆ ನಿಲ್ಲಿಸಿ ಸಾವಯವ ಮತ್ತು ಜೈವಿಕ ಗೊಬ್ಬರ ಬಳಸುವ ಮೂಲಕ ಮಣ್ಣನ್ನು ಅರೋಗ್ಯಪೂರ್ಣವಾಗಿಸಿ ಎಂದು ಸಲಹೆ ನೀಡಿದರು.
ಏರುಪೇರು: ಮನುಷ್ಯ ಮತ್ತು ಮಣ್ಣಿಗೆ ಬಹಳಷ್ಟು ಸಾಮ್ಯತೆ ಇದೆ. ಮನುಷ್ಯನ ದೇಹದಲ್ಲಿ 16 ಪೋಷಕಾಂಶಗಳು ಇರುವ ಹಾಗೆ ಮಣ್ಣಿನಲ್ಲಿ ಸಹ ಇಷ್ಟೇ ಪ್ರಮಾಣದ ಪೋಷಕಾಂಶಗಳು ಇರುತ್ತವೆ. ಹೆಚ್ಚು ಹೆಚ್ಚು ರಾಸಾಯನಿಕ ಗೊಬ್ಬರ ಹಾಕುವುದರಿಂದ ಹೆಚ್ಚು ಇಳುವಳಿ ಬರುವುದು ಎಂಬ ರೈತರ ತಪ್ಪು ತಿಳಿವಳಿಕೆಯಿಂದ ಭೂಮಿಯಲ್ಲಿ ರಸಸಾರಗಳಲ್ಲಿ ಏರುಪೇರುಗಿದೆ ಎಂದರು.
ಕೃಷಿ ವಿಜ್ಞಾನಿ ಬಿ.ಒ. ಮಲ್ಲಿಕಾರ್ಜುನ್ ಮಾತನಾಡಿ, ಒಂದೇ ಬೆಳೆಯನ್ನು ಹಾಕುವುದರ ಬದಲು ಬಹುಬೆಳೆ ಬೆಳೆಯುವುದರಿಂದ ಒಂದು ಬೆಳೆ ಕೈಕೊಟ್ಟರೂ ಇನ್ನೊಂದು ಬೆಳೆ ಕೈಹಿಡಿಯುವುದು. ಬಿತ್ತನೆ ಮಾಡುವುದಕ್ಕೂ ಮೊದಲು ಬೀಜೋಪಚಾರ ತಪ್ಪದೆ ಮಾಡಬೇಕು ಎಂದರು.
ಜೈವಿಕ ವಸ್ತುಗಳಿಂದ ಬೀಜೋಪಚಾರ ಮಾಡುವುದರಿಂದ ಖರ್ಚು ಕಡಿಮೆ, ಲಾಭ ಹೆಚ್ಚು ಹಾಗೂ ಭೂಮಿಯ ಫಲವತ್ತತೆ ಕೂಡ ಹೆಚ್ಚಾಗುವುದು ಎಂದರು.
ಕಳೆನಾಶಕಗಳ ಬಳಕೆ ಕಡಿಮೆ ಮಾಡಬೇಕು. ಇವುಗಳ ಬಳಕೆಯಿಂದ ಬೆಳೆಗೆ ಹಾನಿ ಸಂಭವಿಸುವ ಸಾಧ್ಯತೆ ಹೆಚ್ಚು ಇರುವುದು. ಕಳೆ ನಾಶಕ ಬದಲು ಕಳೆಯನ್ನು ಸಂಪ್ರದಾಯಿಕವಾಗಿ ತೆಗೆಯುವುದೇ ಒಳ್ಳೆಯದು ಎಂದರು.
ಸಹಾಯಕ ಕೃಷಿ ನಿರ್ದೇಶಕ ಆರ್. ತಿಪ್ಪೇಸ್ವಾಮಿ ಮಾತನಾಡಿ, ಕೃಷಿ ಸಂಶೋಧನ ಕೇಂದ್ರಗಳಿಗೆ ಹೋಗಿ ತರಬೇತಿ ಪಡೆದುಕೊಳ್ಳುವುದಕ್ಕೆ ರೈತರಿಗೆ ತೊಂದರೆಯಾಗುವುದು ಎಂಬ ಕಾರಣಕ್ಕೆ ರೈತರು ಇರುವ ಕಡೆಗೆ ವಿಜ್ಞಾನಿಗಳು ಕರೆಸಿ ತರಬೇತಿ ಆಯೋಜಿಸಲಾಗಿದೆ ಎಂದರು.
ವಿಜ್ಞಾನಿಗಳಾದ ಡಾ. ಮಲ್ಲೇಶಪ್ಪ, ಡಾ. ಪ್ರಸನ್ನಕುಮಾರ್, ಜಿಲ್ಲಾ ಕೃಷಿ ತರಬೇತಿ ಕೇಂದ್ರ ಉಪ ನಿರ್ದೇಶಕಿ ಆಶಾ, ಎಪಿಎಂಸಿ ಉಪಾಧ್ಯಕ್ಷ ಪಿ.ಕೋಟ್ರಪ್ಪ, ಕೃಷಿ ಇಲಾಖೆಯ ಅಧಿಕಾರಿಗಳು, ಅನವುಗಾರರು ಹಾಗೂ ರೈತರು ಪಾಲ್ಗೊಂಡಿದ್ದರು.
Advertisement