ದಾವಣಗೆರೆ: ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಪೂರೈಸುವುದು ಅತ್ಯಂತ ಅವೈಜ್ಞಾನಿಕ ತೀರ್ಮಾನವಾಗಿದ್ದು, ಇದರಿಂದ ಕೊಳವೆ ಬಾವಿಗಳ ಸಂಖ್ಯೆಯು ಮಿತಿ ಮೀರುತ್ತಿರುವುದರ ಜತೆಗೆ ನೀರಿನ ದುರ್ಬಳಕೆಯೂ ಹೆಚ್ಚುತ್ತಿರುವುದನ್ನು ಸರಕಾರ ಗಂಭೀರವಾಗಿ ಪರಿಗಣಿಸಲಿ ಎಂದು ಮಳೆ ಕೊಯ್ಲು ತಜ್ಞ ಡಾ. ಎಚ್. ರಮೇಶ್ ತಿಳಿಸಿದರು.
ನಗರದ ಯುಬಿಡಿಟಿ ಕಾಲೇಜಿನಲ್ಲಿ ಇನ್ಸ್‌ಟಿಟ್ಯೂಟ್ ಆಫ್ ಎಂಜಿನಿಯರ್ಸ್ (ಇಂಡಿಯಾ) ಏರ್ಪಡಿಸಿದ್ದ ಮಳೆ ಕೊಯ್ಲು ಹಾಗೂ ಅಂತರ್ಜಲ ಮರುಪೂರಣ ಕಾರ್ಯಾಗಾರದಲ್ಲಿ ಮಾತನಾಡಿದರು.
ಉಚಿತ ವಿದ್ಯುತ್ ಬಳಸಿಕೊಳ್ಳುವ ರೈತರಿಗೆ ನೀರಿನ ಮಹತ್ವ ಅರ್ಥ ಮಾಡಿಕೊಳ್ಳದ ಕಾರಣಕ್ಕೆ ನೀರು ವ್ಯರ್ಥವಾಗುತ್ತಿದೆ. ಸಂಪನ್ಮೂಲದ ದುರ್ಬಳಕೆಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸರಕಾರವೇ ಕಾರಣವಾಗಿದೆ. ನೀರಿನ ಮಹತ್ವ ಅರಿತು ಇನ್ನಾದರೂ ಸರಕಾರ ಅಪ್ರಾಯೋಗಿಕವಾದ ತನ್ನ ನಿರ್ಧಾರ ಕೈಬಿಡಬೇಕು. ಜತೆಗೆ ನೀರಿನ ನಿರ್ವಹಣೆ, ಮಿತ ಬಳಕೆ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದರು.
ಆದ್ಯತೆ ನೀಡಲಿ: ಮುಂಗಾರು ಮಳೆ ಕೈಕೊಟ್ಟಿದ್ದರಿಂದ ನಗರ, ಪಟ್ಟಣ, ಗ್ರಾಮೀಣ ಭಾಗ ಹೀಗೆ ಪ್ರತಿಯೊಬ್ಬರೂ ನೀರಿನ ಸಮಸ್ಯೆ ಎದುರಿಸಬೇಕಾಯಿತು. ಜಾನುವಾರುಗಳಿಗೂ ಕುಡಿಯಲು ನೀರು ಸಿಗದ ದುಸ್ಥಿತಿ ಬಂದೊದಗಿತ್ತು. ಅದರಲ್ಲೂ ಉತ್ತರ ಕರ್ನಾಟಕ, ಹೈದರಾಬಾದ್- ಕರ್ನಾಟಕ, ಬಯಲು ಸೀಮೆಯಂತಹ ಪ್ರದೇಶದಲ್ಲಿ ಕಿಮೀಗಟ್ಟಲೆ ದೂರ ಹೋಗಿ ನೀರನ್ನು ತರಬೇಕಾದ ಪರಿಸ್ಥಿತಿ ಇದ್ದು, ಅಂತರ್ಜಲ ಮರುಪೂರಣಕ್ಕೆ ಸರಕಾರವಷ್ಟೇ ಅಲ್ಲ, ಸಮುದಾಯವೂ ಪ್ರಥಮಾದ್ಯತೆ ಮೇಲೆ ಕೈಜೋಡಿಸಬೇಕು ಎಂದರು.
ನಗರೀಕರಣ, ಕೃಷಿ ಚಟುವಟಿಕೆಗಳ ಹೆಚ್ಚಳವೂ ಅಂತರ್ಜಲದ ಮೇಲೆ ಹೆಚ್ಚು ಅವಲಂಬಿತವಾಗಿದೆ. ಪರಿಣಾಮ ಕೊಳವೆಬಾವಿ ಕೊರೆಸಲು ಜಿದ್ದಾಜಿದ್ದಿಗೆ ಬಿದ್ದವರಂತೆ ಭೂಮಿಯ ಒಡಲನ್ನು ಸೀಳಿ, ನೀರನ್ನು ಬಗೆಯಲಾಗುತ್ತಿದೆ. ಕೊಳವೆಬಾವಿ ಕೊರೆಸಲು ಇರುವ ಆಸಕ್ತಿಯನ್ನು ಅಂತರ್ಜಲ ಮರುಪೂರಣಕ್ಕೆ ಆಸಕ್ತಿ ತೋರುತ್ತಿಲ್ಲ. ಕುಸಿಯುತ್ತಿರುವ ಅಂತರ್ಜಲ ಮಟ್ಟದ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಬೇಕು. ಚೆನ್ನೈ ಮಾದರಿಯಲ್ಲಿ ರಾಜ್ಯದ ಎಲ್ಲ ನಗರ, ಪಟ್ಟಣದಲ್ಲಿ ಮಳೆ ಕೊಯ್ಲು ಪದ್ಧತಿ ಕಡ್ಡಾಯಗೊಳಿಸಲು ಸರ್ಕಾರಕ್ಕೆ ಒತ್ತಾಯಿಸಿದರು.
ಯುಬಿಡಿಟಿ ಕಾಲೇಜು ಪ್ರಾಚಾರ್ಯ ಡಾ. ಶಿವಕುಮಾರ ಬಿ. ದಂಡಗಿ ಅಧ್ಯಕ್ಷತೆ ವಹಿಸಿದ್ದರು.
ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಇಂಡಿಯಾದ ಸ್ಥಳೀಯ ಕೇಂದ್ರದ ಅಧ್ಯಕ್ಷ ಪ್ರೊ. ಅಬ್ದುಲ್ ಬುಡೇನ್, ಡಾ. ಅಪ್ರಮೇಯ, ಡಾ. ಬಿ.ಎಂ. ಮಂಜುನಾಥ, ನಾಗರಾಜ, ಕೃಷ್ಣೇಗೌಡ ಇತರರು ಇದ್ದರು.
Advertisement