ದಾವಣಗೆರೆ: ನಗರದಲ್ಲಿ ಬಲಿಗಾಗಿ ಬಾಯಿ ತೆರೆದು ಕುಳಿತಿದ್ದ ಕೊಳವೆ ಬಾವಿಗಳನ್ನು ಮುಚ್ಚಿಸುವ ಕಾರ್ಯಕ್ಕೆ ಪಾಲಿಕೆ ಆಡಳಿತ ಯಂತ್ರ ಕೊನೆಗೂ ಗಟ್ಟಿ ಮನಸ್ಸು ಮಾಡಿದ್ದು, ವಿವಿಧೆಡೆ ಇದ್ದ ತೆರೆದ ಕೊಳವೆ ಬಾವಿಗಳ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ಮಾಹಿತಿ ನೀಡಲು ಸಹಾಯವಾಣಿಯನ್ನೂ ಇದೀಗ ಸ್ಥಾಪಿಸಿದೆ.
ಯಲ್ಲಮ್ಮ ನಗರದಲ್ಲಿ 14 ವರ್ಷದ ಹಿಂದೆ ಬಾಲಕ ಕರಿಯ ತೆರೆದ ಬೋರ್‌ಗೆ ಆಹಾರವಾದ ನಂತರ ದೇಶದ ವಿವಿಧೆಡೆ ಇಂತಹ ಹಲವಾರು ಪ್ರಕರಣ ವರದಿಯಾಗುತ್ತಿವೆ. ಮೊನ್ನೆಯಷ್ಟೇ ಬಾಗಲಕೋಟೆ ಜಿಲ್ಲೆ ಸೂಳಿಕೇರಿಯಲ್ಲಿ ತಿಮ್ಮಣ್ಣ ಕೊಳವೆ ಬಾವಿಗೆ ಬಿದ್ದ ಹಿನ್ನೆಲೆಯಲ್ಲಿ ಮಹಾನಗರದ ವಿವಿಧೆಡೆ ತೆರೆದು ನಿಂತಿದ್ದ ಕೊಳವೆ ಬಾವಿಗಳನ್ನು ಮುಚ್ಚಿಸುವಂತೆ ಸಾರ್ವಜನಿಕರಿಂದ ತೀವ್ರ ಒತ್ತಡ ಕೇಳಿ ಬಂದಿತ್ತು.
ಎಚ್ಚೆತ್ತ ಪಾಲಿಕೆ: ಶಾಲೆ ಸನಿಹ, ವಸತಿ ಪ್ರದೇಶದ ಬಳಿ, ಸಾರ್ವಜನಿಕ ರಸ್ತೆ ಬದಿಯಲ್ಲಿ ಹೀಗೆ ವಿವಿಧೆಡೆ ಹಲವಾರು ಕೊಳವೆಬಾವಿಗಳು ಅಮಾಯಕರ ಪ್ರಾಣ ಬಲಿಗಾಗಿ ಕಾದಿದ್ದ ಬಗ್ಗೆ 'ಕನ್ನಡಪ್ರಭ'ದಲ್ಲಿ ಬುಧವಾರ ವರದಿಯಾಗುತ್ತಿದ್ದಂತೆ ಎಚ್ಚೆತ್ತ ಪಾಲಿಕೆ ಆಡಳಿತ ತೆರೆದ ಕೊಳವೆ ಬಾವಿಗಳನ್ನು ಮುಚ್ಚಿಸುವ ಕಾರ್ಯಕ್ಕೆ ಮುಂದಾಗಿದೆ. ಸ್ವತಃ ಮೇಯರ್ ರೇಣುಕಾಬಾಯಿ ವೆಂಕಟೇಶನಾಯ್ಕ, ಉಪಮೇಯರ್ ಅಬ್ದುಲ್ ಲತೀಫ್, ಸ್ಥಾಯಿ ಸಮಿತಿ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಇತರೆ ಸದಸ್ಯರು ತೆರೆದ ಕೊಳವೆಬಾವಿಗಳನ್ನು ಮುಚ್ಚಿಸುವ ಕಾರ್ಯಕ್ಕೆ ಟೊಂಕ ಕಟ್ಟಿ ನಿಂತಿದ್ದಾರೆ.
