ಕೊಡಕ್ಕೆ 10, ಟ್ಯಾಂಕರ್‌ಗೆ 1000!!

Updated on: 

ವಿಶೇಷ ವರದಿ
ದಾವಣಗೆರೆ: ನಂಬಿದ್ರೆ ನಂಬಿ ಬಿಟ್ಟರೆ ಬಿಡಿ. ದಾವಣಗೆರೆ ನಗರದಲ್ಲಿ ಖಾಸಗಿ ಟ್ಯಾಂಕರ್‌ನಲ್ಲಿ ಪೂರೈಸುವ ನೀರಿಗೆ ಕೊಡಕ್ಕೆ 10, ವಿವಿಧ ಕಂಪನಿಗಳ 20 ಲೀಟರ್ ಕ್ಯಾನ್ ನೀರಿಗೆ 40-50!
ಇನ್ನು ಪಾಲಿಕೆ ಟ್ಯಾಂಕರ್ ಒದಗಿಸುವ ಉಚಿತ ನೀರು ಪಡೆಯುವುದು ನಿಮ್ಮ ಸಾಮರ್ಥ್ಯ, ಶಕ್ತಿ, ಪ್ರಭಾವಕ್ಕೆ ಬಿಟ್ಟಿದ್ದು.
ಕಳೆದ ಕೆಲ ದಿನಗಳಿಂದ ದಾವಣಗೆರೆ ಮಹಾ ಜನತೆ ಕುಡಿಯುವ ನೀರು, ದಿನಬಳಕೆ ನೀರಿಗಾಗಿ ಪಡುತ್ತಿರುವ ಪಡಿಪಾಟಲು ಹೇಳತೀರದಾಗಿದೆ.
41 ವಾರ್ಡ್ ಪೈಕಿ ಯಾವೊಂದು ವಾರ್ಡ್ ಜನತೆ ತಮ್ಮ ವಾರ್ಡ್‌ಗೆ ಸಮರ್ಪಕವಾಗಿ ನೀರು ಬರುತ್ತದೆಂದು ಹೇಳುವುದೇ ಇಲ್ಲದಂತಹ ಸ್ಥಿತಿ ಇಲ್ಲಿದೆ. ಎಲ್ಲಾ 41 ವಾರ್ಡ್ ಸದಸ್ಯರ ಪೈಕಿ ಬಹುತೇಕರು ತಮ್ಮ ವಾರ್ಡ್‌ಗೆ ನೀರಿನ ಬರ, ಕೊರತೆಯೇ ಇಲ್ಲ ಎಂಬುದಾಗಿ ಹೇಳುವಷ್ಟು ಧೈರ್ಯವನ್ನೂ ತೋರುವುದಿಲ್ಲ. ಕೆಲ ದಿನಗಳಿಂದ ಮಳೆ ಕೈಕೊಟ್ಟಿರುವುದು, ಭದ್ರಾ ನಾಲೆಯಲ್ಲಿ ನೀರು ನಿಲ್ಲಿಸಿರುವುದು, ಹೂಳು ತೆಗೆಯಲೆಂದು ಕೆರೆ ತುಂಬಿಸಿಕೊಳ್ಳದ ಪರಿಣಾಮ ಅದಕ್ಕೆ ಜನತೆ ಈಗ ಬೆಲೆ ತೆರಬೇಕಾಗಿದೆ.
ಕೆಲ ತಿಂಗಳಿನಿಂದ ನೀರಿನ ಸಮಸ್ಯೆ ಕಾಡುತ್ತಿದ್ದು, ಇದೀಗ ತೀವ್ರ ಸ್ವರೂಪ ಪಡೆಯುತ್ತಿದೆ. ಪಾಲಿಕೆಯ 5 ಟ್ಯಾಂಕರ್‌ಗಳು ನಿತ್ಯ ಏಳೆಂಟು ಬಾರಿ ವಿವಿಧ ವಾರ್ಡ್‌ಗೆ ತೆರಳಿ, ಸಾರ್ವಜನಿಕರಿಗೆ ನೀರು ಪೂರೈಸುವ ಕಾರ್ಯದಲ್ಲಿ ಮಗ್ನವಾಗಿವೆ.
