ಹರಿಹರ: ಬಾಲಕಿ ಅಥವಾ ಮಹಿಳೆಯರೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುವ ಪುಂಡರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನಗರ ಪೊಲೀಸ್ ಠಾಣೆಯ ಪಿಎಸ್‌ಐ ಎಂ.ವಿ. ಮೇಘರಾಜ್ ತಿಳಿಸಿದರು.
ನಗರದ ಎಸ್‌ಜೆವಿಪಿ ಸ್ವಾಯತ್ತ ಕಾಲೇಜಿನ ಮಹಿಳಾ ವೇದಿಕೆ ಅಡಿಯಲ್ಲಿ ನಡೆದ ಮಹಿಳಾ ದೌರ್ಜನ್ಯ ತಡೆ ಹಾಗೂ ಸುರಕ್ಷೆ ಅಭಿಯಾನದ ಬಗ್ಗೆ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಾಲಾ- ಕಾಲೇಜುಗಳು ಸೇರಿದಂತೆ ಇನ್ನಿತರ ಸ್ಥಳಗಳಿಗೆ ತೆರಳುವಾಗ ಕಿಡಿಗೇಡಿಗಳು ಅನವಶ್ಯಕವಾಗಿ ಮಾತನಾಡಲು ಪ್ರಯತ್ನಿಸುವುದು, ಸತಾಯಿಸುವುದು ಸೇರಿದಂತೆ ಇನ್ನಿತರ ಚೇಷ್ಠೆ ಮಾಡುತ್ತಿದ್ದರೆ, ಅವರ ಮುಖಚರ್ಯ ಹಾಗೂ ಅವರ ವಾಹನಗಳ ಸಂಖ್ಯೆ ನೆನಪಿಟ್ಟುಕೊಳ್ಳಿ. ಕೂಡಲೇ ಸಮೀಪದ ಪೊಲೀಸ್ ಠಾಣೆಗೆ ನೇರವಾಗಿ ಅಥವಾ ಕರೆ ಮಾಡುವ ಮೂಲಕ ಮಾಹಿತಿ ನೀಡಿ ಎಂದು ತಿಳಿಸಿದರು.
ಇತ್ತೀಚೆಗೆ ಜಾರಿಗೊಂಡಿರುವ ಪೋಸ್ಕೋ ಕಾಯ್ದೆ, ಮಹಿಳಾ ಮತ್ತು ಮಕ್ಕಳ ದೌರ್ಜನ್ಯದ ಎಲ್ಲಾ ದೂರುಗಳಿಗೂ ಅನ್ವಯವಾಗುತ್ತದೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಇ. ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು.
ಎಸ್‌ಜೆವಿಪಿ ಪೀಠದ ಉಪಾಧ್ಯಕ್ಷ ಡಿ.ಎಂ. ಹಾಲಸ್ವಾಮಿ ಮಹಿಳಾ ವೇದಿಕೆ ಅಧ್ಯಕ್ಷೆ ರೇಣುಕಾ ಸಂಕನಗೌಡ, ಐಕ್ಯೂಎಸಿ ಸದಸ್ಯ ಎ.ಎಸ್. ಹಿತ್ತಲಮನಿ, ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.
Advertisement