ಇಲ್ಲಿನ ಭಗತ್‌ಸಿಂಗ್ ನಗರದ ಮುಖ್ಯರಸ್ತೆಯಲ್ಲಿ ಅಂಜುಂ ಶಾಲೆ ಗೋಡೆಗೆ ಹೊಂದಿಕೊಂಡಿರುವ ತೆರೆದ ಕೊಳವೆ ಬಾವಿ, ಎಂಸಿಸಿ ಬಿ ಬ್ಲಾಕ್ ಹಳೇ ಆರ್‌ಟಿಒ ಕಚೇರಿ ಬಳಿ ಆಂಜನೇಯ ಬಡಾವಣೆ ರಸ್ತೆ, ಎಂಸಿಸಿ ಎ ಬ್ಲಾಕ್‌ನ ಮಹಿಳಾ ನಿಲಯ ಬಳಿ, ಎಸ್ಪಿಎಸ್ ನಗರದ 2 ಕಡೆ, ಎಸ್ಸೆಸ್ ಬಡಾವಣೆ ಒಳಾಂಗಣ ಕ್ರೀಡಾಂಗಣದ ಬಳಿ ಹೀಗೆ ಅನೇಕ ಕಡೆ ತೆರೆದ ಕೊಳವೆ ಬಾವಿ ಇದ್ದು, ಅವುಗಳನ್ನು ಮುಚ್ಚುವ ಕಾರ್ಯಕ್ಕೆ ಪಾಲಿಕೆ ಸಜ್ಜಾಗಿದೆ.
ಸಹಾಯವಾಣಿ: ನಗರದ 41 ವಾರ್ಡ್‌ಗಳ ವ್ಯಾಪ್ತಿಯಲ್ಲಿ ಎಲ್ಲಿಯೇ ತೆರೆದ ಕೊಳವೆಬಾವಿ ಇದ್ದರೆ ಈ ಬಗ್ಗೆ ಸಹಾಯವಾಣಿ ಸಂಖ್ಯೆ-234444ಗೆ ಸಾರ್ವಜನಿಕರು ಮಾಹಿತಿ ನೀಡಬಹುದು. ಕರೆ ಬಂದ ಕೆಲವೇ ಗಂಟೆಗಳಲ್ಲಿ ಬಂದ್ ಮಾಡಲಾಗುವುದು ಎಂದು ಮೇಯರ್ ರೇಣುಕಾಬಾಯಿ ಹೇಳಿದರು.
ತಕ್ಷಣವೇ ನಗರದಲ್ಲಿ ಅನುಪಯುಕ್ತ, ತೆರೆದ ಕೊಳವೆ ಬಾವಿ, ಬಳಸದ ಬೋರ್‌ವೆಲ್‌ಗಳನ್ನು ತಕ್ಷಣವೇ ಮುಚ್ಚಿಸಲು ಕಟ್ಟುನಿಟ್ಟಿನ ಸೂಚನೆಯನ್ನು ಪಾಲಿಕೆ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳಿಗೆ ನೀಡಲಾಗಿದೆ.
ಸಹಾಯವಾಣಿಗೆ ಕರೆ ಬಂದ ಮಾಹಿತಿ, ವಿಳಾಸ, ಮಾಹಿತಿದಾರರ ವಿವರವನ್ನೂ ಕಡತದಲ್ಲಿ ದಾಖಲಿಸಿ, ತೆರೆದ ಕೊಳವೆ ಬಾವಿ ಮುಚ್ಚಿದ ನಂತರ ಅಂತಹ ಮಾಹಿತಿದಾರರಿಗೆ ಬಂದ್ ಮಾಡಿದ ಬಗ್ಗೆ ತಿಳಿಸುವುದಕ್ಕೂ ವ್ಯವಸ್ಥೆ ಮಾಡಲಾಗಿದೆ ಎನ್ನುತ್ತಾರೆ ಮೇಯರ್.
ಎಇಇ ನಾಗರಾಜ, ಕಾಂಗ್ರೆಸ್ ಮುಖಂಡ ವೆಂಕಟೇಶನಾಯ್ಕ, ಹಲವು ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.
Advertisement