ಪಾಲಿಕೆ ಟ್ಯಾಂಕರ್‌ಗಳ ಜತೆಗೆ ಖಾಸಗಿ ಟ್ಯಾಂಕರ್‌ಗಳ ಮೂಲಕ ಪ್ರತಿ ಟ್ಯಾಂಕರ್‌ಗೆ 750- 1000 ವರೆಗೆ ದುಡ್ಡು ಕೊಟ್ಟು ನೀರು ಖರೀದಿಸುವ ಅನಿವಾರ್ಯತೆಗೆ ಜನ ಸಿಲುಕಿದ್ದಾರೆ. ಪಾಲಿಕೆ ನೀರು ಪೂರೈಸದ ಹಿನ್ನೆಲೆಯಲ್ಲಿ ಪಾಲಿಕೆ ಒದಗಿಸುತ್ತಿರುವ ಟ್ಯಾಂಕರ್ ನೀರು ಅವಲಂಬಿತರ ಸಂಖ್ಯೆ ಎಷ್ಟಿದೆಯೋ ಅದಕ್ಕೆ ಹಲವು ಪಟ್ಟು ಹೆಚ್ಚಿನ ಮಟ್ಟದಲ್ಲಿ ಖಾಸಗಿ ಟ್ಯಾಂಕರ್ ನಿಛರು ತರಿಸಿಕೊಳ್ಳುವವರೂ ಇದ್ದಾರೆ.
ಶ್ರೀಮಂತರು, ಉಳ್ಳವರು ತಮ್ಮ ಮನೆಗೆ ಬೋರ್‌ವೆಲ್ ಹೊಂದಿದ್ದರೆ, ಇಲ್ಲದವರು ಟ್ಯಾಂಕರ್ ನೀರಿಗೆ ಅವಲಂಬಿತರಾಗಿದ್ದಾರೆ.
ಬಡವರು, ಮಧ್ಯಮ ವರ್ಗ, ಶ್ರಮಿಕರು ಪಾಲಿಕೆ ಟ್ಯಾಂಕರ್ ನೀರಿಗೆ ಅವಲಂಬನೆಯಾಗಬೇಕಿದೆ. ಪಾಲಿಕೆ ಸದಸ್ಯರ ಪೈಕಿ ಬಾಯಿದ್ದವರು, ತಮ್ಮ ಅಧಿಕಾರದ ಮಹತ್ವ, ಪ್ರಭಾವದ ಬಗ್ಗೆ ಅರಿವಿದ್ದವರು ಅಧಿಕಾರಿಗಳಿಗೆ ದಬಾಯಿಸಿ, ತಮ್ಮ ವಾರ್ಡ್‌ಗೆ ಸಮರ್ಪಕವಾಗಿ ನೀರು ತರಿಸಿಕೊಂಡು, ಜನರಿಗೆ ಸದ್ಯಕ್ಕೆ ಪೂರೈಸುತ್ತಿದ್ದಾರೆ. ಆದರೆ, ಸಂಪನ್ನರು ಮಾತ್ರ ಕೆರೆಯಲ್ಲಿ ನೀರಿಲ್ಲವೆಂದು ಜಾರಿಕೊಳ್ಳುತ್ತಾ, ಜನರ ಬಾಯಿಗೆ ಆಹಾರವಾಗುತ್ತಿರುವುದೂ ಇಲ್ಲಿ ಸಾಮಾನ್ಯವಾಗಿದೆ.
ಹಿಂದುಳಿದ ಪ್ರದೇಶ, ಸ್ಲಂಗಳಲ್ಲಿ ಕೆಲವರು ತಾವೇ ಹಣ ಹೊಂದಿಸಿಕೊಂಡು ಟ್ಯಾಂಕರ್ ನೀರನ್ನು ತರಿಸಿಕೊಳ್ಳುತ್ತಿದ್ದಾರೆ. ಮಹಿಳೆಯರು, ಮಕ್ಕಳು, ವಯೋವೃದ್ಧರು, ಬಾಣಂತಿ, ಗರ್ಭಿಣಿಯರು ಹೀಗೆ ಪ್ರತಿಯೊಬ್ಬರೂ ಟ್ಯಾಂಕರ್ ನೀರು ಬಂದಾಗ ಕೊಡ, ಬಕೆಟ್, ಡ್ರಮ್ ಸಮೇತ ಸ್ಥಳಕ್ಕೆ ದೌಡಾಯಿಸುತ್ತಿದ್ದಾರೆ. ಕೆರೆ ನೀರು ಕೈಕೊಟ್ಟ ಪರ್ಯಾಯವಾಗಿ ಮಾರ್ಗವೆಂದು ಪಾಲಿಕೆ ಕೊರೆಸಿದ್ದ ಕೊಳವೆ ಬಾವಿಗಳು ಅಲ್ಲಲ್ಲಿ ಕೈಕೊಟ್ಟಿವೆ. ಕೆಲವು ಕಡೆ ಟ್ಯಾಂಕ್‌ಗೆ ತುಂಬಿ ಅಲ್ಲಿಂದ ಪೈಪ್‌ಲೈನ್ ಮೂಲಕ ನೀರೊದಗಿಸಲಾಗುತ್ತಿದೆ.
