ಹರಪನಹಳ್ಳಿ: ಕಾಲೇಜಿನ ಉಪನ್ಯಾಸಕರನ್ನು ಬೇರೆಡೆ ವರ್ಗಾವಣೆಗೊಳಿಸಿರುವ ಸಿರಿಗೆರೆ ತರಳಬಾಳು ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಕ್ರಮ ವಿರೋಧಿಸಿ ಎಸ್‌ಎಫ್‌ಐ ಸಂಘಟನೆ ನೇತೃತ್ವದಲ್ಲಿ ಎಚ್‌ಪಿಎಸ್ ಕಾಲೇಜು ವಿದ್ಯಾರ್ಥಿಗಳು ಬುಧವಾರ ದಿಢೀರ್ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ಬೆಳಗ್ಗೆ ಕಾಲೇಜು ಆರಂಭವಾಗುತ್ತಿದ್ದಂತಿಯೇ ತರಗತಿ ಬಹಿಷ್ಕರಿಸಿದ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಕಾಲೇಜು ಬಳಿ ಪ್ರತಿಭಟನೆ ನಡೆಸಿದರು. ನಂತರ ಮಿನಿ ವಿಧಾನಸೌಧಕ್ಕೆ ತೆರಳಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಎಸ್‌ಎಫ್‌ಐ ಅಧ್ಯಕ್ಷ ಕೆ.ಚವ್ಹಾಣ್ ಕುಮಾರ್ ಮಾತನಾಡಿ, ಶೈಕ್ಷಣಿಕ ವರ್ಷ ಆರಂಭಕ್ಕೂ ಮುನ್ನ ಕಾಲೇಜಿನ ಬೋಧಕ ಸಿಬ್ಬಂದಿಯನ್ನು ಆಡಳಿತ ಮಂಡಳಿ ಬೇಕಾಬಿಟ್ಟಿಯಾಗಿ ವರ್ಗಾವಣೆ ಮಾಡಿದೆ. ಈಗಾಗಲೇ ಕಾಲೇಜು ಆರಂಭವಾಗಿ ಎರಡು ತಿಂಗಳು ಕಳೆದಿದೆ. ಇನ್ನೇನು ತಿಂಗಳ ಅಂತ್ಯಕ್ಕೆ ಮಧ್ಯವಾರ್ಷಿಕ ಪರೀಕ್ಷೆಗಳು ಬರಲಿದ್ದು, ಇಂಥ ಸಂದರ್ಭದಲ್ಲಿ ಬೋಧಕ ಸಿಬ್ಬಂದಿ ಏಕಾಏಕಿ ವರ್ಗಾವಣೆ ಮಾಡುವ ಮೂಲಕ ಸಂಸ್ಥೆ ಆಡಳಿತ ಮಂಡಳಿ ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿದೆ ಎಂದು ದೂರಿದರು.
ಕಾಲೇಜಿನ ವಾಣಿಜ್ಯ ವಿಭಾಗದ ವಾಣಿಜ್ಯಶಾಸ್ತ್ರ ಉಪನ್ಯಾಸ ಅಹಮ್ಮದ್ ಸಾಹೇಬ್ ಸೇರಿದಂತೆ ಈಗಾಗಲೇ ಉಪನ್ಯಾಸಕರನ್ನು ಆಡಳಿತ ಮಂಡಳಿ ಬೇರೆ ಸ್ಥಳಗಳಿಗೆ ವರ್ಗಾವಣೆ ಮಾಡಿದೆ. ಇನ್ನೂ ಕೆಲವರು ವರ್ಗಾವಣೆ ಭೀತಿ ಎದುರಿಸುತ್ತಿದ್ದಾರೆ. ಕೂಡಲೇ ವರ್ಗಾವಣೆ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ಸಂಘಟನೆ ಮುಖಂಡ ಈಶ್ವರನಾಯ್ಕ, ಡಿವೈಎಫ್‌ಐ ಮುಖಂಡ ಬೇವಿನಹಳ್ಳಿ ವೆಂಕಟೇಶ್, ಮುಖಂಡರಾದ
ಹನುಮಂತ, ಮಂಜುನಾಥ, ಕರಿಬಸಪ್ಪ, ರಾಘವೇಂದ್ರ, ತಾಸೀನ್, ನರೇಂದ್ರ, ವಾಸೀಮ್, ವಿಜಯ್, ಪರಮೇಶ್, ಲತಾ, ಗೌತಮಿ, ಸುಜಾತಾ, ಮೀನಾಕ್ಷಿ, ತನುಜಾ, ಡಿ. ಗಂಗಮ್ಮ, ಲಕ್ಷ್ಮೀ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Advertisement