ಹರಿಹರ: ಹಳೆಗನ್ನಡ ಸಾಹಿತ್ಯವನ್ನು ಸುಲಭವಾಗಿ ಅರ್ಥವಾಗುವಂತೆ ಬೋಧಿಸಲು ಗಮಕ ಸುಲಭ ಸಾಧನವಾಗಿದೆ ಎಂದು ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ ಅಧ್ಯಕ್ಷೆ ಗಂಗಮ್ಮ ಕೇಶವಮೂರ್ತಿ ತಿಳಿಸಿದರು.
ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ರಾಘವೇಂದ್ರಸ್ವಾಮಿ ಬೃಂದಾವನ ಟ್ರಸ್ಟ್ ಆಶ್ರಯದಲ್ಲಿ ಪ್ರೌಢ ಶಾಲಾ ಕನ್ನಡ ಶಿಕ್ಷಕರಿಗಾಗಿ ನಡೆದ ಗಮಕ, ವಚನ ಹಾಗೂ ಹರಿದಾಸ ಕೀರ್ತನೆ ಕುರಿತ ರಾಜ್ಯಮಟ್ಟದ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಳೆಗನ್ನಡ ಪದ್ಯ, ಕೀರ್ತನೆ, ಸಾಂಗತ್ಯ ಹಾಗೂ ವಚನಗಳು ಪ್ರತಿಯೊಬ್ಬರಿಗೂ ಅರ್ಥವಾಗುವಂತೆ ಸರಳ ಬೋಧನೆಗೆ ಗಮಕ ಕಲೆ ಸಹಕಾರಿಯಾಗಿದೆ. ಈ ಕಲೆಯಲ್ಲಿ ಕಾವ್ಯ ವಾಚನದ ಜತೆಗಿನ ವ್ಯಾಖ್ಯಾನ, ಹಾಲಿನೊಂದಿಗೆ ಬೆರೆತ ಜೇನಿನಂತೆ ಸಿಹಿಯ ಖನಿಯಾಗಿರುತ್ತದೆ. ಕಾವ್ಯದಲ್ಲಿ ಇರುವ ವಿವಿಧ ಕ್ಲಿಷ್ಟಕರ ಪ್ರಸಂಗಗಳನ್ನು ಗಮಕದ ಮೂಲಕ ಸರಳ ಮತ್ತು ರಸವತ್ತಾಗಿ ವ್ಯಾಖ್ಯಾನಿಸಬಹುದು. ಪ್ರೌಢ ಶಾಲಾ ಕನ್ನಡ ಶಿಕ್ಷಕರು ಹಳೆಗನ್ನಡ ಸಾಹಿತ್ಯವನ್ನು ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ಬೋಧಿಸಲು ಗಮಕ ಕಲೆಯನ್ನು ಅಭ್ಯಾಸ ಮಾಡಬೇಕಾದ ಅತ್ಯವಶ್ಯಕತೆ ಇದೆ ಎಂದರು.
ಎಸ್‌ಜೆವಿಪಿ ಕಾಲೇಜಿನ ನಿವೃತ್ತ ಕನ್ನಡ ಪ್ರಾಧ್ಯಾಪಕ ಸಿ.ವಿ. ಪಾಟೀಲ್ ಮಾತನಾಡಿ, ಸಾಹಿತ್ಯ ಮತ್ತು ಸಂಗೀತದ ಸಮನ್ವಯವೇ ಗಮಕ. ಗಮಕದಂಥ ವಿಶಿಷ್ಟ ಕಲೆ ಮೈಗೂಡಿಸಿಕೊಂಡು ಬೆಳೆಯುತ್ತಿರುವ ಕನ್ನಡ ಭಾಷೆಗೆ ಸಾವಿನ ಭಯವಿಲ್ಲ ಎಂದರು.
2 ದಿನಗಳ ಕಾಲ ನಡೆದ ಶಿಬಿರದಲ್ಲಿ ಚಾಮರಾಜನಗರ, ಬಿಜಾಪುರ, ಬೀದರ್ ಸೇರಿದಂತೆ 14 ಜಿಲ್ಲೆಗಳ 56 ಶಿಬಿರಾರ್ಥಿಗಳು ಭಾಗವಹಿಸಿದ್ದರು. ಶಿಬಿರಾರ್ಥಿಗಳಿಗೆ 8, 9 ಮತ್ತು 10ನೇ ತರಗತಿಯ ಕನ್ನಡ ಭಾಷಾ ಪಠ್ಯದ ಹಳೆಗನ್ನಡ ಪದ್ಯ, ಕೀರ್ತನೆ, ಸಾಂಗತ್ಯ ಹಾಗೂ ವಚನಗಳನ್ನು ಗಮಕದ ಮೂಲಕ ಬೋಧಿಸುವ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡಿದರು.
ಗಮಕಿಗಳಾದ ಪೇಟೆ ರಾಮಚಂದ್ರರಾವ್ ಮತ್ತು ಚಂದ್ರಲಾ ಸುರೇಶ್ ನಾಯ್ಕ ಅವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಎಚ್. ಶಿವರುದ್ರಪ್ಪ, ಕನ್ನಡ ವಿಷಯ ಪರಿವೀಕ್ಷಕಿ ಡಿ. ಲಕ್ಷ್ಮೀದೇವಿ, ಎಂಕೆಇಟಿ ಶಾಲೆಯ ರಿಜಿಸ್ಟ್ರಾರ್ ಡಾ. ಬಿ.ಟಿ. ಅಚ್ಯುತ್ ಉಪಸ್ಥಿತರಿದ್ದರು. ಸುಷ್ಮಾ-ಸಂಗಡಿಗರು ಪ್ರಾರ್ಥಿಸಿ, ಅಕಾಡೆಮಿ ರಿಜಿಸ್ಟ್ರಾರ್ ಟಿ.ಜಿ. ನರಸಿಂಹಮೂರ್ತಿ ಸ್ವಾಗತಿಸಿ, ಎಸ್.ಎಚ್.ಹೂಗಾರ್ ಮತ್ತು ಕೆ.ಎನ್. ಸುಜಾತಾ ನಿರೂಪಿಸಿದರು.
--
Advertisement