ಕೊಳವೆ ಬಾವಿ ನೀರಿನ ಸಂಪರ್ಕ, ಟ್ಯಾಂಕ್ ಇರುವ ಸಮೀಪದ ಮನೆಯವರಿಗೇನೋ ಅನುಕೂಲವಾಗುತ್ತದೆ. ಆದರೂ ಸಾಕಷ್ಟು ಜನರು ನೂರಾರು ಮೀಟರ್ ದೂರದವರೆಗೆ ಕೊಡ ಹೊತ್ತು ಸಾಗಬೇಕಾದ ಅನಿವಾರ್ಯತೆ ಇದೆ. ಪಾಲಿಕೆಯೇನೋ ನೀರಿನ ಕಂದಾಯವನ್ನು ಕಾಲಕಾಲಕ್ಕೆ ವಸೂಲಿ ಮಾಡುತ್ತದೆ. ಕರ ಪಾವತಿಸದವರ ಹೆಸರನ್ನು ಬೀದಿ ಬದಿಯಲ್ಲಿ ಫ್ಲೆಕ್ಸ್, ಬ್ಯಾನರ್‌ನಲ್ಲಿ ಹಾಕಿಸಿ, ವಸೂಲು ಮಾಡುವ ಕಾರ್ಯಕ್ಕೂ ಹಿಂದೆ ಬಿದ್ದಿಲ್ಲ. ತೆರಿಗೆ ವಸೂಲಿಗೆ ಶಂಖ ಊದಿ, ಹಲಗೆ ಬಾರಿಸಿದ್ದೂ ಆಯಿತು. ಈಗ ನೀರು ಪೂರೈಸುವಂತೆ ಪಾಲಿಕೆಗೆ ಯಾವ ರೀತಿ ಒತ್ತಾಯಿಸಬೇಕು ಎಂಬ ಪ್ರಶ್ನೆ ಅದೇ ಜನರನ್ನು ಕಾಡುತ್ತಿದೆ.
ಮಳೆ ಕೈಕೊಟ್ಟಿದ್ದು, ನೀರಿನ ಹಾಹಾಕಾರ ಉಲ್ಭಣಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಇನ್ನಾದರೂ ಪಾಲಿಕೆ ದೂರದೃಷ್ಟಿ ಹೊಂದುವ ಮೂಲಕ ನೀರಿನ ಸಮಸ್ಯೆ ತೀವ್ರವಾಗಿ ಕಾಡುವ ಮುನ್ನವೇ ನೀರು ಸಂಗ್ರಹಿಸುವ ಕಾರ್ಯಕ್ಕೆ ಮುಂದಾಗಬೇಕಿದೆ. ಇನ್ನಾದರೂ ಭದ್ರಾ ಕಾಡಾ ಸಮಿತಿ ಮೇಲೆ ಒತ್ತಡ ಹೇರಿ ಭದ್ರಾ ನಾಲೆಗೆ ನೀರು ಹರಿಸುವಂತೆ ಮಾಡಬೇಕಿದೆ. ಆದಷ್ಟು ಬೇಗ ಎರಡೂ ಕೆರೆ ತುಂಬಿಸಿಕೊಂಡು, ನಗರದ ನೀರಿನ ದಾಹ ತೀರಿಸುವ ಕಾರ್ಯಕ್ಕೆ ಸಜ್ಜಾಗಬೇಕಿದೆ ಎಂಬುದು ಜನರ ಒತ್ತಾಯವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com